ಗುಂಡ್ಲುಪೇಟೆ ತಾಲೂಕಿನ ಕರಕಲಮಾದಹಳ್ಳಿ ಗ್ರಾಮದ ನಟರಾಜು ಎಂಬುವರ ಜಮೀನಿನಲ್ಲಿ ಬೋನಿಗೆ ಬಿದ್ದ ಚಿರತೆ. 
ನ್ಯೂಸ್

ಕರಕಲಮಾದಹಳ್ಳಿಯಲ್ಲಿ ಚಿರತೆ ಸೆರೆ

ವಸಂತಕುಮಾರ್ ಬಿ

ಗುಂಡ್ಲುಪೇಟೆ: ತಾಲೂಕಿನ ಕರಕಲಮಾದಹಳ್ಳಿ ಗ್ರಾಮದ ಸುತ್ತಮುತ್ತಲೂ ಸಾಕುಪ್ರಾಣಿಗಳನ್ನು ಕೊಲ್ಲುತ್ತಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದು ಸಾರ್ವಜನಿಕರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತಲೂ ಚಿರತೆಯೊಂದು ಸಂಚರಿಸುತ್ತಾ ಮೇಕೆಗಳು ಹಾಗೂ ಹಸುಗಳ ಮೇಲೆ ದಾಳಿ ನಡೆಸುತ್ತಿತ್ತು. ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಬಫರ್ ವಲಯದ ಅರಣ್ಯಾಧಿಕಾರಿಗಳು ಶನಿವಾರ ಗ್ರಾಮದ ನಟರಾಜು ಎಂಬುವರ ಜಮೀನಿನಲ್ಲಿ ಬೋನು ಇರಿಸಿದ್ದರು. ಭಾನುವಾರ ನಸುಕಿನಲ್ಲಿ ಬೋನಿನೊಳಗೆ ಕೂಡಿಹಾಕಿದ್ದ ಮೇಕೆಯನ್ನು ತಿನ್ನಲು ಬಂದ 2 ವರ್ಷ ಹೆಣ್ಣು ಚಿರತೆ ಸೆರೆಯಾಗಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಬಂಡೀಪುರಕ್ಕೆ ಕೊಂಡೊಯ್ದರು. ಚಿರತೆಯನ್ನು ಮೂಲೆಹೊಳೆ ವಲಯದ ಅರಣ್ಯಕ್ಕೆ ಬಿಡಲಾಗಿದೆ ಎಂದು ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ತಿಳಿಸಿದ್ದಾರೆ.