ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ತೀವ್ರತೆ ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ಈಗಾಗಲೇ ಹಲವು ವರ್ಷಗಳಿಂದ ಎರಡೂ ರಾಷ್ಟ್ರಗಳ ಮಧ್ಯೆ ಇದ್ದ ಉದ್ವಿಗ್ನತೆಯು ಜೂ. 13ರಂದು ಇರಾನ್ನ ಸೇನಾ ನೆಲೆಗಳು ಮತ್ತು ತೈಲ ಉತ್ಪಾದನಾ ಘಟಕಗಳ ಮೇಲೆ ಇಸ್ರೇಲ್ ದಾಳಿ ಮಾಡುವುದರೊಂದಿಗೆ ಉಲ್ಬಣಗೊಂಡಿತು.
ಪ್ರತಿಯಾಗಿ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಮೇಲೆ ಇರಾನ್ ಕೂಡ ಕ್ಷಿಪಣಿಗಳ ಸುರಿಮಳೆಯನ್ನೇ ಸುರಿಸಿದೆ. ಎರಡೂ ಕಡೆ ಅಪಾರ ಆಸ್ತಿಪಾಸ್ತಿ ಹಾನಿ, ಪ್ರಾಣಹಾನಿ ಸಂಭವಿಸಿದೆ. ಮೂರು ದಿನ ಕಳೆದರೂ ಈ ಸಂಘರ್ಷ ಶಮನವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಎರಡೂ ರಾಷ್ಟ್ರಗಳ ಮುಖ್ಯಸ್ಥರು ಪರಸ್ಪರರ ಮೇಲೆ ಸೇಡು ತೀರಿಸಿಕೊಳ್ಳುವ ಮಾತುಗಳನ್ನು ಈಗಲೂ ಆಡುತ್ತಿದ್ದಾರೆ. ಕ್ಷಿಪಣಿ ದಾಳಿಗಳು ನಿಲ್ಲುತ್ತಲೇ ಇಲ್ಲ. ಇದರಿಂದ ಈ ಎರಡು ರಾಷ್ಟ್ರಗಳ ಜನರ ಮೇಲೆ ಮಾತ್ರವಲ್ಲ, ಇಡೀ ವಿಶ್ವದ ಮೇಲೆ ಗಂಭೀರ ಪರಿಣಾಮ ಆಗತೊಡಗಿದೆ.
ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಪೆಟ್ರೋಲ್, ಡೀಸೆಲ್ನಂತಹ ಇಂಧನಗಳ ಬೆಲೆ ಏರಿಕೆಯಾಗಿ, ಹಣದುಬ್ಬರ ತೀವ್ರಗೊಂಡು ಜನರ ದೈನಂದಿನ ಬದುಕು ಕಷ್ಟಕರವಾಗುವ ಸಾಧ್ಯತೆ ದಟ್ಟವಾಗಿದೆ.
ಮೂರ್ನಾಲ್ಕು ದಿನಗಳ ಸಂಘರ್ಷದಿಂದ ಇಷ್ಟೊಂದು ದುಷ್ಪರಿಣಾಮ ಉಂಟಾಗಿದೆ ಎಂದ ಮೇಲೆ, ಈ ಘರ್ಷಣೆ ದೀರ್ಘಕಾಲ ಮುಂದುವರಿದರೆ ಪರಿಸ್ಥಿತಿ ಏನಾಗಬಹುದು? ಇರಾನ್ ಮತ್ತು ಇಸ್ರೇಲ್ನ ಆಡಳಿತಗಾರರ ಹಠಮಾರಿ ನಿಲುವು ಈ ಸಂಘರ್ಷವನ್ನು ಪೂರ್ಣ ಪ್ರಮಾಣದ ಯುದ್ಧವನ್ನಾಗಿ ಪರಿವರ್ತಿಸಿದರೂ ಆಶ್ಚರ್ಯವಿಲ್ಲ. ಕೆಲವರಂತೂ ಇದು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಯುದ್ಧಗಳಿಂದ ಮಾನವ ಕುಲಕ್ಕೆ ಒಳಿತಾಗಲಾರದು ಎಂಬುದು ಇತಿಹಾಸದಿಂದ ಸಾಬೀತಾಗಿದೆ.
ಇಂತಹ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಮುದಾಯ, ವಿಶೇಷವಾಗಿ ತಟಸ್ಥ ರಾಷ್ಟ್ರಗಳು, ಈ ಉದ್ವಿಗ್ನತೆಯನ್ನು ಶಮನಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜತಾಂತ್ರಿಕ ಮಾತುಕತೆ, ಮಧ್ಯಸ್ಥಿಕೆಯ ಮೂಲಕ ಶಾಂತಿಯ ಮಾರ್ಗವನ್ನು ಕಂಡುಕೊಳ್ಳುವುದೊಂದೇ ಇದಕ್ಕಿರುವ ಪರಿಹಾರ. ಯುದ್ಧದ ಬದಲಿಗೆ ಸಂಧಾನಕ್ಕೆ ಒತ್ತು ನೀಡದಿದ್ದರೆ, ಜಗತ್ತು ಮತ್ತೊಂದು ಅಗ್ನಿಪರೀಕ್ಷೆಗೆ ಸಿದ್ಧವಾಗಬೇಕಾಗುತ್ತದೆ.
ಜಗತ್ತು ಇನ್ನೂ ಕೋವಿಡ್-19 ಹಾವಳಿಯಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿ ನಿಂದ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. 3ನೇ ಮಹಾಯುದ್ಧದಂತಹ ಮತ್ತೊಂದು ಗಂಭೀರ ಸಂಕಷ್ಟವನ್ನು ಎದುರಿಸಲು ಯಾವ ರಾಷ್ಟ್ರವೂ ಸಿದ್ಧವಿಲ್ಲ. ಆದ್ದರಿಂದ, ಇರಾನ್ ಮತ್ತು ಇಸ್ರೇಲ್ನ ನಾಯಕರು ತಮ್ಮ ದೇಶಗಳ ಜನರ ಒಳಿತಿಗಾಗಿ ಮಾತ್ರವಲ್ಲ, ಜಗತ್ತಿನ ಸ್ಥಿರತೆಗಾಗಿಯೂ ಶಾಂತಿಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದ ಒತ್ತಡವನ್ನು ಅಂತಾರಾಷ್ಟ್ರೀಯ ಮಟ್ಟದ ಸಂಘಟನೆಗಳು, ವಿವಿಧ ದೇಶಗಳು ಸೃಷ್ಟಿ ಮಾಡಬೇಕು. ಯುದ್ಧದ ಛಾಯೆಯಲ್ಲಿ ಬದುಕುವುದಕ್ಕಿಂತ ಶಾಂತಿಯಿಂದ ಸೌಹಾರ್ದದಿಂದ ಬದುಕುವುದೇ ಉತ್ತಮ ಎಂಬುದನ್ನು ಎಲ್ಲರೂ ಮನಗಾಣಬೇಕು.