ಶ್ರೀನಗರ: ನಿನ್ನೆ ಕುಲ್ಗಾಂವ್ನಲ್ಲಿ ನಡೆದ ಯುವ ಬಿಜೆಪಿ ನಾಯಕರ ಹತ್ಯೆ ಯ ಹಿಂದೆ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಕೈವಾಡ ಇದೆ ಎಂದು ಕಾಶ್ಮೀರ ಐಜಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಲಷ್ಕರ್ ಎ ತೊಯ್ಬಾದ ಒಂದು ಭಾಗವಾದ ರೆಸಿಸ್ಟನ್ಸ್ ಫ್ರಂಟ್ನವರೇ ಈ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಕುಲಗಾಂವ್ನಲ್ಲಿ ಮೂವರು ಬಿಜೆಪಿ ನಾಯಕರಾದ ಫಿದಾ ಹುಸ್ಸೇನ್, ಉಮರ್ ಹಜಾಮ್ ಮತ್ತು ಉಮರ್ ರಶೀದ್ ಬೇಗ್ ಅವರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಈ ಘಟನೆ ಕಾಜಿಗುಂಡದ ವೈಕೆ ಪೋರಾದಲ್ಲಿರುವ ಈದ್ಗಾದಲ್ಲಿ ನಡೆದಿದೆ. ರಾತ್ರಿ 8.30ರ ಸುಮಾರಿಗೆ ಉಗ್ರರು ಗುಂಡಿನ ದಾಳಿ ನಡೆಸುವಾಗ ಸಂತ್ರಸ್ತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ದಾಳಿಕೋರರು ಆಲ್ಟೋ ಕಾರಿನಲ್ಲಿ ಪರಾರಿಯಾದರೆಂದು ಸ್ಥಳೀಯರು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.