ಶಿವಮೊಗ್ಗ: ಕೇವಲ ಭಾವನಾತ್ಮಕ ಪ್ರತಿಕ್ರಿಯೆಯಿಂದ ಕನ್ನಡ ಕಟ್ಟಲು ಸಾಧ್ಯವಿಲ್ಲ. ಈಗಿನ ಸನ್ನಿವೇಶದಲ್ಲಿ ಕನ್ನಡದ ಬೆಳವಣಿಗೆಗೆ ಕಾನೂನಾತ್ಮಕ ಹಾಗೂ ಕ್ರಿಯಾತ್ಮಕ ಪ್ರತಿಕ್ರಿಯೆಗಳೂ ಅಗತ್ಯ ಎಂದು ಚಿತ್ರ ನಿರ್ಮಾಪಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘದ 94ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ 22 ಪ್ರಾದೇಶಿಕ ಭಾಷೆಗಳು ಬಸವಳಿಯುತ್ತಿವೆ. ಆದರೆ ರಾಜ್ಯಗಳು ಭಾಷೆಯ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ. ಇದಕ್ಕೆ ನಮ್ಮ ಸಂವಿಧಾನ ತಡೆಗೋಡೆಯಂತೆ ನಿಂತಿದೆ ಎಂದು ಹೇಳಿದರು.
ಮಾತೃಭಾಷೆಯಲ್ಲಿ ಶಿಕ್ಷಣ ಎಂಬ ಪರಿಕಲ್ಪನೆಯಲ್ಲೇ ಗೊಂದಲವಿದೆ. ತೆಲುಗು ಮೂಲದ ಪತಿ, ತಮಿಳು ಮೂಲದ ಪತ್ನಿ ಬೆಂಗಳೂರಿನಲ್ಲಿ ನೆಲೆಸಿದ್ದರೆ ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕು? ಪ್ರಾದೇಶಿಕತೆಯ ಆಧಾರದಲ್ಲಿ ಗಡಿ ನಿರ್ಧರಿಸಿದ ನಾವು, ಭಾಷೆಗೆ ಮಾತ್ರ ಗಡಿಯ ಚೌಕಟ್ಟನ್ನು ವಿಧಿಸುವುದು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನದ ಆರ್ಟಿಕಲ್ 350 ಹಾಗೂ 351ರ ಪ್ರಕಾರ ಪ್ರಾದೇಶಿಕ ಭಾಷೆಗಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕು. ಇದುವರೆಗೆ ಸಂವಿಧಾನದಲ್ಲಿ ಎಷ್ಟೊಂದು ತಿದ್ದುಪಡಿಗಳಾಗಿವೆ. ದುರದೃಷ್ಟವೆಂದರೆ ಕನ್ನಡ ಭಾಷೆಗೆ ಅನುಕೂಲವಾಗುವ ಯಾವ ತಿದ್ದುಪಡಿಯೂ ಆಗಿಲ್ಲ. ಹೀಗಿದ್ದರೂ ನಾವು ತಾಳ್ಮೆಯಿಂದ ವರ್ತಿಸುತ್ತಿದ್ದೇವೆ. ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ವಿಷಾದಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿನಯ್ ಉಪಸ್ಥಿತರಿದ್ದರು. ಕರ್ನಾಟಕ ಸಂಘದ ನಾಲ್ವರು ಹಿರಿಯ ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕರ್ನಾಟಕ ಸಂಘದಿಂದ ಏರ್ಪಡಿಸಿದ್ದ ಸಮೂಹ ಗಾಯನ ಸ್ಪರ್ಧೆಯ ವಿಜೇತರಿಗೆ ಟಿ.ಎಸ್.ನಾಗಾಭರಣ ಪ್ರಶಸ್ತಿ ಪ್ರದಾನ ಮಾಡಿದರು.