ಬೆಂಗಳೂರು: ನೌಕರರ ರಜೆ ನಗದೀಕರಣವನ್ನು ವಿವೇಚನೆಯ ಉಡುಗೊರೆಯೆಂದು ಪರಿಗಣಿಸಲಾಗದು. ಅದೊಂದು ಸಂವಿಧಾನದಡಿ ಲಭ್ಯವಿರುವ ಕಾನೂನುಬದ್ಧ ಹಕ್ಕು ಎಂದು ಹೈಕೋರ್ಟ್ ಹೇಳಿದೆ. ಇದೇ ವೇಳೆ ವಾಟರ್‌ಮನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಪಾವಗಡ ಎಚ್.ಚನ್ನಯ್ಯಗೆ ಮೂರು ತಿಂಗಳಲ್ಲಿ 1.32 ಲಕ್ಷ ರೂ. ರಜೆ ನಗದೀಕರಣವನ್ನು ಶೇ.6 ಬಡ್ಡಿದರದಲ್ಲಿ ಪಾವತಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ರಜೆ ನಗದೀಕರಣ ಮಾಡದ ಸರ್ಕಾರದ ಕ್ರಮ ಪ್ರಶ್ನಿಸಿ ಎಚ್.ಚನ್ನಯ್ಯ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಅರ್ಜಿದಾರರ ಸೇವಾ ದಾಖಲೆಗಳ ಬಗ್ಗೆ ಪ್ರತಿವಾದಿ ಆಕ್ಷೇಪ ಎತ್ತಿದ್ದಾರೆ. ಆದರೆ, ಅವರು ಹಲವು ವರ್ಷಗಳಿಂದ ನಾನಾ ಆಡಳಿತ ಘಟಕಗಳಡಿ ಸೇವೆ ಸಲ್ಲಿಸಿದ್ದಾರೆ. ಸೇವಾ ನಿವೃತ್ತಿ ನಂತರ ಅವರಿಗೆ ಪಿಂಚಣಿ ಭತ್ಯೆಗಳನ್ನು ನೀಡುವಂತೆ ಗ್ರಾಮ ಪಂಚಾಯಿತಿ ಆದೇಶಿಸಿದೆ ಎಂದು ಹೇಳಿದೆ. ಅಲ್ಲದೆ, ಸುಪ್ರೀಂಕೋರ್ಟ್ ದಿಯೋಕಿನಂದನ್ ಪ್ರಸಾದ್ ವರ್ಸಸ್ ಸ್ಟೇಟ್ ಆಫ್ ಬಿಹಾರ ಪ್ರಕರಣದಲ್ಲಿ ಪಿಂಚಣಿ ಮತ್ತು ಗ್ರ್ಯಾಚುಟಿ ಪಾವತಿ ಉದ್ಯೋಗದಾತರ ವಿವೇಚನೆಗೆ ಒಳಪಟ್ಟಿರುವುದಿಲ್ಲ.
ಅದು ಕಾನೂನು ಬದ್ಧ ಹಕ್ಕು, ಪಿಂಚಣಿ, ಗ್ರ್ಯಾಚುಟಿ ಮತ್ತು ರಜೆ ನಗದೀಕರಣ ಸಂವಿಧಾನದ ಸೆಕ್ಷನ್ 19(1)(ಎಫ್)ಮತ್ತು ಸೆಕ್ಷನ್ 31(1)ರಡಿ ಲಭ್ಯವಿರುವ ಮೂಲಭೂತ ಹಕ್ಕಿನ ಭಾಗವಾಗಿದೆ. ಹಾಗಾಗಿ ಶಾಸನಬದ್ಧವಾಗಿ ಅವರಿಗೆ ರಜೆ ನಗದೀಕರಣ ನೀಡಬೇಕಾಗಿದೆ ಎಂದು ಆದೇಶಿಸಿದೆ. ಸಂವಿಧಾನದಡಿ ನಾಗರಿಕರಿಗೆ ರಕ್ಷಣೆ ಇದೆ. ಅದರಂತೆ ಸಂವಿಧಾನದ ಕಲಂ 300ಎ ಅಡಿ ವ್ಯಕ್ತಿ ವೈಯಕ್ತಿಕವಾಗಿ ಆಸ್ತಿ ಹೊಂದುವುದನ್ನು ನಿರ್ಬಂಧಿಸುವಂತಿಲ್ಲ. ಅದರಲ್ಲಿ ಗಳಿಕೆ ರಜೆ ನಗದೀಕರಣವೂ ಸೇರಿದೆ. ಈ ರೀತಿ ರಜೆ ನಗದೀಕರಣ ತಡೆ ಹಿಡಿಯುವುದು ಅಸಂವಿಧಾನಿಕ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:
ಎಚ್.ಚನ್ನಯ್ಯ 1979ರಲ್ಲಿ ಪಾವಗಡ ಪಂಚಾಯಿತಿಯಲ್ಲಿ ವಾಟರ್‌ಮನ್ ಆಗಿ ಸರ್ಕಾರಿ ಸೇವೆಗೆ ಸೇರಿದ್ದರು. ಆ ನಂತರ ಅವರು 2013ರಲ್ಲಿ ವಯಸ್ಸಹಜ ನಿವೃತ್ತಿ ಹೊಂದಿದ್ದರು. ಬಳಿಕ ಅಕೌಂಟೆಂಟ್ ಜನರಲ್ ಕಚೇರಿ ಚನ್ನಯ್ಯ ಅವರ ಸೇವಾ ವಿವರ ಹಾಗೂ ಅವರಿಗೆ ನೀಡಬೇಕಾದ ಪಿಂಚಣಿ ವಿವರಗಳನ್ನು ಲೆಕ್ಕ ಹಾಕಿತ್ತು. ಅದೇ ರೀತಿ ಜಿಪಂ ಸಿಇಒ ಮತ್ತು ಪಾವಗಡ ತಾಪಂ ಅಧಿಕಾರಿಗೆ ರಜೆ ನಗದೀಕರಣವನ್ನು ತ್ವರಿತವಾಗಿ ಇತ್ಯರ್ಥ ಮಾಡುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ ಇತ್ಯರ್ಥಪಡಿಸದಿದ್ದರಿಂದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆಗ ಪ್ರತಿವಾದಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರ್ಜಿದಾರರು ತಾತ್ಕಾಲಿಕ ನೌಕರರರಾಗಿದ್ದರು, ಅಲ್ಲದೆ, ಅವರು ಸೇವಾ ದಾಖಲೆಗಳ ಬಗ್ಗೆ ಸಂದೇಹವಿದೆ, ಅರ್ಜಿದಾರರು ಎಜಿ ಕಚೇರಿಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಅವರು ಆರಂಭದಲ್ಲಿ ಗ್ರಾಪಂನಲ್ಲಿ ಕೆಲಸ ಮಾಡಿದ್ದಕ್ಕೆ ದಾಖಲೆಗಳಲ್ಲಿ ಹೊಂದಿಕೆ ಆಗುತ್ತಿಲ್ಲ ಎಂದು ತಕರಾರು ಎತ್ತಿದ್ದರು.