ಚನ್ನರಾಯಪಟ್ಟಣ: ರಂಗಭೂಮಿ, ಜನಪದ ಕಲೆ, ಸೋಬಾನೆ, ಹರಿಕಥೆ ಮುಂತಾದವುಗಳನ್ನು ಕಲಿಯುವ ಮೂಲಕ ಜನಪದ ಸೊಗಡು ಉಳಿಸಬೇಕು ಇಂದು ಶಾಸಕ ಸಿ.ಎನ್.ಬಾಲಕೃಷ್ಣ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಘೋಷಣೆಯೊಂದಿಗೆ ಜಾನಪದ ಉತ್ಸವ-2025 ಕಾರ್ಯಕ್ರಮವನ್ನು ರಾಗಿ, ಭತ್ತ ಹಾಗೂ ಆಹಾರ ಧಾನ್ಯಗಳ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಯುವ ಪೀಳಿಗೆ ಪಾಶ್ಚಿಮಾತ್ಯ ಮೋಹಕ್ಕೆ ಒಳಗಾಗದೆ ದೇಸಿ ಸಂಸ್ಕೃತಿ ಹಾಗೂ ಜಾನಪದ ಸೊಗಡನ್ನು ಅರಿತು ಸಂಸ್ಕೃತಿಯ ಉಳಿವಿಗೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಆಯೋಜಿಸಿರುವ ಕಾರ್ಯಕ್ರಮ ಪ್ರಸ್ತುತವಾಗಿದೆ. ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಬಯಲು ಅಕಾಡೆಮಿಯ ಸದಸ್ಯ ಸಂಚಾಲಕ ಡಾ.ಚಂದ್ರು ಕಾಳೇನಹಳ್ಳಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಜನಪದ ಸಂಸ್ಕೃತಿ ಅಳಿಯಲು ಅವಕಾಶ ನೀಡಬಾರದು. ಜನಪದ ಸಂಸ್ಕೃತಿ ಅಳಿದರೆ ನಮ್ಮತನವನ್ನು ನಾವು ಕಳೆದುಕೊಂಡಂತೆ, ಜನಪದ ಸೊಗಡಿನಲ್ಲೇ ಭಾರತೀಯ ಮೂಲ, ಪರಂಪರೆಯ ಸತ್ವ ಅಡಗಿದೆ. ಹಾಗಾಗಿ ಆಧುನಿಕತೆ ಭರಾಟೆಗೆ ಸಿಲುಕಿ ಇಂತಹ ಮಾತೃ ಸಂಸ್ಕೃತಿ ಅಳಿಯಲು ಬಿಡಬಾರದು. ಜನಪದ ಸಂಸ್ಕೃತಿ ಉಳಿಸಿ ಪೋಷಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅತಿಥಿಗಳನ್ನು ಮುಖ್ಯರಸ್ತೆಯಿಂದ ಜಾನಪದದ ಸೊಗಡಿನೊಂದಿಗೆ ಡೋಲು, ನಗಾರಿ, ಅರೇವಾದ್ಯ, ಚಿಟ್ಟಿಮೇಳ, ಕೋಲಾಟ ಇತ್ಯಾದಿ ಜನಪದ ಕಲಾತಂಡಗಳೊಂದಿಗೆ ವೇದಿಕೆಯವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಮೆರವಣಿಗೆ ಉದ್ದಕ್ಕೂ ತಮಟೆ, ಡೋಲು, ವಾದ್ಯಗಳ ತಾಳಕ್ಕೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಹೆಜ್ಜೆ ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಸ್.ಎಚ್.ಗಂಗೆಗೌಡ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಹ ಪ್ರಾಧ್ಯಾಪಕರಾದ ಡಾ.ಕೆ.ಎಂ.ಮಂಜುಳಾ, ಡಾ.ಕೆ.ಬಿ.ಆಶಾ, ಡಾ.ಬಿ.ಎಸ್.ಪೂರ್ಣಿಮಾ, ಕನ್ನಡಶಾಸ್ತ್ರ ವಿಭಾಗದ ಗುರುರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೆಂಕಟೇಶ್, ಕಾಲೇಜಿನ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.