ನ್ಯೂಸ್

ಭಾರತದ ಕಾಫಿ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಲಿ

ವಿಜಯವಾಣಿ ವಿಶೇಷ ಮೈಸೂರು

ಭಾರತದ ಕಾಫಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಕಲ್ಪಿಸಬೇಕು. ಬೆಳೆ ವಿಮೆ ಯೋಜನೆಯಡಿ ಕಾಫಿ ಸೇರಿಸಬೇಕು. ತೋಟಗಳಲ್ಲಿ ಮಿತಿ ಮೀರಿರುವ ಆನೆಗಳ ಹಾವಳಿ ಕೊನೆಗಾಣಿಸಬೇಕು. ಕಾಫಿ ಉದ್ಯಮವನ್ನು ಸರ್ಫೆಸಿ (ಆರ್ಥಿಕ ಆಸ್ತಿಗಳ ಸ್ಥಿರೀಕರಣ, ಪುನಾರಚನೆ ಮತ್ತು ಭದ್ರತಾ ಹಿತಾಸಕ್ತಿ ಕಾಯ್ದೆ ಜಾರಿ) ಕಾಯ್ದೆಯಿಂದ ಮುಕ್ತಗೊಳಿಸಬೇಕು. ಕಸ್ತೂರಿರಂಗನ್ ವರದಿ ಮಾರ್ಪಾಡು ಮಾಡಬೇಕು...

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಕನ್ನಡದ ನಂ1 ದಿನಪತ್ರಿಕೆ ‘ವಿಜಯವಾಣಿ’ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಫಿ ಬೆಳೆಗಾರರು ಹಾಗೂ ಕಾಫಿ ತಜ್ಞರೊಂದಿಗಿನ ಸಂವಾದದಲ್ಲಿ ಕೇಳಿ ಬಂದ ಮುಖ್ಯ ಬೇಡಿಕೆಗಳಿವು.

ಬೆಟ್ಟ ಪ್ರದೇಶ ಹೆಚ್ಚಿರುವ ಕಾರಣ ಇತ್ತೀಚೆಗೆ ನೇಪಾಳದಲ್ಲೂ ಕಾಫಿಯನ್ನು ಹೆಚ್ಚು ಬೆಳೆಯಲಾಗುತ್ತಿದೆ. ಹಾಗಾಗಿ ಅವರು ತಮ್ಮದೇ ಬ್ರ್ಯಾಂಡ್ ಮಾಡಲು ಮುಂದಾಗಿದ್ದಾರೆ. ಬಹುತೇಕ ದೇಶಗಳು ತಮ್ಮದೇ ಬ್ರ್ಯಾಂಡ್ ಹೊಂದಿವೆ. ಆದ್ದರಿಂದ ವಿಶ್ವ ಮಟ್ಟದಲ್ಲಿ ‘ಭಾರತ ಕಾಫಿ’ಯನ್ನು ಬ್ರ್ಯಾಂಡ್ ಮಾಡಬೇಕು. ಕಾಫಿ ಬೋರ್ಡ್ ಕೂಡ ಈ ಬಗ್ಗೆ ಚರ್ಚೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಭಾರತದ ಕಾಫಿಯನ್ನೂ ಬ್ರ್ಯಾಂಡ್ ಆಗಿ ನಿರ್ಮಾಣ ಮಾಡುವ ಕೆಲಸ ಆಗಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಎಚ್.ಟಿ.ಮೋಹನ್​ಕುಮಾರ್ ಒತ್ತಾಯಿಸಿದರು.

ಕಾಡಿನ ನೆರಳಲ್ಲಿ ಬೆಳೆಯುತ್ತಿರುವುದರಿಂದ ನಮ್ಮ ಕಾಫಿಗೆ ಉತ್ಕೃಷ್ಟ ಸುವಾಸನೆ ಇದೆ. ಎಲ್ಲ ರೀತಿಯ ಗುಣ ಇದೆ. ಕಾಫಿಯ ಚಿಗುರು ಅದ್ಭುತವಾದ ಔಷಧ ಗುಣ ಹೊಂದಿದೆ. ಇದನ್ನು ನಾವು ಹೈಲೆಟ್ ಮಾಡಿ ಬ್ರ್ಯಾಂಡ್ ಕಲ್ಪಿಸಿದರೆ ಉತ್ತಮ ಮಾರುಕಟ್ಟೆ ಲಭ್ಯವಾಗುತ್ತದೆ. ಈಗ ಬ್ರೆಜಿಲ್ ಸೇರಿ ಎಲ್ಲ ದೇಶದಲ್ಲೂ ಅವರ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಇದೆ. ಬ್ರೆಜಿಲ್​ನಲ್ಲಿ ಬೆಳೆದ ಶೇ.80 ಕಾಫಿಯನ್ನು ಆ ದೇಶದಲ್ಲೇ ಬಳಕೆ ಮಾಡಲಾಗುತ್ತಿದೆ. ನಮ್ಮಲ್ಲಿ ಶೇ.4 ಬೆಳೆದರೂ ಶೇ.80 ಆಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಉತ್ತಮ ಬೆಲೆ ಇದೆ. ನಮ್ಮ ರೋಬಸ್ಟಾ ಕಾಫಿಗೆ ಲಂಡನ್ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯಾದರೆ, ಅರೇಬಿಕಾಗೆ ನ್ಯೂಯಾರ್ಕ್​ನಲ್ಲಿ ಬೆಲೆ ನಿಗದಿ ಆಗುತ್ತದೆ ಎಂದು ಡಾ.ಎಚ್.ಟಿ. ಮೋಹನ್​ಕುಮಾರ್ ಮಾಹಿತಿ ನೀಡಿದರು.

ಮಾರ್ಪಾಡು ಮಾಡಿ ಅನುಷ್ಠಾನಗೊಳಿಸಿ

ಕಸ್ತೂರಿರಂಗನ್ ವರದಿ ಅನುಷ್ಠಾನ ಮಾಡಿದರೆ ಪಶ್ಚಿಮಘಟ್ಟ ಮತ್ತು ಮಲೆನಾಡು ಪ್ರದೇಶವನ್ನು ಅತೀ ಸೂಕ್ಷ್ಮ ಪರಿಸರ ವಲಯವೆಂದು ಘೊಷಣೆ ಮಾಡಲಾಗುತ್ತದೆ. ವರದಿಯ ಕೆಲ ಅಂಶಗಳಿಂದ ಕಾಫಿ ಬೆಳೆಗಾರರು ಮತ್ತು ಅಲ್ಲಿನ ನಾಗರಿಕರಿಗೆ ಕೊಂಚ ತೊಂದರೆಯಾಗುತ್ತದೆ. ಈ ಸಂಬಂಧ ವಿರೋಧ ವ್ಯಕ್ತಪಡಿಸಿದ ಕಾರಣ ಈ ಹಿಂದಿನ ಸರ್ಕಾರ ವರದಿ ಅನುಷ್ಠಾನಕ್ಕೆ ಮೂರು ವರ್ಷ ತಡೆಯೊಡ್ಡಿತ್ತು. ನಾನು ವರದಿಯ ಕೆಲ ಅಂಶಗಳನ್ನು ಮಾರ್ಪಡಿಸುವಂತೆ ಹೇಳಿದ್ದರೂ ಮಾಡಿಲ್ಲ. ಇದೀಗ ಮತ್ತೆ ವರದಿ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ದೂರಿದ ಅವರು, ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನ ಮಾಡಲಿ. ಆದರೆ, ನಾವು ಹೇಳಿರುವ ನ್ಯೂನತೆಗಳನ್ನು ಸರಿಪಡಿಸಿ ಅನುಷ್ಠಾನಗೊಳಿಸಬೇಕು ಎಂದು ಡಾ.ಎಚ್.ಟಿ. ಮೋಹನ್​ಕುಮಾರ್ ಒತ್ತಾಯಿಸಿದರು.

ವಿಮೆ ಯೋಜನೆಯಡಿ ಸೇರಿಸಿ

ದೇಶದಲ್ಲಿ ಎಲ್ಲ ಬೆಳೆಗಳಿಗೂ ವಿಮೆ ಇದೆ. ಆದರೆ, ಕಾಫಿ ಬೆಳೆಗೆ ಏಕ್ಕಿಲ್ಲ ಎಂದು ಪ್ರಶ್ನಿಸಿದ ಹಾಸನ ಜಿಲ್ಲಾ ಬೆಳೆಗಾರರ ಸಂಘದ (ಎಚ್​ಡಿಪಿಎ) ಗೌರವ ಕಾರ್ಯದರ್ಶಿ ಕೆ.ಬಿ.ಲೋಹಿತ್, ಕಾಫಿ ಬೆಳೆಯನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸೇರಿಸಬೇಕು ಎಂದು ಒತ್ತಾಯಿಸಿದರು. ಕೊಡಗು, ಹಾಸನ, ಚಿಕ್ಕಮಗಳೂರು ಸೇರಿ ಪಶ್ಚಿಮಘಟ್ಟದ ಮಲೆನಾಡು ಪ್ರದೇಶದಲ್ಲಿ ಶೇ.90 ಮಂದಿ ಕಾಫಿ ಬೆಳೆಗಾರರಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅಕಾಲಿಕ ಮಳೆಯಿಂದ ಫಸಲು ನಷ್ಟವಾಗಿ ಬೆಳೆಗಾರರು ಸಾಲಗಾರರಾಗಿದ್ದಾರೆ. ಉತ್ಪಾದನಾ ವೆಚ್ಚವೂ ಜಾಸ್ತಿಯಾಗುತ್ತಿದೆ. ಸಾಕಷ್ಟು ರೈತರು ತೋಟಗಳನ್ನು ಪಾಳುಬಿಟ್ಟಿದ್ದಾರೆ. ಈ ಬಗ್ಗೆ ಮಾಹಿತಿಯಿದ್ದರೂ ಬೆಳೆಯನ್ನು ವಿಮೆ ಯೋಜನೆಯಡಿ ಸೇರಿಸದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿವೆ ಎಂದು ದೂರಿದರು.

ಸರ್ಫೆಸಿ ಕಾಯ್ದೆಯಿಂದ ಮುಕ್ತಿ ನೀಡಿ

 ಕಾಫಿ ಬೆಳೆಗಾರರ ಬದುಕು ಕಸಿಯುತ್ತಿರುವ ಸರ್ಫೆಸಿ ಕಾಯ್ದೆಯಿಂದ ಮುಕ್ತಿ ನೀಡಬೇಕು. ಸರ್ಫೆಸಿ ಆಧರಿಸಿ ಇತ್ತೀಚೆಗೆ ಕೆಲ ಬ್ಯಾಂಕ್​ಗಳು ಬೆಳೆಗಾರರ ತೋಟವನ್ನು ಹರಾಜು ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಜತೆಗೆ ಸಾಲ ಹೊಂದಿರುವ ಬೆಳೆಗಾರರಿಗೆ ನೋಟಿಸ್ ಜಾರಿ ಮಾಡುತ್ತಿವೆ. ಕೆಲವು ಬ್ಯಾಂಕ್​ಗಳಂತೂ ಸರ್ಫೆಸಿ ಕಾಯ್ದೆ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿವೆ. ಈ ಕಾಯ್ದೆ ಮುಂದೊಂದು ದಿನ ಕಾಫಿ ಉದ್ಯಮಕ್ಕೆ ಮುಳುವಾಗಲಿದೆ. ಆದ್ದರಿಂದ ಕೇಂದ್ರದ ಹಣಕಾಸು ಸಚಿವಾಲಯ ಕಾಫಿಯನ್ನು ಸಂಪೂರ್ಣ ಕೃಷಿ ಎಂದು ಉಲ್ಲೇಖಿಸಿ ಸುಗ್ರೀವಾಜ್ಞೆ ಹೊರಡಿಸಿ ಕಾಫಿ ಉದ್ಯಮ ಸರ್ಫೆಸಿ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟವಾಗಿ ಪ್ರಕಟಿಸಬೇಕು. ಈ ಸಂಬಂಧ ಬೆಳೆಗಾರರ ಸಂಘಟನೆಗಳು ಹೋರಾಟ ಮಾಡುತ್ತಿವೆ.

ಕೃಷಿಯೇತರ ಸಾಲಕ್ಕಾಗಿ ರಿಸರ್ವ್ ಬ್ಯಾಂಕ್ ರೂಪಿಸಿದ ಕಾಯ್ದೆ ಇದಾಗಿದೆ. ಆರು ವರ್ಷಗಳ ಹಿಂದೆ ಚಿಕ್ಕಮಗಳೂರಿನ ಕಾಫಿ ಬೆಳೆಗಾರರ ಪ್ರಕರಣದಲ್ಲಿ ನ್ಯಾಯಾಲಯ ಅವರ ಸಾಲವನ್ನು ಕೃಷಿ ಸಾಲ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಿತ್ತು. ತಕ್ಷಣ ಬ್ಯಾಂಕ್​ಗಳು ಎಲ್ಲ ಬೆಳೆಗಾರರ ಮೇಲೆ ನ್ಯಾಯಾಲಯದ ತೀರ್ಪಿನ ಪ್ರಕಾರ ಮುಗಿಬಿದ್ದವು. ನಾವು ಅದನ್ನು ವಿರೋಧಿಸಿದರೂ ಪ್ರಯೋಜನ ಆಗಲಿಲ್ಲ. ಕಾಫಿ ಬೆಳೆಯು ಕೃಷಿಯೇ ಆಗಿದೆ. ನಮಗೆ ಬ್ಯಾಂಕ್​ಗಳು ನೀಡುವುದು ಕೃಷಿ (ಕೆಸಿಸಿ) ಸಾಲವಾಗಿದೆ. ನಮಗೆ ಇಲ್ಲಿವರೆಗೂ ವಿಮೆ ಇದ್ದದ್ದು ಅಗ್ರಿಕಲ್ಚರ್ ಆಫ್ ಇನ್ಶೂರೆನ್ಸ್ ಸಂಸ್ಥೆಯ ಅಡಿಯಲ್ಲಿ. ದೇಶದ ಆರ್ಥಿಕತೆಗೆ 2023ರಲ್ಲಿ ನಮ್ಮ ಕಾಫಿ ಕೊಡುಗೆ 11-12 ಸಾವಿರ ಕೋಟಿ ರೂ. ಆಗಿದೆ. 2022ನೇ ಸಾಲಿನಲ್ಲಿ ಅಗ್ರಿಕಲ್ಚರ್ ರಫ್ತು ಮೊದಲ ಬಾರಿಗೆ 50 ಬಿಲಿಯನ್ ಡಾಲರ್ ಮುಟ್ಟಿತ್ತು. ಅದರಲ್ಲಿ 5ನೇ ಸ್ಥಾನದಲ್ಲಿ ಕಾಫಿ ಇದೆ. ಕೃಷಿ ಉತ್ಪನ್ನಗಳ ರಫ್ತಿನ ಪಟ್ಟಿಯಲ್ಲಿ ಕಾಫಿ ಇದೆ. ಆದರೆ, ಸಾಲ ವಸೂಲಾತಿಯಲ್ಲಿ ಮಾತ್ರ ಕೃಷಿಯಲ್ಲ ಎಂದು ಸರ್ಫೆಸಿ ಕಾಯ್ದೆಗೆ ತರುತ್ತೀರಿ ಏಕೆ ಎಂದು ಬೆಳೆಗಾರರ ಒಕ್ಕೂಟದ ನಿರ್ದೇಶಕ ಟಿ.ಪಿ.ಸುರೇಂದ್ರ ಪ್ರಶ್ನೆ ಮಾಡಿದರು.

ಕಾಡಾನೆಗಳನ್ನು ಸ್ಥಳಾಂತರ ಮಾಡಿ

ಕಾಫಿ ತೋಟಗಳಲ್ಲಿ ಪ್ರಾಣಿಗಳ ಹಾವಳಿ ಮಿತಿ ಮೀರಿದ್ದು, ಪ್ರಾಣ ಹಾನಿ ಮಾಡುತ್ತಿವೆ. ಈ ಮೊದಲು ತೋಟಗಳಿಗೆ ನುಗ್ಗಿ ಬೆಳೆಗಳನ್ನು ಹಾನಿ ಮಾಡುತ್ತಿದ್ದ ಆನೆಗಳೀಗ ಕೆಲಸ ಮಾಡುವ ಕಾರ್ವಿುಕರ ಮೇಲೂ ದಾಳಿ ನಡೆಸುತ್ತಿವೆ. ‘ಕಾಫಿ ತೋಟದಿಂದ ಆನೆಗಳನ್ನು ಸ್ಥಳಾಂತರ ಮಾಡಬೇಕು’ ಎಂದು 2014ರಲ್ಲಿ ನ್ಯಾಯಾಲಯ ತೀರ್ಪು ನೀಡಿತ್ತು. ಕಾಫಿ ತೋಟ ಆನೆಗಳು ವಾಸಿಸುವ ಸ್ಥಳ ಅಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಆ ವೇಳೆ ಈ ಭಾಗದಲ್ಲಿ 22 ಆನೆಗಳನ್ನು ಮಾತ್ರ ಹಿಡಿದು ಕಾಡಿಗೆ ಬಿಡಲಾಗಿತ್ತು. ಸ್ಥಳಾಂತರಿಸದೆ ಬಿಟ್ಟ ಆನೆಗಳು ಹಾವಳಿ ಮಾಡುತ್ತಿವೆ. ಈ ಆನೆಗಳ ಸಂಖ್ಯೆ 100ರ ಗಡಿ ತಲುಪಿದೆ. ಈಗಾಗಲೇ 80ಕ್ಕೂ ಹೆಚ್ಚು ಕಾರ್ವಿುಕರ ಪ್ರಾಣ ತೆಗೆದಿವೆ ಎಂದು ಹಾಸನ ಜಿಲ್ಲಾ ಬೆಳೆಗಾರರ ಸಂಘದ ಖಜಾಂಚಿ ಎಂ.ಜೆ.ಸಚಿನ್ ಅಸಮಾಧಾನ ವ್ಯಕ್ತಪಡಿಸಿದರು. ಹಾಸನ ಜಿಲ್ಲಾ ಬೆಳೆಗಾರರ ಸಂಘ (ಎಚ್​ಡಿಪಿಎ)ದ ಅಧ್ಯಕ್ಷ ಎ.ಎಸ್.ಪರಮೇಶ್, ಬೆಳೆಗಾರರಾದ ಕೃಷ್ಣಮೂರ್ತಿ ಖಂಡಿಗೆ, ಅರುಣ್​ಕುಮಾರ್, ಎಂ.ಎಚ್. ಪ್ರಕಾಶ್ ಇದ್ದರು.

ಕರ್ನಾಟಕದಲ್ಲಿ ಉತ್ಪಾದನೆ ಹೆಚ್ಚು

ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಸಿಂಹಪಾಲು ಕರ್ನಾಟಕದ್ದು. ಕರ್ನಾಟಕದಲ್ಲಿ ವಾರ್ಷಿಕ ಸರಾಸರಿ 2.50 ಲಕ್ಷ ಮೆಟ್ರಿಕ್ ಟನ್ ಕಾಫಿ ಬೆಳೆಯಲಾಗುತ್ತಿದೆ. ಕೇರಳದಲ್ಲಿ 72,425 ಮೆಟ್ರಿಕ್ ಟನ್, ತಮಿಳುನಾಡಿನಲ್ಲಿ 18,700 ಮೆಟ್ರಿಕ್ ಟನ್, ಆಂಧ್ರಪ್ರದೇಶದಲ್ಲಿ 12,265 ಮೆಟ್ರಿಕ್ ಟನ್ ಹಾಗೂ ಒಡಿಶಾದಲ್ಲಿ 465 ಮೆಟ್ರಿಕ್ ಟನ್ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ಅತಿಹೆಚ್ಚು ಕಾಫಿ ಬೆಳೆಯುವ ಜಿಲ್ಲೆ ಎಂಬ ಖ್ಯಾತಿ ಕೊಡಗಿನದ್ದು. ಕೊಡಗಿನಲ್ಲಿ ವಾರ್ಷಿಕ ಸರಾಸರಿ 1,28,720 ಮೆಟ್ರಿಕ್ ಟನ್ ಕಾಫಿ ಉತ್ಪಾದಿಸಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ 82,450, ಹಾಸನದಲ್ಲಿ 36,850 ಮೆಟ್ರಿಕ್ ಟನ್ ಕಾಫಿ ಬೆಳೆಯಲಾಗುತ್ತಿದೆ.

ಕಾಫಿ ಬೋರ್ಡ್​ನಿಂದ ಎಫ್​ಪಿಒ ಆರಂಭಕ್ಕೆ ಸಿದ್ಧತೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿ ಬೆಲೆ ಏರಿಕೆಯಾಗುತ್ತಿರುವುದರಿಂದ ಕಾಫಿಯ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಕಾಫಿ ಮಂಡಳಿ ರೈತ ಉತ್ಪಾದಕ ಸಂಸ್ಥೆ ಆರಂಭಿಸಲು ಸಿದ್ಧತೆ ನಡೆಸಿದೆ. ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ.70 ಪಾಲು ಕರ್ನಾಟಕದ್ದೇ ಎಂಬುದು ವಿಶೇಷ. ಹೀಗಾಗಿ ಕರ್ನಾಟಕವನ್ನು ಕೇಂದ್ರವನ್ನಾಗಿಸಿಕೊಂಡು ದೇಶದ ವಿವಿಧ ರಾಜ್ಯಗಳಲ್ಲಿ 100 ಎಫ್​ಪಿಒ ಆರಂಭಿಸಲಾಗುತ್ತಿದೆ. ಈಗಾಗಲೆ ಕರ್ನಾಟಕದಲ್ಲಿ 100 ಮಂದಿಗೆ ತರಬೇತಿಯನ್ನೂ ನೀಡಲಾಗಿದೆ.