ಬಿಟ್ಟೇನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗಿಡ ನೆಡಲಾಯಿತು. ಬಸವರಾಜ್, ಜಗದೀಶ್, ಮೋಹನ್‌ಕುಮಾರ್, ಶಿವಲಿಂಗಮ್ಮ, ಇಂದಿರಮ್ಮ ಇತರರಿದ್ದರು.  
ನ್ಯೂಸ್

ಪರಿಸರ ರಕ್ಷಣೆ ನಿತ್ಯದ ಕಾಯಕವಾಗಲಿ

ಶಿವಕುಮಾರ ಎಸ್.ಪಿ.

ಕಡೂರು: ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಕೇವಲ ವರ್ಷದಲ್ಲಿ ಒಂದು ದಿನಕ್ಕೆ ಸೀಮಿತಗೊಳಿಸದೆ ಅದು ನಿತ್ಯದ ಕಾಯಕವಾಗಬೇಕಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ್ ಅಭಿಪ್ರಾಯಪಟ್ಟರು.

ತಾಲೂಕಿನ ಬಿಟ್ಟೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅಜ್ಜಂಪುರ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ಸ್ವಚ್ಛತೆ ಮತ್ತು ಸಂರಕ್ಷಣೆ ನಮ್ಮ ಮನೆ ಮತ್ತು ಸುತ್ತಮುತ್ತಲಿನ ವಾತಾವರಣದಿಂದ ಆರಂಭವಾಗಬೇಕು. ಇತ್ತೀಚೆಗೆ ಪ್ಲಾಸ್ಟಿಕ್ ಬಳಕೆ ಸಾಮಾನ್ಯ ಎಂಬಂತಾಗಿದೆ. ಆದರೆ ಬಳಸಿದ್ದನ್ನು ಮರು ಬಳಕೆಗೆ ನೀಡುತ್ತಿಲ್ಲ. ಹಾಗಾಗಿ ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಸರ ಕಾಳಜಿ ಮತ್ತು ಪ್ಲಾಸ್ಟಿಕ್ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.
ಬಿಟ್ಟೇನಹಳ್ಳಿ ಪಿಡಿಒ ಮಧುಮಾಲತಿ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಮೋಹನ್‌ಕುಮಾರ್, ಸಹಶಿಕ್ಷಕ ಲೋಕೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಶಿವಲಿಂಗಮ್ಮ, ಇಂದಿರಮ್ಮ, ಚಂದ್ರಶೇಖರ್, ಮೇಲ್ವಿಚಾರಕ ಜಗದೀಶ್, ಸೇವಾ ಪ್ರತಿನಿಧಿ ದ್ರಾಕ್ಷಾಯಣಮ್ಮ, ಸ್ವಸಹಾಯ ಸಂಘದ ಸದಸ್ಯರು ಇದ್ದರು.
ತಾಲ್ಲೂಕಿನ ಅಣ್ಣೇಗೆರೆ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿಯೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಜ್ಜಂಪುರ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸಂಜೀವ್ ಗೌಡ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿ ಉದಯ್‌ಕುಮಾರ್, ಮುಖ್ಯಶಿಕ್ಷಕ ಮಂಜುನಾಯ್ಕ ಇತರರಿದ್ದರು.