ಸಾಗರದಲ್ಲಿ ಆಯೋಜಿಸಿದ್ದ ರವಿಕಿರಣಗಳ ಸಹ್ಯಾದ್ರಿ ಸಂಗಮ ಕವಿಗೋಷ್ಠಿ , ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರವೀಂದ್ರ ಪ್ರಕಾಶನದ ಮುಖ್ಯಸ್ಥ ವೈ.ಎ.ದಂತಿ ಅವರನ್ನು ಸನ್ಮಾನಿಸಲಾಯಿತು. ವಿ.ಗಣೇಶ್, ಡಾ. ಸರ್ಫ್ರಾಜ್ ಚಂದ್ರಗುತ್ತಿ, ಡಾ. ವೀರೇಶ್‌ಕುಮಾರ್ ಇತರರಿದ್ದರು. 
ನ್ಯೂಸ್

ಹೊಸ ಕವಿಗಳು ಆಧ್ಯಯನ ಮಾಡಲಿ

ಸಾಗರ: ಬರೆದಿದ್ದೆಲ್ಲವೂ ಪದ್ಯವಾಗುವುದಿಲ್ಲ. ಪದ್ಯಕ್ಕೂ ತನ್ನದೇ ಆದ ಕಟ್ಟುಪಾಡುಗಳಿವೆ. ಅವುಗಳನ್ನು ಅರಿತು ಪದ್ಯ ರಚನೆಯಲ್ಲಿ ತೊಡಗಬೇಕು ಎಂದು ಸಾಹಿತಿ ವಿ.ಗಣೇಶ ತಿಳಿಸಿದರು.

ಸಾಗರದ ಕುಡುಪಲಿ ಸದಾನಂದ ಸಭಾಭವನದಲ್ಲಿ ಬಳ್ಳಾರಿ ಮತ್ತು ಶಿವಮೊಗ್ಗದ ರವಿಕಿರಣ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ರವಿಕಿರಣಗಳ ಸಹ್ಯಾದ್ರಿ ಸಂಗಮ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಸಮಾರಂಭದಲ್ಲಿ ಮಾತನಾಡಿದರು.

ಹೊಸ ತಲೆಮಾರಿನ ಕವಿಗಳು ಕನ್ನಡದ ಕಾವ್ಯ ಪರಂಪರೆಯನ್ನು ಗಮನಿಸಬೇಕು. ಕುವೆಂಪು, ಗೋಪಾಲಕೃಷ್ಣ ಅಡಿಗ, ಬೇಂದ್ರೆಯಂಥ ಮಹತ್ವದ ಕವಿಗಳನ್ನು ಓದಿಕೊಳ್ಳಬೇಕು. ಭಾವನೆಗಳ ಅಭಿವ್ಯಕ್ತಿಗೆ ಕಾವ್ಯ ಅತ್ಯಂತ ಹತ್ತಿರವಾದ ಮಾಧ್ಯಮ. ರಾಜ್ಯದ ವಿವಿಧೆಡೆಯಿಂದ ಕವಿಗಳು ಪಾಲ್ಗೊಂಡಿರುವುದು ಒಳ್ಳೆಯ ಪ್ರಯತ್ನ ಎಂದರು.

ಕವಿತೆ ಕುರಿತು ಉಪನ್ಯಾಸ ನೀಡಿದ ಲೇಖಕ ಡಾ. ರ್ಸ್ರಾಜ್ ಚಂದ್ರಗುತ್ತಿ, ಕವಿತೆ ಬಹುರೂಪಿ. ಕವಿತೆಯಷ್ಟು ಸರಳ ಹಾಗೂ ಕವಿತೆಯಷ್ಟು ಸಂಕೀರ್ಣ ರಚನೆ ಬೇರೊಂದಿಲ್ಲ. ಕವಿತೆಗೆ ತನ್ನದೇ ಆದ ಲಯ, ಧ್ವನಿ ಶಕ್ತಿ ಇರುತ್ತದೆ. ಇದನ್ನು ನಿರ್ಲಕ್ಷಿಸಿ ಪ್ರಾಸದ ಗೀಳಿಗೆ ಬೀಳಬಾರದು. ಹೊಸ ಕವಿಗಳು ಕನ್ನಡದ ಸಾಹಿತಿಗಳನ್ನು ಗಂಭೀರವಾಗಿ ಓದಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಆಧುನಿಕ ತಂತ್ರಜ್ಞಾನದಲ್ಲಿ ಎಲ್ಲ ವಿಚಾರಗಳು ಬೆರಳ ತುದಿಯಲ್ಲಿ ಸಿಕ್ಕಿಬಿಡುತ್ತದೆ. ಹಾಗೆಂದ ಮಾತ್ರಕ್ಕೆ ಅದರಲ್ಲಿ ಸ್ಪಷ್ಟತೆ, ನಿಖರತೆ ಇದೆಯೇ ಎಂದು ಗಮನಿಸುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಸಿದ್ಧಿ ಇಲ್ಲದ ಯಾವುದೇ ಪ್ರಸಿದ್ಧಿಗಳು ಬಹುಕಾಲ ಉಳಿಯುವುದಿಲ್ಲ ಎಂದರು.

ಕವಿ ರಮಾ ಕಲಘಟಗಿ ಅವರ ಹನಿಗಳ ಮಿಲನ, ಕೆ.ಎಸ್.ರಕ್ಷಾ ಅವರ ಮನದ ಮಾತು ನೂರೆಂಟು, ಅಂಬಿಕಾ ಸಂತೋಷ್ ಅವರ ಜೀವನ್ಮುಖಿ ಹಾಗೂ ಗೌರಿ ಕುಲಕರ್ಣಿ ಅವರ ಭಾವಲಹರಿ ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 40ಕ್ಕೂ ಹೆಚ್ಚು ಕವಿಗಳು ಕವಿತೆಗಳನ್ನು ವಾಚಿಸಿದರು.

ರವಿಕಿರಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ವೀರೇಶ್‌ಕುಮಾರ್, ಪ್ರಧಾನ ಕಾರ್ಯದರ್ಶಿ ರಮಾ ಕಲಘಟಗಿ, ಕೆ.ಎಸ್.ರಕ್ಷಾ, ಶ್ರೀಹರ್ಷ, ಅಂಬಿಕಾ ಸಂತೋಷ್ ಇತರರಿದ್ದರು.