ಶಿವಮೊಗ್ಗ: ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಯುವಕನೂ ಕೊಡುಗೆ ನೀಡಬೇಕು. ಎಲ್ಲರೂ ಸ್ವಾಮಿ ವಿವೇಕಾನಂದ ಆದರ್ಶಗಳನ್ನು ಪಾಲಿಸಬೇಕೆಂದು ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್ ಹೇಳಿದರು.
ಎನ್‌ಎಸ್‌ಯುಐನಿಂದ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದೇಶದ ಆಸ್ತಿ. ಅವರಿಗೆ ಸರಿಯಾದ ಮಾರ್ಗದರ್ಶನ, ಪೂರಕ ಸೌಲಭ್ಯಗಳು ಸಿಕ್ಕರೆ ಉತ್ತಮ ಸಾಧನೆ ಮಾಡಬಲ್ಲರು. ಯುವಕರ ಅಭ್ಯುಧಯಕ್ಕಾಗಿ ರಾಜ್ಯ ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
ನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ಸ್ವಾಮಿ ವಿವೇಕಾನಂದರು ವಿದೇಶದಲ್ಲಿ ಮಾಡಿದ ಭಾಷಣವನ್ನು ಜೀವನ ಪರ್ಯಂತ ನೆನಪಿಸಿಕೊಳ್ಳಬೇಕು. ಸರ್ವ ಧರ್ಮ ಸಮ್ಮೇಳನದಲ್ಲಿ ಅವರ ನುಡಿಗಳು ಭಾರತಕ್ಕೆ ಮತ್ತೊಮ್ಮೆ ವಿಶ್ವ ಮಾನ್ಯತೆಯನ್ನು ತಂದುಕೊಟ್ಟಿತ್ತು ಎಂದು ಅಭಿಪ್ರಾಯಪಟ್ಟರು.
ಸೂಡಾ ಮಾಜಿ ಅಧ್ಯಕ್ಷ ಎನ್.ರಮೇಶ್ ಮಾತನಾಡಿ, ಯುವಜನತೆ ಅದರಲ್ಲೂ ವಿದ್ಯಾರ್ಥಿಗಳು ವಿವೇಕಾನಂದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಅವರ ಕೃತಿಗಳನ್ನು ಓದಬೇಕು. ಆ ಮೂಲಕ ಅವರ ಆದರ್ಶ, ಗುರಿಯನ್ನು ಮೈಗೂಡಿಸಿಕೊಳ್ಳಬೇಕೆಂದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿ, ಸ್ವಾಮಿ ವಿವೇಕಾನಂದರು ಈಶ್ವರಚಂದ್ರ ಸಾಗರ್, ರಾಜಾರಾಮ ಮೋಹನರಾಯ್ ಮತ್ತು ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು. ಈ ಮೂವರ ಆದರ್ಶಗಳನ್ನು ಜಾರಿಗೆ ತರಲು ಪ್ರಯತ್ನಿಸಿದರು. ದೇಶದ ಅಭಿವೃದ್ಧಿ ಯುವಕರಿಂದ ಮಾತ್ರ ಸಾಧ್ಯ ಎನ್ನುವುದನ್ನು ಮನಗಂಡಿದ್ದ ಅವರು, ಯುವಕರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದರು ಎಂದರು.
ವಿವಿಧ ಕ್ಷೇತ್ರಗಳ ಸಾಧಕರಾದ ಕಿರಣ್, ಅರುಣ್ ಶೆಟ್ಟಿ, ಮುರುಳಿ, ಮುರುಗೇಶ್, ವಕೀಲ ಸಿರಾಜ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪಾಲಿಕೆ ಮಾಜಿ ಸದಸ್ಯರಾದ ಕಾಶಿ ವಿಶ್ವನಾಥ್, ಯಮುನಾ ರಂಗೇಗೌಡ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್, ನಗರಾಧ್ಯಕ್ಷ ಚರಣ್, ಪ್ರಮುಖರಾದ ಕಲೀಂ ಪಾಶ, ಶಿವರಾಜ್, ರವಿ ಕಾಟಿಕೆರೆ, ಚಂದ್ರೋಜಿರಾವ್, ರಂಗೇನಹಳ್ಳಿ ರವಿ, ಜೀವನ್, ಸಿ.ಜಿ.ಮಧುಸೂದನ್, ಕೆ.ಚೇತನ್ ಇತರರಿದ್ದರು.