ಶಿವಮೊಗ್ಗ: ಜಿಲ್ಲಾಮಟ್ಟದಲ್ಲಿ ಮುದ್ರಣ ಕೈಗಾರಿಕೆ ಕ್ಲಸ್ಟರ್ ಸ್ಥಾಪಿಸಬೇಕು. ಅದು ಸಾಧ್ಯವಾದರೆ ಮಾತ್ರ ಮುದ್ರಣ ಕ್ಷೇತ್ರದ ಬೆಳವಣಿಗೆ ಆಗಲಿದೆ ಎಂದು ಅಖಿಲ ಭಾರತ ಮುದ್ರಣಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಪ್ರಿಂಟಿಂಗ್ ಪಾರ್ಕ್ ಕ್ಲಸ್ಟರ್‌ನ ಅಧ್ಯಕ್ಷ ಸಿ.ಆರ್.ಜನಾರ್ದನ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಭಾನುವಾರ ಶಿವಮೊಗ್ಗ ಮಲೆನಾಡು ಮುದ್ರಕರ ಸಂಘ ಮತ್ತು ಬೆಂಗಳೂರು ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಆಶ್ರಯದಲ್ಲಿ ಮುದ್ರಣ ಕ್ಷೇತ್ರದ ಇಂದಿನ ಸವಾಲುಗಳು-ಪರಿಹಾರ ಕುರಿತು ತಜ್ಞರಿಂದ ಚರ್ಚೆ, ಮುದ್ರಕರೊಡನೆ ಸಂವಾದ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಕ್ಲಸ್ಟರ್ ನಿರ್ಮಾಣದ ಮೂಲಕ ವಿವಿಧ ಚಟುವಟಿಕೆಗಳನ್ನು ನಡೆಸಬೇಕು. ದರಪಟ್ಟಿ ನಿಗದಿ ಮಾಡಿಕೊಳ್ಳಬೇಕು. ಗ್ರಾಹಕರು ತಮ್ಮಲ್ಲಿ ಬರದೆ ಪಕ್ಕದ ಮುದ್ರಣಾಲಯಕ್ಕೆ ಹೋದರೆ ನಿರಾಸೆಗೊಳ್ಳದೆ ಕೆಲಸವನ್ನು ಮುಂದುವರಿಸಬೇಕು. ಆ ಮೂಲಕ ವೃತ್ತಿ ಬಾಂಧವ್ಯವನ್ನು ಉಳಿಸಿ ಬೆಳೆಸಿಕೊಳ್ಳಬೇಕು. ಪರಸ್ಪರ ಮಾತನಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್.ಅಶೋಕ್‌ಕುಮಾರ್ ಮಾತನಾಡಿದರು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ವಿಜಯನಗರ, ಹಾಸನ, ಉಡುಪಿ, ಚಿಕ್ಕಮಗಳೂರು ಹಾಗೂ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ಮುದ್ರಣಕಾರರು ಪಾಲ್ಗೊಂಡಿದ್ದರು. ಜಿಲ್ಲಾ ವಾಣಿಜ್ಯ ವತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿ ಸಂಚಾಲಕ ಎಂ.ಮಹೇಶ್‌ಕುಮಾರ್, ದಾವಣಗೆರೆ ಡಿವಿಜನ್ ಸಂಚಾಲನಾ ಸಮಿತಿ ಉಪಾಧ್ಯಕ್ಷ ಎ.ಎಂ.ಪ್ರಕಾಶ್, ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಎಂ.ಮಾಧವಾಚಾರ್, ಸಂಘದ ಕಾರ್ಯದರ್ಶಿ ಗಣೇಶ್ ಬೀಳಗಿ ಇದ್ದರು.