ಚಿರತೆ ದಾಳಿಯಿಂದ ಗಾಯಗೊಂಡ ಮರಾಠಿ ಗ್ರಾಮದ ಗಣೇಶ ಕಂಚಿಕೇರಿ. 
ನ್ಯೂಸ್

ಮಲಗಿದ್ದವನ ಮೇಲೆ ಚಿರತೆ ದಾಳಿ

ನವೀನ ಬಿ.ಎಂ

ಬ್ಯಾಕೋಡು(ಸಾಗರ): ಸಾಗರ ತಾಲೂಕಿನ ಬ್ಯಾಕೋಡು ಸಮೀಪದ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮದಲ್ಲಿ ಬುಧವಾರ ರಾತ್ರಿ ರೈತನ ಮೇಲೆ ಚಿರತೆ ದಾಳಿ ಮಾಡಿದ್ದು ಗಾಯಾಳುವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಗರ ತಾಲೂಕಿನ ಮರಾಠಿ ಗ್ರಾಮದ ಗಣೇಶ ಕಂಚಿಕೇರಿ ಗಾಯಗೊಂಡವರು. ಬುಧವಾರ ರಾತ್ರಿ ತಮ್ಮ ಪೂರ್ಣವಾಗದ ಮನೆಯಲ್ಲಿ ಗಣೇಶ ಕಂಚಿಕೇರಿ ಕುಟುಂಬದವರೊಂದಿಗೆ ಮಲಗಿದ್ದು ಈ ವೇಳೆ ಸಾಕು ನಾಯಿ ಮೇಲೆ ಚಿರತೆ ದಾಳಿ ಮಾಡಿದೆ.
ಹೆದರಿದ ನಾಯಿ ಜೀವ ಉಳಿಸಿಕೊಳ್ಳಲು ಮನೆಯೊಳಗೆ ನುಗ್ಗಿ ಮೂಲೆ ಸೇರಿದ್ದು ಅಲ್ಲಿಗೂ ಬಂದ ಚಿರತೆ, ಗಣೇಶ ಮೇಲೆ ದಾಳಿ ಮಾಡಿ ಕೈಕಚ್ಚಿದೆ.
ಗಾಯಾಳು ಗಣೇಶ ಕಂಚಿಕೇರಿ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆಯಿಂದ ಕಾಡಂಚಿನ ಗ್ರಾಮದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಚಿರತೆ ಸೆರೆ ಹಿಡಿಯಲು ಪರಿಶೀಲಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.