ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿ ಚಿರತೆ ಹಾವಳಿ ತಪ್ಪಿಸಲು ಚಿರತೆ ಕಾರ್ಯಪಡೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ಆನೆ ಕಾರ್ಯಪಡೆ ರಚನೆ ಮಾಡಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅನುಮೋದನೆ ನೀಡಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್, ತಿಪಟೂರು, ಮಧುಗಿರಿ, ಪಾವಗಢ ಮತ್ತು ಕೊರಟಗೆರೆ ಪ್ರದೇಶದಲ್ಲಿ ಚಿರತೆ ಹಾವಳಿ ಹಿನ್ನೆಲೆಯಲ್ಲಿ ಚಿರತೆ ಕಾರ್ಯಪಡೆ ರಚಿಸಿ 59 ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿರತೆ ಕಾರ್ಯಪಡೆ ಮುಖ್ಯಸ್ಥರಾಗಿರಲಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ಪಶು ವೈದ್ಯರು, ಒಬ್ಬ ವಲಯ ಅರಣ್ಯಾಧಿಕಾರಿ, 4 ಉಪ ವಲಯ ಅರಣ್ಯಾಧಿಕಾರಿ, 8 ಗಸ್ತು ಅರಣ್ಯ ಪಾಲಕರು, 5 ವಾಹನ ಚಾಲಕರು ಹಾಗೂ ಹೊರಗುತ್ತಿಗೆಯ 40 ಸಿಬ್ಬಂದಿಯನ್ನು ಇರಲಿದ್ದಾರೆ. 4 ತಂಡದಲ್ಲಿ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ. ಚಿರತೆ ಹಾವಳಿ ಇರುವ ಗ್ರಾಮಗಳಲ್ಲಿ ಗಸ್ತು ನಡೆಸಲಿದ್ದು, ಜಮೀನು, ವಸತಿ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡರೆ ಸೆರೆಗೆ ತುರ್ತು ಕ್ರಮ ವಹಿಸಲಿದೆ. ಜಿಲ್ಲಾಡಳಿತದೊಂದಿಗೆ ಸಮನ್ವಯತೆಯೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಆನೆ ಕಾರ್ಯಪಡೆ :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆನೆಗಳನ್ನು ಮರಳಿ ಕಾಡಿಗಟ್ಟಲು ಪ್ರತ್ಯೇಕ ಆನೆ ಕಾರ್ಯಪಡೆ ರಚಿಸಲು 48 ಸಿಬ್ಬಂದಿ ನಿಯೋಜಿಸಲಾಗಿದೆ. ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಹಿಸಲಿದ್ದು, ಒಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ಪಶುವೈದ್ಯಾಧಿಕಾರಿ, ಒಬ್ಬರು ವಲಯ ಅರಣ್ಯಾಧಿಕಾರಿ, ನಾಲ್ವರು ಉಪ ವಲಯ ಅರಣ್ಯಾಧಿಕಾರಿ ಹಾಗೂ 8 ಅರಣ್ಯ ರಕ್ಷಕರು ಹಾಗೂ 32 ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿ ಇರಲಿದ್ದಾರೆ. ಕಾಡಾನೆಗಳು ಓಡಾಡುವ ವಸತಿ ಪ್ರದೇಶ, ರೈತರ ತೋಟ, ಜಮೀನಿನ ಬಳಿ ಗಸ್ತು ತಿರುಗಲಿದ್ದು, ಆನೆಗಳು ಕಂಡು ಬಂದಲ್ಲಿ ಕಾಡಿಗೆ ಮರಳಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಿದೆ ಮತ್ತು ಆನೆಗಳ ಚಲನವಲನದ ಬಗ್ಗೆ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಆ ಮೂಲಕ ಸಾರ್ವಜನಿಕರಿಗೆ ಮುನ್ನಚ್ಚರಿಕೆ ಸಂದೇಶ ರವಾನಿಸಲು ನೆರವಾಗಲಿದೆ. ರೈತರಿಗೆ ಉಂಟಾಗುತ್ತಿದ್ದ ಬೆಳೆ ಹಾನಿ ತಪ್ಪಿಸಲು ಮತ್ತು ಜೀವ ಉಳಿಸಲು ಸಹಕಾರಿ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.