ಎಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ರುವ ಐಎಎಸ್ ಹುದ್ದೆಗೆ ಆಯ್ಕೆಯಾಗಿರುವ ಚಿದಾನಂದ ಅವರನ್ನು ಶಾಸಕ ಅನಿಲ್ ಚಿಕ್ಕಮಾದು ಅಭಿನಂದಿಸಿದರು. 
ನ್ಯೂಸ್

ಚಿದಾನಂದ ಸಾಧನೆ ಮಾದರಿಯಾಗಲಿ

ಎಚ್.ಡಿ.ಕೋಟೆ: ಪಟ್ಟಣದ ವೆಂಕಟಸುಬ್ಬನಾಯಕ ಅವರ ಮಗ ಎಚ್.ಎಸ್. ಚಿದಾನಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 120ನೇ ರಾಂಕ್ ಪಡೆದು ಐಎಫ್‌ಎಸ್‌ಗೆ ಆಯ್ಕೆ ಆಗುವ ಮೂಲಕ ತಾಲೂಕಿಗೆ ಮತ್ತು ನಾಯಕ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣ ಹೌಸಿಂಗ್ ಬೋರ್ಡ್‌ನಲ್ಲಿರುವ ಚಿದಾನಂದ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿ ಮಾತನಾಡಿದರು. ನಮ್ಮ ತಾಲೂಕಿನ ವಿದ್ಯಾರ್ಥಿಗಳು ದೇಶದ ಪ್ರಮುಖ ಯುಪಿಎಸ್‌ಯಂಥ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಯಶಸ್ಸಿಯಾಗಬೇಕು. ಜತೆಗೆ ತಾಲೂಕಿನ ವಿದ್ಯಾರ್ಥಿಗಳಿಗೆ ಚಿದಾನಂದ ಅವರ ಶೈಕ್ಷಣಿಕ ಬದುಕು ಮಾದರಿಯಾಗಬೇಕಾಗಿದೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ‌್ಯಾಂಕ್ ಪಡೆಯಬೇಕಾದರೆ ಶ್ರದ್ಧೆ, ಪರಿಶ್ರಮ ಅತಿ ಮುಖ್ಯ, ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರದಲ್ಲಿ ಆಸಕ್ತಿ ತೋರಿಸಿದರೆ ತಮ್ಮ ಗುರಿ ಸಾಧಿಸಿ ಉತ್ತಮ ಜೀವನ ನಡೆಸಬಹುದಾಗಿದೆ. ತಾಲೂಕಿನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ನಾನು ಹೆಚ್ಚು ಹೊತ್ತು ನೀಡುತ್ತಿದ್ದು, ಶೈಕ್ಷಣಿಕವಾಗಿ ತಾಲೂಕು ಪ್ರಗತಿಯತ್ತ ಸಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಸಹ ನಗರ ಮಟ್ಟದ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಫಲಿತಾಂಶ ನೀಡುತ್ತಿದ್ದಾರೆ ಎಂದರು.
ಐಎಎಸ್ ಮತ್ತು ಐಪಿಎಸ್ ಮಾಡುವ ತಾಲೂಕಿನ ಯಾವುದೇ ವಿದ್ಯಾರ್ಥಿಗಳಿಗೆ ನನ್ನ ಸಂಪೂರ್ಣ ಸಹಕಾರ ಬೆಂಬಲ ನೀಡುವ ಕೆಲಸ ಮಾಡುತ್ತೇನೆ. ಇಂತಹ ವಿದ್ಯಾರ್ಥಿಗಳಿಂದ ತಾಲೂಕು ಕೀರ್ತಿ ಹಾಗೂ ಆ ಸಮುದಾಯಕ್ಕೂ ಕೀರ್ತಿ ಸಿಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಚಿದಾನಂದ ಅವರ ತಂದೆ ಉಪನ್ಯಾಸಕ ವೆಂಕಟಸುಬ್ಬ ನಾಯಕ, ತಾಯಿ ಮಂಜುಳಾ, ತಾತ ಶಂಭುಲಿಂಗ ನಾಯಕ, ಮೈಮೂಲ್ ನಿರ್ದೇಶಕ ಹಿರೇಗೌಡ, ನಾಗನಹಳ್ಳಿ ಪ್ರದೀಪ, ಗಣೇಶ್ ಆಚಾರ್, ವಕೀಲ ಹನುಮೇಶ್, ಪರಶಿವಮೂರ್ತಿ, ಅಶೋಕ್, ಮೈಮುಲ್ ನಿರ್ದೇಶಕಿ ದಾಕ್ಷಾಯಿಣಿ ಮತ್ತಿತರರಿದ್ದರು.