ಮಳವಳ್ಳಿ : ಗ್ರಾಮೀಣ ಪ್ರದೇಶಗಳಿಂದಲೇ ಜಾನಪದ ಕಲೆ ಇಂದಿಗೂ ಜೀವಂತವಾಗಿದೆ ಎಂದು ಸಾಹಿತಿ ಬಸಪ್ಪ ನೆಲಮಾಕನಹಳ್ಳಿ ಹೇಳಿದರು.
ತಾಲೂಕಿನ ಪೂರಿಗಾಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ನಾಗಮಲೆ ಮಹದೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಇಂದು ಜೀವಂತವಾಗಿದೆ. ಸಾಂಸ್ಕೃತಿಕ ನಾಯಕರಾದ ಮಲೆ ಮಹದೇಶ್ವರ ಸ್ವಾಮಿ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರ ಪವಾಡಗಳನ್ನು ಜಾನಪದ ಕಲಾವಿದರು ಹಾಗೂ ನೀಲಗಾರರು ಕಂಸಾಳೆ ತಂಬೂರಿಗಳ ಮೂಲಕ ವೈಭವಿಕರಿಸಿ ಕೊಂಡಾಡುವ ಜಾನಪದ ಗೀತೆಗಳನ್ನು ರಚಿಸಿ ಹಾಡುತ್ತಿದ್ದಾರೆ. ಜಾನಪದ ಕಲೆ ಉಳಿಯಲು ಇಂತಹ ಕಾರ್ಯಕ್ರಮಗಳು ತುಂಬ ಅವಶ್ಯಕವಾಗಿವೆ. ಜಾನಪದ ಕಲೆಯ ತವರೂರಾಗಿರುವ ಮಳವಳ್ಳಿ ತಾಲೂಕಿನಲ್ಲಿ ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಲೆ ಮಹದೇಶ್ವರಸ್ವಾಮಿ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರು ನಡೆದಾಡಿರುವ ಈ ಭಾಗದಲ್ಲಿ ಅವರ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಜಾನಪದ ಕಲಾವಿದರಿಗೆ ನಾವೆಲ್ಲರೂ ಸಹಕಾರ ನೀಡಬೇಕೆಂದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮಾಜಿ ಸದಸ್ಯ ಎಂ.ಎನ್.ಜಯರಾಜು ಮಾತನಾಡಿ, ಈ ಭಾಗದ ಜನರಲ್ಲಿ ಸಾಂಸ್ಕೃತಿಕವಾಗಿ ಜಾಗೃತಿ ಉಂಟುಮಾಡುವ ಉದ್ದೇಶದಿಂದ ಮಲೆ ಮಹದೇಶ್ವರಸ್ವಾಮಿ, ಮಂಟೇಸ್ವಾಮಿ, ಸಿದ್ದಪ್ಪಾಜಿ ಸೇರಿದಂತೆ ಹಲವಾರು ಪವಾಡ ಪುರುಷರು ಪವಾಡಗಳನ್ನು ಮೆರೆದಿದ್ದಾರೆ. ಜಾನಪದ ಕಲೆಯನ್ನು ಶ್ರೀಮಂತಗೊಳಿಸುವುದರಲ್ಲಿ ಜಾನಪದ ಕಲಾವಿದರ ಕೊಡುಗೆ ತುಂಬ ಅಪಾರವಾಗಿದೆ. ಆ ನಿಟ್ಟಿನಲ್ಲಿ ಜಾನಪದ ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವುದು ತುಂಬ ಅವಶ್ಯಕವಾಗಿವೆ ಎಂದರು.
ಗ್ರಾ.ಪಂ. ಅಧ್ಯಕ್ಷೆ ರೂಪಾ, ನಾಗಮಲೆ ಮಹದೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಮಹದೇವ, ಸಾಹಿತಿ ನಾಗರತ್ನಮ್ಮ, ಗ್ರಾ.ಪಂ.ಸದಸ್ಯರಾದ ಮೂರ್ತಿ, ಹರೀಶ್, ಗ್ರಾ.ಪಂ. ಮಾಜಿ ಸದಸ್ಯ ಬಾಲಸುಂದ್ರಪ್ಪ, ಸರಗೂರು ತಿಪ್ಪೇಸ್ವಾಮಿ, ಯಜಮಾನರಾದ ಮಂಜಪ್ಪ, ಮಹದೇವಸ್ವಾಮಿ, ಪೊಲೀಸ್ ಮಹದೇವಯ್ಯ, ನಾಗೇಶ್, ಗಣೇಶ್ ಸೇರಿದಂತೆ ಇತರರಿದ್ದರು.