ಅಭಿವೃದ್ಧಿಯ ಪಯಣದಲ್ಲಿ ಹಳ್ಳಿಗಳು, ಸಣ್ಣ ಪಟ್ಟಣಗಳು ಕ್ರಮಿಸಬೇಕಾಗಿರುವ ಮಾರ್ಗ ಇನ್ನೂ ಸುದೀರ್ಘ. ಕೆಲ ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಪ್ರಸಕ್ತ ಹಲವು ಸುಧಾರಣೆಗಳು ಆಗಿರುವುದು ಹೌದಾದರೂ, ಮಹತ್ವದ ಕೆಲಸಗಳು ಆಗಬೇಕಿವೆ. ಕೊರತೆಗಳು ಕಣ್ಣಿಗೆ ರಾಚುವಂತಿವೆ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ಸಂಬಂಧಿಸಿದ ಸೌಕರ್ಯಗಳು ಸಮರ್ಪಕವಾಗಿ ತಲುಪಬೇಕಿವೆ. ಅಲ್ಲಿಯ ಜನರ ಜೀವನಸ್ತರ ಸುಧಾರಣೆ ಆಗಬೇಕಿದೆ. ಮೂಲಸೌಕರ್ಯಗಳು ವಿಸ್ತರಣೆ ಆಗದೆ ಅಭಿವೃದ್ಧಿಯ ಆಶಯಕ್ಕೆ ಬಲ ತುಂಬಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಲು 3,885 ಕೋಟಿ ರೂಪಾಯಿಗಳ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4ನೇ ಹಂತದ ಕ್ರಿಯಾ ಯೋಜನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಯಿಂದ 23 ಜಿಲ್ಲಾ ಕೇಂದ್ರದ ನಗರಸಭೆಗಳು ಮತ್ತು 1ನೇ ದರ್ಜೆಯ ನಗರಸಭೆಗಳಿಗೆ ತಲಾ 40 ಕೋಟಿ ರೂಪಾಯಿಗಳಂತೆ ಒಟ್ಟು 920 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಉಳಿದ 38 ನಗರಸಭೆಗಳಿಗೆ ತಲಾ 30 ಕೋಟಿ ರೂಪಾಯಿಗಳಂತೆ 1140 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಮೂಲಸೌಲಭ್ಯಗಳ ಕೊರತೆ ನೀಗಿಸುವುದು, ಈ ಯೋಜನೆಯ ಉದ್ದೇಶ.
ನಗರೋತ್ಥಾನ ಯೋಜನೆಯ ಅಡಿ ಬೀದಿದೀಪಗಳ ಅಳವಡಿಕೆ, ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು, ಶೇಕಡ 100 ಘನತ್ಯಾಜ್ಯ ವಿಂಗಡಣೆ, ವಿಲೇವಾರಿ, ತ್ಯಾಜ್ಯನೀರಿನ ವೈಜ್ಞಾನಿಕ ವಿಸರ್ಜನೆ, ಸೌರವಿದ್ಯುತ್ ಅಳವಡಿಕೆಗೆ ಒತ್ತು ನೀಡಲಾಗುತ್ತದೆ. ಅಲ್ಲದೆ, ಸುಸಜ್ಜಿತ ಶಾಲೆ, ಅಂಗನವಾಡಿ, ಉದ್ಯಾನ ನಿರ್ಮಾಣ ಇತ್ಯಾದಿ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿ ಹಾಗೂ ಕೆರೆ-ಕಟ್ಟೆಗಳ ಪುನಶ್ಚೇತನ ಕೈಗೊಳ್ಳಲಾಗುತ್ತದೆ. ಯೋಜನೆಯ ಸ್ವರೂಪ, ಅದರ ಆಶಯವೇನೋ ಉತ್ತಮವಾಗಿದೆ. ಆದರೆ, ಬಹಳಷ್ಟು ಸ್ಥಳೀಯ ಸಂಸ್ಥೆಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅವ್ಯವಹಾರದಂಥ ಅಪಸವ್ಯಗಳಿಂದಲೇ ಸುದ್ದಿಯಲ್ಲಿವೆ. ಅನುದಾನ ದುರ್ಬಳಕೆ, ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ಕುಂಟುತ್ತ ಸಾಗುವುದು, ಗುಣಮಟ್ಟ ಕಾಪಾಡಿಕೊಳ್ಳದಿರುವುದು ಹೀಗೆ ಹಲವು ಸಮಸ್ಯೆಗಳು ಈ ಹಿಂದಿನ ಯೋಜನೆಗಳ ನೈಜೋದ್ದೇಶವನ್ನೇ ಹಾಳುಗೆಡವಿವೆ.
ಈ ಬಾರಿಯೂ ಮತ್ತೆ ಆ ಸ್ಥಿತಿ ಮರುಕಳಿಸಬಾರದು. ಇದಕ್ಕಾಗಿ ಕಾಮಗಾರಿಗಳ ಅನುಷ್ಠಾನ, ಗುಣಮಟ್ಟದ ಕಡೆಗೆ ಗಮನ ನೀಡಬೇಕು. ಯೋಜನೆ ಜಾರಿ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸ್ಪಷ್ಟ ನಿಯಮಾವಳಿ ರೂಪಿಸಿ, ಅವ್ಯವಹಾರಕ್ಕೆ ಆಸ್ಪದವಾಗದಂತೆ ಮಾಡಬೇಕು. ಆಗಲೇ ಮೂಲಸೌಕರ್ಯ ವಿಸ್ತರಣೆಯ ಆಶಯ ಈಡೇರಲು ಸಾಧ್ಯ. ಅಲ್ಲದೆ, ಇಂಥ ಸುಧಾರಣೆಗಳ ಲಾಭ ಜನರಿಗೆ ತಲುಪಿ, ಜೀವನಮಟ್ಟ ಸುಧಾರಿಸಲು ಪೂರಕ.
ಸ್ಥಳೀಯ ಸಂಸ್ಥೆಗಳು ಮುಂಚೆ ಯಾವುದೇ ಕಾಮಗಾರಿಯ ಮಾತು ಬಂದರೆ ಅನುದಾನ ಕೊರತೆಯ ನೆಪ ಹೇಳುತ್ತಿದ್ದವು. ಪ್ರಸಕ್ತ, ಈ ಯೋಜನೆ ಅಡಿಯಲ್ಲೇ ಸೂಕ್ತ ಅನುದಾನ ಬಿಡುಗಡೆ ಆಗುತ್ತಿರುವುದರಿಂದ ಅದು ಸದ್ಬಳಕೆಯಾಗಲಿ. ನಿಜಾರ್ಥದಲ್ಲಿ ಅಭಿವೃದ್ಧಿ ಕಾಣುವಂತಾಗಲಿ.