ನ್ಯೂಸ್

VIDEO| ದಿಗ್ಗಜ ಗಾಯಕ ಯೇಸುದಾಸ್​ಗೆ 80ರ ಸಂಭ್ರಮ: ಗಾನ ಗಂಧರ್ವನಿಗೆ ಪ್ರಧಾನಿ ಸೇರಿ ಅನೇಕರಿಂದ ಶುಭಾಶಯಗಳ ಮಹಾಪೂರ

ನವದೆಹಲಿ: ಕಳೆದ 6 ದಶಕಗಳಿಂದ ತಮ್ಮ ಸುಮಧುರ ಕಂಠದಿಂದಲೇ ವಿಶ್ವಾದ್ಯಂತ ಸಂಗೀತ ಪ್ರಿಯರನ್ನು ರಂಜಿಸುತ್ತಿರುವ ದಿಗ್ಗಜ ಗಾಯಕ ಕೆ.ಜೆ. ಯೇಸುದಾಸ್ ಅವರು ಶುಕ್ರವಾರ 80ನೇ ವಸಂತಕ್ಕೆ ಕಾಲಿಟ್ಟಿದ್ದು, ಎಲ್ಲಡೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ​

ಪ್ರಧಾನಿ ನರೇಂದ್ರ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್​ ಹಾಗೂ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸೇರಿ ವಿವಿಧ ಕ್ಷೇತ್ರದ ಗಣ್ಯರು ಗಾನ ಗಂಧರ್ವ ಎಂದೇ ಪ್ರಖ್ಯಾತರಾಗಿರುವ ಯೇಸುದಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಇನ್ನು ಸ್ಥಳೀಯ ಪತ್ರಿಕೆಗಳು ಯೇಸುದಾಸ್ ಅವರಿಗಾಗಿಯೇ ವಿಶೇಷ ಪೇಜ್​ಗಳನ್ನು ಮುಡಿಪಾಗಿಡುವ ಮೂಲಕ ಶುಭಕೋರಿದ್ದರೆ, ಟಿವಿ ಮಾಧ್ಯಮಗಳು ವಿಶೇಷ ಕಾರ್ಯಕ್ರಮಗಳ ಮೂಲಕ ಯೇಸುದಾಸ್ ​ಅವರಿಗೆ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದ್ದಾರೆ.

ಪ್ರಶಸ್ತಿಗಳ ಸುರಿಮಳೆ
2017ರಲ್ಲಿ ಕೇಂದ್ರ ಸರ್ಕಾರ ನೀಡುವ ಅತ್ಯುನ್ನತ ಪದ್ಮ ವಿಭೂಷಣ ಪ್ರಶಸ್ತಿಗೆ ಯೇಸುದಾಸ್​ ಪಾತ್ರರಾಗಿದ್ದಾರೆ. ಒಟ್ಟು 8 ರಾಷ್ಟ್ರೀಯ ಪ್ರಶಸ್ತಿ, 25 ಕೇರಳ ರಾಜ್ಯ ಪ್ರಶಸ್ತಿ, 5 ತಮಿಳುನಾಡು ರಾಜ್ಯ ಪ್ರಶಸ್ತಿ ಹಾಗೂ 4 ಆಂಧ್ರ ಪ್ರದೇಶ ಪ್ರಶಸ್ತಿಯನ್ನು ಯೇಸುದಾಸ್​ ಮುಡಿಗೇರಿಸಿಕೊಂಡಿದ್ದಾರೆ.

ಸುದೀರ್ಘವಾದ ಆರೋಗ್ಯಯುತ ಜೀವನ ದೊರಕಲಿ
80ನೇ ಹುಟ್ಟುಹಬ್ಬದ ಸುದಿನದಂದು ಬಹುಮುಖ ಪ್ರತಿಭೆ ಯೇಸುದಾಸ್​ ಅವರಿಗೆ ಶುಭಕೋರುತ್ತೇನೆಂದು ಪ್ರಧಾನಿ ಮೋದಿ ಅವರು ಟ್ವೀಟ್​ ಮಾಡಿದ್ದು, ಅವರ ಸುಮಧುರ ಸಂಗೀತ ಮತ್ತು ಭಾವಪೂರ್ಣ ಚಿತ್ರಣಗಳು ಎಲ್ಲೆಡೆ ಅವರನ್ನು ಪ್ರಖ್ಯಾತಿಗೊಳಿಸಿದೆ. ಭಾರತೀಯ ಸಂಸ್ಕೃತಿಗೆ ಅವರು ಸಾಕಷ್ಟು ಮೌಲ್ಯಯುತ ಕಾಣಿಕೆಗಳನ್ನು ನೀಡಿದ್ದಾರೆ. ಅವರಿಗೆ ಸುದೀರ್ಘವಾದ ಆರೋಗ್ಯಯುತವಾದ ಜೀವನ ದೊರಕಲಿ ಎಂದು ಪ್ರಧಾನಿ ಮೋದಿ ಬಯಸಿದ್ದಾರೆ.

ಎಂದಿನಂತೆಯೂ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ
ಇನ್ನು ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಯೇಸುದಾಸ್​ ಅವರು ಬೆಳಗ್ಗೆ ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿವರ್ಷವು ಹುಟ್ಟುಹಬ್ಬದ ಸಂದರ್ಭದಲ್ಲಿ ಯೇಸುದಾಸ್​ ಅವರು ತಮ್ಮ ಕುಟುಂಬ ಸಮೇತ ಮೂಕಾಂಬಿಕಾ ದೇವಸ್ಥಾಕ್ಕೆ ಭೇಟಿ ನೀಡುತ್ತಾರೆ. ಈ ಅಭ್ಯಾಸವನ್ನು ಕಳೆದ ನಾಲ್ಕು ದಶಕದಿಂದ ಚಾಚೂತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.

ಸುಮಾರು 25 ಸಾವಿರ ಸಿನಿಮಾ ಹಾಡುಗಳು, ಕರ್ನಾಟಕ ಸಂಗೀತ ಭಜನ ಹಾಗೂ ಭಕ್ತಿಗೀತೆಗಳು ಸೇರಿದಂತೆ ವಿವಿಧ ಬಗೆಯ 80 ಸಾವಿರ ಹಾಡುಗಳನ್ನು ಯೇಸುದಾಸ್​ ಹಾಡಿದ್ದಾರೆ. ಬಹುತೇಕ ಭಾರತೀಯ ಎಲ್ಲ ಭಾಷೆಗಳಲ್ಲಿಯೂ ಗಾನ ಗಂಧರ್ವ ತಮ್ಮ ಸುಮಧುರ ಕಂಠವನ್ನು ಪರಿಚಯಿಸಿದ್ದಾರೆ. (ಏಜೆನ್ಸೀಸ್​​)