ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ರೈತ ಮುಖಂಡರು ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಹಾಲೇಶಪ್ಪ ಗೌಡ, ಯಶವಂತರಾವ್ ಘೋರ್ಪಡೆ, ಡಿ.ವಿ.ವೀರೇಶ್, ಈರಪ್ಪ ಪ್ಯಾಟಿ, ಕೆ.ಎಸ್.ಜಗದೀಶ್ ಇತರರಿದ್ದರು.  
ನ್ಯೂಸ್

ಭಾರತ ಬಿಟ್ಟು ಎಂಎನ್‌ಸಿ ತೊಲಗಲಿ

ಶಿವಮೊಗ್ಗ: ಬಹುರಾಷ್ಟ್ರೀಯ ಕಂಪನಿಗಳು ಭಾರತ ಬಿಟ್ಟು ತೊಲಗಲಿ ಎಂಬ ಘೋಷಣೆಯೊಂದಿಗೆ ರೈತ ಸಂಘದ ಪ್ರಮುಖರು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಗಾಂಧೀಜಿ ಘೋಷಣೆ ಮೊಳಗಿಸಿದ್ದರು. ಈಗ ನಾವು ಬಹುರಾಷ್ಟ್ರೀಯ ಕಂಪನಿಗಳನ್ನು ದೇಶದಿಂದ ಹೊರಕಳುಹಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಕೃಷಿ ಭೂಮಿಯನ್ನು ರೈತರೇ ಜೋಪಾನ ಮಾಡಬೇಕು. ಕಾರ್ಪೋರೇಟ್ ಕಂಪನಿಗಳು ಇಲ್ಲಿನ ನೆಲಕ್ಕೆ ಮಾರಕವಾಗಿವೆ. ದೇಶದ ಕೃಷಿ ಭೂಮಿ ಮತ್ತು ಕೃಷಿ ವಿಜ್ಞಾನವನ್ನು ಸಂರಕ್ಷಣೆ ಮಾಡಬೇಕಿದೆ. ಬಹುರಾಷ್ಟ್ರೀಯ ಕಂಪನಿಗಳು ದೇಶದ ಮೇಲೆ ಸಾಧಿಸಿರುವ ಹಿಡಿತಕ್ಕೆ ಮುಕ್ತಿ ಕಾಣಿಸಬೇಕಿದೆ ಎಂದು ಪ್ರತಿಭಟನಾಕಾರರು ಗುಡುಗಿದರು.
ಕೃಷಿಯೇ ಭಾರತದ ಜೀವಾಳ. ಅದು ಸಂಸ್ಕೃತಿಯ ಭಾಗವೂ ಹೌದು. ವಿಶ್ವದಲ್ಲಿಯೇ ಅತಿ ಹೆಚ್ಚು ಕೃಷಿ ಭೂಮಿ ಹೊಂದಿರುವ ಹೆಮ್ಮೆ ನಮ್ಮದು. ಆದರೆ ಕೆಲವು ವರ್ಷಗಳಿಂದ ಬಂಡವಾಳಶಾಹಿಗಳು ಇಲ್ಲಿಗೆ ಲಗ್ಗೆಯಿಟ್ಟು ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳಿಗೆ ಕೆಂಪು ಹಾಸು ನೀಡಿ ಸ್ವಾಗತಿಸುತ್ತಿವೆ. ಇದರಿಂದ ಕೃಷಿ ಮೇಲೆ ದುಷ್ಪರಿಣಾಮ ಉಂಟಾಗಿದೆ. ದೇಶದ ಆಹಾರ ಪೂರೈಕೆ ಸರಪಳಿಯ ಮೇಲೆ ನಾವು ಹಿಡಿತ ಸಾಧಿಸಬೇಕಾದ ಅನಿವಾರ್ಯತೆಯಿದೆ. ಕಾರ್ಪೋರೇಟ್ ಕಂಪನಿಗಳು ಸಾವಿರಾರು ಎಕರೆ ಪ್ರದೇಶದ ಾರಂಗಳನ್ನು ಹೊಂದಿದ್ದಾರೆ. ಇವರ ಉದ್ದೇಶವೇ ಉದ್ಯಮದ ಅಭಿವೃದ್ಧಿ ಹಾಗೂ ಲಾಭ ಗಳಿಕೆ. ಉತ್ಪಾದನೆಯಿಂದ ವಿತರಣೆವರೆಗೆ ಇವರು ಹಿಡಿತ ಸಾಧಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಕೆ.ಟಿ.ಗಂಗಾಧರ್, ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಶಿವಪೂಜಪ್ಪ ಗೌಡ, ಈರಪ್ಪ ಪ್ಯಾಟಿ, ಹಾಲೇಶಪ್ಪ ಗೌಡ, ಡಿ.ವಿ.ವೀರೇಶ್, ಕೆ.ಎಸ್.ಜಗದೀಶ್ ಇತರರು ಭಾಗವಹಿಸಿದ್ದರು.