ಕಿಯೆವ್/ಮಾಸ್ಕೊ: ಮರಿಯುಪೋಲ್ನಲ್ಲಿ ಯೂಕ್ರೇನ್ ಸೇನೆ ಶರಣಾಗಿ ಶಸ್ತ್ರ ತ್ಯಜಿಸಿದರೆ ಎಲ್ಲರನ್ನೂ ಜೀವ ಸಹಿತ ಬಿಡಲಾಗುವುದು ಎಂದು ರಷ್ಯಾ ಸೇನೆ ಮಂಗಳವಾರ ಎಚ್ಚರಿಕೆ ನೀಡಿದೆ. ದಕ್ಷಿಣದ ಬಂದರು ನಗರಿ ಮರಿಯುಪೋಲ್ ಅನ್ನು ಸಂಪೂರ್ಣವಾಗಿ ವಶಪಡಿಸಲು ರಷ್ಯಾ ಸೇನೆ ದಾಳಿಯನ್ನು ತೀವ್ರಗೊಳಿಸಿದೆ. ಶರಣಾಗತಿಗೆ ಮಾಸ್ಕೊದ ಸ್ಥಳೀಯ ಕಾಲಮಾನ ಭಾನುವಾರ ನಸುಕಿನ 3 ಗಂಟೆಯಿಂದ ಅವಕಾಶ ನೀಡುವುದಾಗಿ ಸೇನೆ ಘೋಷಿಸಿದೆ. ಮರಿಯುಪೋಲ್ನ ಸ್ಟೀಲ್ ಇಂಡಸ್ಟ್ರಿ ಪ್ರದೇಶದಲ್ಲಿ ಯೂಕ್ರೇನ್ನ ಹೋರಾಟಗಾರರ ಸಣ್ಣ ತುಕಡಿ ಮಾತ್ರವೇ ಉಳಿದುಕೊಂಡಿದ್ದು, ಪ್ರತಿರೋಧ ತೋರುತ್ತಿದೆ. ದಾಳಿ ತೀವ್ರಗೊಳಿಸಿದರೆ ಎಲ್ಲರೂ ಬಲಿಯಾಗಬೇಕಾದೀತು. ಇದಕ್ಕಾಗಿ ಶರಣಾಗತಿ ಅವಕಾಶ ನೀಡಲಾಗುತ್ತಿದೆ ಎಂದು ರಷ್ಯಾ ಸೇನೆ ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ಮರಿಯುಪೋಲ್ನಲ್ಲಿರುವ ಪ್ರತಿಯೊಬ್ಬರನ್ನೂ ಉದ್ದೇಶಪೂರ್ವಕವಾಗಿ ಹತ್ಯೆ ಮಾಡಲು ರಷ್ಯಾ ಪ್ರಯತ್ನಿಸುತ್ತಿದೆ. ರಷ್ಯಾ ಸೇನೆ ಸುತ್ತುವರಿದಿರುವ ನಗರದಲ್ಲಿ ಪ್ರತಿರೋಧ ತೋರುತ್ತಿರುವವರ ಜತೆಗೆ ಸರ್ಕಾರ ಸಂಪರ್ಕದಲ್ಲಿದ್ದು, ಅವರಿಗೆ ಬೇಕಾದ ನೆರವು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ರ್ಖಾವ್ ದಾಳಿಯಲ್ಲಿ 5 ಸಾವು: ರ್ಖಾವ್ನ ಹೊರವಲಯದ ಮೇಲೆ ರಷ್ಯಾ ಸೇನೆ ಶೆಲ್ ದಾಳಿ ನಡೆಸಿದ್ದು, ಐವರು ಮೃತಪಟ್ಟಿದ್ದಾರೆ. 17 ಜನ ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ಗವರ್ನರ್ ಓಲೆಹ್ ಸಿನ್ಯುಹುಬೋವ್ ಮಂತಳವಾರ ತಿಳಿಸಿದ್ದಾರೆ.
ಡೋನ್ಬಾಸ್ ವಶಕ್ಕೆ ಪ್ರಯತ್ನ: ರಷ್ಯಾ ಸೇನೆ ತನ್ನೆಲ್ಲ ಬಲವನ್ನು ಡೊನ್ಬಾಸ್ ಪ್ರಾಂತ್ಯವಶಪಡಿಸುವ ಕಡೆಗೆ ಕೇಂದ್ರೀಕರಿಸಿದೆ. ಡೋನ್ಬಾಸ್ನ ಡೊನೆಟ್ಸ್ ಮತ್ತು ಲುಹಾನ್ಸ್ ಪ್ರದೇಶಗಳು ರಷ್ಯಾ ಬೆಂಬಲಿತ ಬಂಡುಕೋರರ ವಶದಲ್ಲಿದ್ದು, ಅವುಗಳನ್ನು ಸ್ವತಂತ್ರಗೊಳಿಸಲು ರಷ್ಯಾ ಪ್ರಯತ್ನಿಸುತ್ತಿದೆ. ಈ ಪ್ರದೇಶ ರ್ಖಾವ್ನ ನೆರೆಯಲ್ಲಿವೆ ಎಂದು ಯೂಕ್ರೇನ್ ಹೇಳಿದೆ.
ಭಾರತದ ಅರ್ಥ ವ್ಯವಸ್ಥೆ ಸುರಕ್ಷಿತವಲ್ಲ: ಯೂಕ್ರೇನ್ ಸಮರದ ಪರಿಣಾಮದಿಂದ ಭಾರತದ ಅರ್ಥವ್ಯವಸ್ಥೆ ಸುರಕ್ಷಿತವಲ್ಲ. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಆಗಿರುವಂತೆ ಭಾರತದ ಮೇಲೂ ಹಣದುಬ್ಬರದ ಪ್ರಮಾಣ ಭಾರಿ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಚ್ಚರಿಸಿದೆ. ರಷ್ಯಾ- ಯೂಕ್ರೇನ್ ಸಮರದ ಕಾರಣ ಜಾಗತಿಕ ಮಟ್ಟದ ಪೂರೈಕೆ ಜಾಲಕ್ಕೆ ಅಡ್ಡಿ ಉಂಟಾಗಿದೆ. ಸರಕು ಮತ್ತು ವಸ್ತುಗಳ ಬೆಲೆ ಏರಿಕೆಯಾಗಿದೆ. ಭಾರತ ಸದ್ಯ ಗರಿಷ್ಠ ಹಣದುಬ್ಬರವನ್ನು ಎದುರಿಸುತ್ತಿದೆ. ಇದರಿಂದಾಗಿ ವ್ಯಾಪಾರ ಕೊರತೆ, ವಿದೇಶಿ ಹೂಡಿಕೆ ಹಿಂತೆಗೆತ ಆಗುತ್ತಿದ್ದು, ಅರ್ಥವ್ಯವಸ್ಥೆ ಮೇಲೆ ಹೊರೆ ಹೆಚ್ಚಾಗುತ್ತಿದೆ ಎಂದು ಆರ್ಬಿಐ ವರದಿ ಎಚ್ಚರಿಸಿದೆ.
ನ್ಯೂಜಿಲೆಂಡ್ ನಿರ್ಬಂಧ: ಯೂಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸಿರುವ ಕಾರಣ, ರಷ್ಯಾದ ವಿರುದ್ಧ ನ್ಯೂಜಿಲೆಂಡ್ ಹೊಸ ನಿರ್ಬಂಧ ಘೋಷಿಸಿದೆ. ಎಂಟು ರಷ್ಯಾ ಬ್ಯಾಂಕುಗಳ ವಹಿವಾಟುಗಳ ಮೇಲೆ ಈಗ ಹೊಸ ನಿರ್ಬಂಧಗಳನ್ನು ಹೇರಲಾಗಿದೆ. ಈ ಬ್ಯಾಂಕುಗಳ ಜತೆಗೆ ಪಾಲುದಾರಿಕೆ ಹೊಂದಿರುವ ಸಂಸ್ಥೆಗಳ ವಹಿವಾಟಿನ ಮೇಲೂ ನಿರ್ಬಂಧ ಹೇರಲಾಗುತ್ತಿದೆ ಎಂದು ನ್ಯೂಜಿಲೆಂಡ್ ಮಂಗಳವಾರ ತಿಳಿಸಿದೆ.
ವೈದ್ಯೋಪಕರಣಕ್ಕಾಗಿ ಭಾರತಕ್ಕೆ ಮೊರೆ: ಜಗತ್ತಿನಾದ್ಯಂತ 40ಕ್ಕೂ ಹೆಚ್ಚು ರಾಷ್ಟ್ರಗಳಿಂದ ನಿರ್ಬಂಧ ಎದುರಿಸುತ್ತಿ ರುವ ರಷ್ಯಾಕ್ಕೆ ಸದ್ಯ ವೈದ್ಯೋಪಕರಣಗಳ ಕೊರತೆ ಎದುರಾಗಿದೆ. ನಿರ್ಬಂಧ ಮತ್ತು ಲಾಜಿಸ್ಟಿಕ್ ಸಮಸ್ಯೆಗಳ ಕಾರಣ ಯುರೋಪ್ ಮತ್ತು ಚೀನಾದಿಂದ ವೈದ್ಯೋಪಕರಣಗಳ ಆಮದನ್ನು ರಷ್ಯಾ ಕಡಿಮೆ ಮಾಡಿಕೊಂಡಿದೆ. ಇವುಗಳನ್ನು ಪೂರೈಸುವಂತೆ ರಷ್ಯಾ ಈಗ ಭಾರತದ ಮೊರೆ ಹೋಗಿದೆ. ಇದಕ್ಕೆ ಸಂಬಂಧಿಸಿ ಭಾರತದ ಮೆಡಿಕಲ್ ಉಪಕರಣ ಕಂಪನಿಗಳ ಜತೆಗೆ ರಷ್ಯಾ ಏಪ್ರಿಲ್ 22ರಂದು ವರ್ಚುವಲ್ ಸಭೆ ನಡೆಸಲಿದೆ. ಇದನ್ನು ಅಸೋಸಿಯೇಷನ್ ಆಫ್ ಇಂಡಿಯನ್ ಮೆಡಿಕಲ್ ಡಿವೈಸ್ ಇಂಡಸ್ಟ್ರಿ ಖಚಿತಪಡಿಸಿದೆ. ರಷ್ಯಾದ ಮಾರುಕಟ್ಟೆಗೆ ಭಾರತದ ರಫ್ತು ಪ್ರಮಾಣವನ್ನು ಈ ವರ್ಷ 10 ಪಟ್ಟು ಹೆಚ್ಚಿಸಲು ಅಂದರೆ 200 ಕೋಟಿ ರೂಪಾಯಿಗೆ ಏರಿಸಲು ಚಿಂತನೆ ನಡೆಸಿದೆ.
ದಾಳಿ ನಡೆಸಿದ ತುಕಡಿಗೆ ಪುತಿನ್ ಗೌರವ: ಬುಚಾದಲ್ಲಿ ಸಾಮೂಹಿಕ ಸಮಾಧಿ ಬೆಳಕಿಗೆ ಬಂದು ಯುದ್ಧಾಪರಾಧದ ಆರೋಪ ಎದುರಿಸುತ್ತಿರುವ ರಷ್ಯಾದ 64ನೇ ಸೆಪರೇಟ್ ಗಾರ್ಡ್ಸ್ ಮೋಟಾರ್ ರೈಫಲ್ ಬ್ರಿಗೇಡ್ ಅನ್ನು ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗೌರವಿಸಿದ್ದಾರೆ. ರಷ್ಯಾದ ಸಾರ್ವಭೌಮತೆಯನ್ನು ರಕ್ಷಿಸುವಲ್ಲಿ ಈ ಬ್ರಿಗೇಡ್ ದೊಡ್ಡ ಶೌರ್ಯ ಮತ್ತು ಧೈರ್ಯವನ್ನು ತೋರಿದೆ. ಸೇನೆಯ ಕರ್ತವ್ಯ, ಬದ್ಧತೆ ಮತ್ತು ವೃತ್ತಿಪರತೆಯನ್ನು ಈ ಬ್ರಿಗೇಡ್ ತೋರಿಸಿರುವುದು ಉಳಿದವರಿಗೆ ಮಾದರಿ ಎಂದು ಪುತಿನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.