ತೀರ್ಥಹಳ್ಳಿ: ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ ಸೇರಿದಂತೆ ಪ್ರತಿಯೊಂದು ರಾಷ್ಟ್ರೀಯ ಹಬ್ಬಗಳನ್ನು ಬದ್ಧತೆಯಿಂದ ಆಚರಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಭಾರತೀಯ ಪ್ರಜೆಯದು. ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತಾಗಬೇಕು ಎಂದು ತಹಸೀಲ್ದಾರ್ ಎಸ್.ರಂಜಿತ್ ಹೇಳಿದರು.
ಗಣರಾಜ್ಯೋತ್ಸವ ಆಚರಣೆ ಸಲುವಾಗಿ ಬುಧವಾರ ತಾಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಬ್ಬಗಳು ಕೇವಲ ಸರ್ಕಾರಿ ಇಲಾಖೆಗಳು ಮತ್ತು ಪ್ರೌಢಶಾಲೆವರೆಗಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಸಾರ್ವಜನಿಕರು ಮತ್ತು ಎಲ್ಲ ವಿದ್ಯಾರ್ಥಿಗಳೂ ಭಾಗವಹಿಸುವಂತಾಗಬೇಕು. ಈ ಬಗ್ಗೆ ಕಾಲೇಜುಗಳ ಮುಖ್ಯಸ್ಥರು ಆಸಕ್ತಿವಹಿಸುವುದು ಅಗತ್ಯ ಎಂದು ಹೇಳಿದರು.
ಜ.26ರಂದು ಬೆಳಗ್ಗೆ 8ಗಂಟೆಗೆ ಪಟ್ಟಣದ ಆಗುಂಬೆ ವೃತ್ತದಿಂದ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯವರೆಗೆ ಮುಖ್ಯ ರಸ್ತೆಯಲ್ಲಿ ಪ್ರಭಾತ್ ೇರಿ ಮೆರವಣಿಗೆ, 9ಗಂಟೆಗೆ ಧ್ವಜಾರೋಹಣ, ಸಭಾ ಕಾರ್ಯಕ್ರಮದಲ್ಲಿ ಸಾಧಕ ಕೃಷಿಕರು, ರಾಷ್ಟ್ರ ಮಟ್ಟದ ಉತ್ತಮ ಕ್ರೀಡಾಪಟುಗಳು ಹಾಗೂ ಸಮಾಜದ ತೆರೆಮರೆಯಲ್ಲಿ ಸದ್ದಿಲ್ಲದೆ ಸಾಧನೆ ತೋರಿರುವರನ್ನು ಗೌರವಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯೆ ಸುಶೀಲಾ ಶೆಟ್ಟಿ, ಮುಖ್ಯಾಧಿಕಾರಿ ಡಿ. ನಾಗರಾಜ್, ಪತ್ರಕರ್ತ ಡಾನ್ ರಾಮಣ್ಣ ಶೆಟ್ಟಿ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಪ್ರವೀಣ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಪಿಎಸ್‌ಐ ಶಿವನ ಗೌಡ, ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯ ಮನೋಹರ್, ಶಿಕ್ಷಕ ಲಕ್ಷ್ಮಣ್, ಹೋಂಗಾರ್ಡ್ ಯೂನಿಟ್ ಆಫೀಸರ್ ರಾಘವೇಂದ್ರ ಇತರರಿದ್ದರು.