Leopard in kitchen: ತಡರಾತ್ರಿ ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದು ನೇರವಾಗಿ ಮನೆಯ ಅಡುಗೆಮನೆಗೆ ನುಗ್ಗಿದ್ದು, ಮನೆಯವರ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದೆ. ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯ ಚಂಬಾ ಸಮೀಪದ ಸೌಂದ್‌ಕೋಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸೌಂದ್‌ಕೋಟಿ ಗ್ರಾಮದ ವಸತಿ ಮನೆಯೊಂದರಲ್ಲಿ ಎಲ್ಲರೂ ನಿದ್ರಿಸುತ್ತಿದ್ದ ವೇಳೆ, ಆಹಾರ ಅರಸುತ್ತಾ ಬಂದ ಚಿರತೆ ಮನೆಯೊಳಗೆ ನುಗ್ಗಿ ನೇರವಾಗಿ ಅಡುಗೆಮನೆ ಸೇರಿಕೊಂಡಿದೆ. ಶಬ್ದ ಕೇಳಿ ಎಚ್ಚರಗೊಂಡ ಮನೆಯ ಮಹಿಳೆ ಜಯಂತಿ ದೇವಿ ಮತ್ತು ಕುಟುಂಬಸ್ಥರು ಅಡುಗೆಮನೆಯಲ್ಲಿ ಚಿರತೆ ಇರುವುದನ್ನು ಕಂಡು ಒಮ್ಮೆಲೇ ಬೆಚ್ಚಿಬಿದ್ದಿದ್ದಾರೆ.
ಚಿರತೆಯನ್ನು ಕಂಡು ಗಾಬರಿಯಾದರೂ ಧೈರ್ಯ ಕಳೆದುಕೊಳ್ಳದ ಜಯಂತಿ ದೇವಿ ಹಾಗೂ ಕುಟುಂಬಸ್ಥರು, ತಕ್ಷಣವೇ ಅಡುಗೆಮನೆಯ ಬಾಗಿಲನ್ನು ಹೊರಗಿನಿಂದ ಮುಚ್ಚಿ ಚಿಲಕ ಹಾಕಿದ್ದಾರೆ. ಇದರಿಂದ ಚಿರತೆ ಮನೆಯ ಇತರ ಕೋಣೆಗಳಿಗೆ ನುಗ್ಗುವುದು ತಪ್ಪಿದ್ದು, ಕುಟುಂಬಸ್ಥರೆಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.
ಘಟನೆ ಕುರಿತು ಮನೆಯವರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ರಕ್ಷಣಾ ತಂಡ, ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅದೇ ರಾತ್ರಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದಿದೆ.
ಈ ಘಟನೆಯಲ್ಲಿ ಮನೆಯವರಿಗಾಗಲಿ ಅಥವಾ ಚಿರತೆಗಾಗಲಿ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಉತ್ತರಾಖಂಡದ ಗುಡ್ಡಗಾಡು ಗ್ರಾಮಗಳಲ್ಲಿ ಪದೇ ಪದೇ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.