ಸೊರಬ ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದ ಧಾರ್ಮಿಕ ಸಭೆಯನ್ನು ಗುರುಕುಮಾರ್ ಪಾಟೀಲ್, ಕುಬಟೂರು ಗಿರೀಶ್ ಉದ್ಘಾಟಿಸಿದರು. ಶ್ರೀ ರಂಭಾಪುರಿ ಜಗದ್ಗುರುಗಳು, ಶ್ರೀ ಶಿವಾನಂದ ಶಿವಾಚಾರ್ಯರು, ಶ್ರೀ ರೇವಣಸಿದ್ಧ ಸ್ವಾಮೀಜಿ, ಮಹಾಂತ ಶ್ರೀಗಳು, ಶ್ರೀ ನಾಗಭೂಷಣ ಸ್ವಾಮೀಜಿ ಇತರರಿದ್ದರು. 
ನ್ಯೂಸ್

ಸುಖ, ಸಮೃದ್ಧಿಯಷ್ಟೇ ಸಂಸ್ಕೃತಿ ಬೆಳೆಯಲಿ

ಸೊರಬ: ವ್ಯಕ್ತಿತ್ವ ವಿಕಾಸಕ್ಕೆ ಧರ್ಮ ಮತ್ತು ಅಧ್ಯಾತ್ಮದ ಕೊಡುಗೆ ಅಪಾರ. ಹಾಗೆಯೇ ಅರಿವಿನ ಕಣ್ಣು ತೆರೆಸಲು ಗುರು ಮತ್ತು ಗುರು ಕಾರುಣ್ಯ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ರಂಭಾಪುರಿ ಶಾಖಾ ಮಠವಾದ ತಾಲೂಕಿನ ಶಾಂತಪುರ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ಆಯೋಜಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಹಾಗೂ 23ನೇ ವರ್ಷದ ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ಆಶೀರ್ವಚನ ನೀಡಿದರು.

ಮನುಷ್ಯ ಯಂತ್ರದಂತೆ ದುಡಿದರೂ ಶಾಂತಿ, ನೆಮ್ಮದಿಯಿಲ್ಲ. ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ನಿರಂತರ ಸಾಧನೆ ಮತ್ತು ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯ. ಜೀವನದಲ್ಲಿ ನಂಬಿಕೆ, ವಿಶ್ವಾಸ ಕಳೆದುಹೋದರೆ ಬದುಕು ತುಂಬ ಕಷ್ಟ. ಸುಖ, ಸಮೃದ್ಧಿ ಬೆಳೆದಂತೆ ಸಂಸ್ಕೃತಿ ಬೆಳೆಯುತ್ತಿಲ್ಲ. ಸಮಾಜದಲ್ಲಿ ವಿದ್ಯಾವಂತರ ಪ್ರಮಾಣ ಹೆಚ್ಚಿದೆ. ಆದರೆ ಹೃದಯ ಪರಿವರ್ತನೆ ಆಗದಿರುವುದೇ ಇಂದಿನ ಗೊಂದಲಗಳಿಗೆ ಕಾರಣ ಎಂದರು.

ಅಶಾಂತಿ, ಅಜ್ಞಾನದ ತಾಕಲಾಟದಲ್ಲಿ ಸಮಾಜ ಬಡವಾಗಬಾರದೆಂದು ಜಗದ್ಗುರು ರೇಣುಕಾಚಾರ್ಯರು ಸಂದೇಶ ನೀಡಿದ್ದಾರೆ. ನಾಗರಿಕತೆ ನೆಪದಲ್ಲಿ ನಿಜವಾದ ಮೌಲ್ಯಗಳು ಕಣ್ಮರೆ ಆಗಬಾರದು. ಮನುಷ್ಯನಲ್ಲಿ ದೈವೀ ಗುಣಗಳು ಬೆಳೆದು ಬಂದರೆ ಶ್ರೇಯಸ್ಸು ಲಭಿಸುತ್ತದೆ. ಶಾಂತಪುರ ಸಂಸ್ಥಾನ ಹಿರೇಮಠವು ಭಕ್ತ ಸಮುದಾಯಕ್ಕೆ ಸಂಸ್ಕಾರ ಮತ್ತು ಧರ್ಮದ ಅರಿವು ಮೂಡಿಸುತ್ತಿದೆ ಎಂದರು.

ಶಾಂತಪುರ ಸಂಸ್ಥಾನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಒಳ್ಳೆಯವ ಅಥವಾ ಕೆಟ್ಟವನಾಗಲು ಆತನ ನಡವಳಿಕೆಯೇ ಮೂಲ ಕಾರಣ. ಮನುಷ್ಯರ ನಡುವಿನ ಕಂದಕಗಳನ್ನು ಮುಚ್ಚಿ, ಸಾಮರಸ್ಯ ಬೆಳೆಸುವುದೇ ಧರ್ಮದ ಗುರಿ ಎಂದು ಅಭಿಪ್ರಾಯಪಟ್ಟರು.

ಕಾಳಂಗಿ ಭಜನಾ ಮಂಡಳಿ ಅಗಸನಹಳ್ಳಿ, ಕಲ್ಲೇಶ್ವರ ಭಜನಾ ಸಂಘದರು ಭಜನೆ ನಡೆಸಿಕೊಟ್ಟರು. ಸೊರಬ ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಗುರುಕುಮಾರ್ ಪಾಟೀಲ್, ಜಿಪಂ ಮಾಜಿ ಸದಸ್ಯ ಕುಬಟೂರು ಗಿರೀಶ್ ಧರ್ಮಸಭೆ ಉದ್ಘಾಟಿಸಿದರು. ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ, ಮಳಲಿ ಮಠದ ಶ್ರೀ ನಾಗಭೂಷಣ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ಸಂಗೊಳ್ಳಿ ಶ್ರೀ ಗುರುಲಿಂಗ ಸ್ವಾಮೀಜಿ, ಕುರವತ್ತಿ ಹಿರೇಮಠದ ನಂದೀಶ್ವರ ಶ್ರೀಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು, ಸದಾನಂದ ಗೌಡ, ಶಿಮುಲ್ ನಿರ್ದೇಶಕ ದಯಾನಂದ ಗೌಡ, ವಿರಶೈವ ಮಹಾಸಭಾ ಜಡೆ ಹೋಬಳಿ ಘಟಕದ ಅಧ್ಯಕ್ಷ ಕೆ.ಬಂಗಾರಪ್ಪ ಗೌಡ, ಬಂಕವಳ್ಳಿ ಬಿ.ವೀರೇಂದ್ರ ಗೌಡ, ಶಿರಸಿ ಬಸವರಾಜ ಗೌಡ, ಸಿ.ಎಚ್.ಬಾಳನಗೌಡ, ಶಿವಲಿಂಗೇಗೌಡ, ಗುರು ಗೌಡಬಾಸೂರು, ರಾಜು ಗೌಡ, ಮಿಲನ್ ಪಾಟೀಲ್, ನಾಗರಾಜ್ ಗೌಡ ಇತರರಿದ್ದರು.