ನ್ಯೂಸ್

ಕರೊನಾ ಸೋಂಕಿತರ ಕೈ ಕಾಲು ಕಟ್ಟಿ ಚಿಕಿತ್ಸೆ!

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರ ಕೈ ಕಾಲು ಕಟ್ಟಿ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ, ರೋಗಿಗಳನ್ನು ಹೀನಾಯ ಸ್ಥಿತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ಕರೊನಾದಿಂದ ಸಾವಿಗೀಡಾದವರ ಮುಖವನ್ನೂ ಬಂಧುಗಳಿಗೆ ತೋರಿಸುತ್ತಿಲ್ಲ...

ಕರೊನಾ ಚಿಕಿತ್ಸೆಯಲ್ಲಿನ ಈ ಎಡವಟ್ಟುಗಳು ಪ್ರಸ್ತಾಪವಾದದ್ದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ. ಅದೂ ಆಳುವ ಬಿಜೆಪಿ ಸದಸ್ಯರ ಬಾಯಿಂದ ಕೇಳಿಬಂದ ದೂರುಗಳಿವು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಸತೀಶ್ ರೆಡ್ಡಿ, ಬೆಂಗಳೂರಿನ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಬೇರೆ ಕಡೆ ಹೋಗುತ್ತಾರೆಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ನನ್ನ ತಂದೆ ಸೇರಿಸಿದ್ದ ಆಸ್ಪತ್ರೆಯಲ್ಲಿ ಕರೊನಾ ರೋಗಿಗೆ ಕೈಕಾಲು ಕಟ್ಟಿದ್ದನ್ನು ಖುದ್ದು ನೋಡಿದ್ದೇನೆ ಎಂದು ಹೇಳಿ ಅಚ್ಚರಿ ಮೂಡಿಸಿದರು. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್​ನ ಈಶ್ವರ ಖಂಡ್ರೆ, ಬೀದರ್​ನಲ್ಲೂ ಇಂಥದ್ದೇ ವಿಚಾರ ಕೇಳಿದ್ದೇನೆ. ಅದರ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಗೆ ತರಾಟೆಗೆ ತೆಗೆದುಕೊಂಡಿದ್ದೆ ಎಂದು ತಿಳಿಸಿದರು. ಖಾಸಗಿ ಆಸ್ಪತ್ರೆಗಳ ಐಸಿಯುಗಳಲ್ಲಿ ಇಂತಹ ವಾತಾವರಣ ಇದೆ. ಇದನ್ನು ಮೊದಲು ತಪ್ಪಿಸಬೇಕು. ಐಸಿಯುಗಳಿಗೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಎಲ್ಲ ಸದಸ್ಯರು ಒಮ್ಮತದ ಸಲಹೆ ನೀಡಿದರು.

ಕರೊನಾ ಟೆಸ್ಟ್ ಮಾಡುತ್ತಾರೆ. ತರುವಾಯ ಅವರನ್ನು ಮನೆಗೆ ಕಳಿಸುತ್ತಾರೆ. ಅವರು ಮನೆಗೆ ಬಂದು ಎಲ್ಲ ಕಡೆ ಓಡಾಡುತ್ತಾರೆ. ಟೆಸ್ಟ್ ರಿಸಲ್ಟ್ ಬರುವವರೆಗೆ ಅವರನ್ನು ಹೊರಗೆ ಬಿಡಬಾರದು. ಇದರ ಬಗ್ಗೆ ಮೊದಲು ಎಚ್ಚೆತ್ತುಕೊಳ್ಳಬೇಕು. ಟೆಸ್ಟ್ ಹೀಗಾದರೆ ಸೋಂಕು ಹೆಚ್ಚಾಗದೆ ಇನ್ನೇನಾಗುತ್ತೆ ಎಂದು ಬಿಜೆಪಿಯ ಎ.ಎಸ್.ನಡಹಳ್ಳಿ ಸಭೆಯಲ್ಲಿ ಪ್ರಶ್ನಿಸಿದರು.

ಕರೊನಾದಿಂದ ಮೃತಪಟ್ಟವರ ಮುಖ ಕೂಡ ಕಾಣದ ರೀತಿ ಪ್ಯಾಕ್ ಮಾಡಲಾಗುತ್ತಿದೆ. ಕೊನೇ ಪಕ್ಷ ಮುಖ ಕಾಣುವಂತೆ ಪ್ಲಾಸ್ಟಿಕ್​ನಿಂದ ಕವರ್ ಮಾಡಿದರೆ ಒಳ್ಳೆಯದು. ಹಾಗೆ ಮಾಡುವಂತೆ ಸಭೆಯಲ್ಲಿ ಸೂಚನೆ ನೀಡಿದ್ದೇವೆ. | ಸತೀಶ್ ರೆಡ್ಡಿ ಬಿಜೆಪಿ ಶಾಸಕ

ಆಯುಕ್ತರಿಗೆ ಹಲವು ಸೂಚನೆ

ಬಿಬಿಎಂಪಿ ಆಯುಕ್ತರಿಗೆ ಹಲವು ಸೂಚನೆ ನೀಡಿದ್ದೇವೆ. ರೋಗಿಯ ಊಟ, ತಿಂಡಿ ಟ್ರೀಟ್​ವೆುಂಟ್ ಬಗ್ಗೆ ಸಿಸಿ ಕ್ಯಾಮರಾ ಮೂಲಕ ಮಾನಿಟರ್ ಮಾಡಬೇಕು. ಬಿಐಇಸಿ ಕರೊನಾ ಕೇರ್ ಸೆಂಟರ್​ನಲ್ಲಿ 15 ಜನಕ್ಕೆ ಒಂದು ಶೌಚಗೃಹ ಇದೆ. ಇದು ಸರಿಯಲ್ಲ ಎಂದು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ತಿಳಿಸಿದರು. ಕರೊನಾ ರೋಗಿಗಳು ಓಡಿ ಹೋಗಬಾರದು ಎಂದು ಕಾಲು ಕಟ್ಟುತ್ತಾರೆ ಎನ್ನುವ ಚರ್ಚೆ ಆಗಿದೆ. ಅದರೆ, ಅದನ್ನು ಆಯುಕ್ತರು ಅಲ್ಲಗಳೆದಿದ್ದಾರೆ ಎಂದರು. ಸಚಿವ ಸುಧಾಕರ್ ಅಥವಾ ಬೇರೆಯವರ ಹೇಳಿಕೆ ಬಗ್ಗೆ ಮಾತನಾಡುವುದಿಲ್ಲ. ಕರೊನಾ ಪರಿಕರಗಳ ಖರೀದಿಯಲ್ಲಿ ಹಗರಣದ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಮಾಹಿತಿ ಕೇಳಿದ್ದೇವೆ. ಅದಕ್ಕೆ ಇಲಾಖೆಯಿಂದ ಉತ್ತರ ಬಂದಿದೆ. ಸಿಎಜಿಯಿಂದ ವಿಶೇಷ ಆಡಿಟ್ ಆಗಬೇಕು ಎಂದಿದ್ದೇವೆ ಎಂದು ತಿಳಿಸಿದರು.

ಹೊಸ ಪ್ರಕರಣ ಇಳಿಮುಖ

ಬೆಂಗಳೂರು: ರಾಜಧಾನಿಯಲ್ಲಿ 3 ದಿನಗಳಿಂದ ಕರೊನಾ ಪ್ರಕರಣಗಳು ಕೊಂಚ ಇಳಿಕೆಯಾಗುತ್ತಿದ್ದು, ಮಂಗಳವಾರ 1,610 ಹೊಸ ಪ್ರಕರಣಗಳು ವರದಿಯಾಗಿವೆ. 17 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 1,293ಕ್ಕೆ ಏರಿಕೆಯಾಗಿದೆ.

ನಗರದಲ್ಲಿ ಪ್ರತಿ ದಿನ ಹೆಚ್ಚುವರಿಯಾಗಿ (10 ರಿಂದ 15 ಸಾವಿರ) ಸೋಂಕು ಪರೀಕ್ಷೆ ನಡೆಸಲಾಗುತ್ತಿದೆಯಾದರೂ, ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟದಿರುವುದು ಕೊಂಚ ನಿರಾಳತೆ ಮೂಡಿಸಿದೆ. ಈವರೆಗೆ ನಗರದಲ್ಲಿ ಸೋಂಕಿತರ ಸಂಖ್ಯೆ 77,038ಕ್ಕೆ ಏರಿಕೆಯಾಗಿದೆ.

ಮಂಗಳವಾರ ಒಂದೇ ದಿನ 1,508 ಮಂದಿ ಸೋಂಕಿನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ 42,674ಕ್ಕೆ ಏರಿಕೆಯಾಗಿದೆ. 33,070 ಮಂದಿ ಸೋಂಕಿತರು ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ಈ ಪೈಕಿ 329 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.