ಮದ್ದೂರು: ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ವಿಚಾರ ಬಂದಾಗ ಪ್ರತಿಯೊಬ್ಬರೂ ಅಭಿಮಾನ ಹೊಂದುವ ಜತೆಗೆ ಅನ್ಯ ಭಾಷಿಕರಿಗೂ ಕನ್ನಡ ಕಲಿಸುವ ಮತ್ತು ಪರಿಚಯಿಸುವ ಕೆಲಸಕ್ಕೆ ಮುಂದಾಗಬೇಕೆಂದು ಪುರಸಭೆ ಸದಸ್ಯ ಎಸ್.ಮಹೇಶ್ ತಿಳಿಸಿದರು.
ಪಟ್ಟಣದ ಎಚ್.ಕೆ.ವಿ. ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಮಾತೃಭಾಷೆಯನ್ನು ಮರೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ಕನ್ನಡ ಅಭಿಮಾನಕ್ಕೆ ಧಕ್ಕೆ ಬಂದಾಗ ನಿರಂತರವಾಗಿ ಹೋರಾಟ ನಡೆಸಿ ಭಾಷಾಭಿಮಾನ ಗೌರವಿಸುವ ಪ್ರವೃತ್ತಿಯನ್ನು ಪ್ರತಿಯೊಬ್ಬರೂ ಹೊಂದಬೇಕೆಂದರು.
ವಿದ್ಯಾರ್ಥಿಗಳು ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ, ಭಾಷೆ ಬಗ್ಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಇತರರಿಗೂ ಪರಿಚಯಿಸಿ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಗೌರವಿಸಿ ಅನ್ಯ ಭಾಷಿಕರಿಗೂ ಕನ್ನಡವನ್ನು ಕಲಿಸುವ ಕೆಲಸಕ್ಕೆ ಕೈಜೋಡಿಸಬೇಕೆಂದರು.
ಕನ್ನಡ ನಾಡು ಸಾಹಿತ್ಯ ಸಂಸ್ಕೃತಿಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು ಹಲವಾರು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದ್ದು ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲೇ ಕನ್ನಡವನ್ನು ಕಲಿಯುವ ಮೂಲಕ ತಮ್ಮೊಳಗಿರುವ ಭಾಷಾಭಿಮಾನವನ್ನು ಹೊರಚೆಲ್ಲಬೇಕೆಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಮನೆ ಮನಗಳಲ್ಲಿ ಕನ್ನಡದ ದೀಪ ಹಚ್ಚಿ ಕನ್ನಡ ಪುಸ್ತಕಗಳನ್ನು ಓದುವ ಮತ್ತು ಹವ್ಯಾಸ ಅಭಿರುಚಿಯನ್ನು ಜೀವನದುದ್ದಕ್ಕೂ ಬೆಳೆಸಿಕೊಳ್ಳುವಂತೆ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಗೌರವವಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಿತು. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಮಹೇಶ್, ಸದಸ್ಯ ಮಧು, ಮುಖ್ಯ ಶಿಕ್ಷಕ ಪ್ರಸನ್ನ, ಶಿಕ್ಷಕರಾದ ಗಂಗಾಧರ್, ಮಮತಾ, ಎಂ.ಪಿ.ಸಿ.ಎಸ್ ಮಾಜಿ ಅಧ್ಯಕ್ಷ ಎನ್.ಪಂಚಲಿಂಗಯ್ಯ, ಸದಸ್ಯ ಚಿಕ್ಕೋನು, ಮುಖಂಡರಾದ ಮಂಜು, ಅಮವಾಸ್ಯೆ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.