| ರಾಘವ ಶರ್ಮ ನಿಡ್ಲೆ ಮುಜಫರನಗರ (ಉತ್ತರ ಪ್ರದೇಶ)
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು, ಗುರುವಾರ ಆರಂಭಗೊಳ್ಳುತ್ತಿದ್ದು, ಪಶ್ಚಿಮ ಉತ್ತರ ಪ್ರದೇಶದ 10 ಜಿಲ್ಲೆಗಳ 58 ಕ್ಷೇತ್ರಗಳ ಮತದಾರರು ರಾಜಕೀಯ ಪಕ್ಷಗಳ ಹಣೆಬರಹ ನಿರ್ಧರಿಸಲಿದ್ದಾರೆ. 2014, 2017 (ವಿಧಾನಸಭೆ ಚುನಾವಣೆ) ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ಜಾಟ್ ಸಮುದಾಯ ಈ ಬಾರಿ ತಕ್ಕಮಟ್ಟಿಗೆ ತನ್ನ ಒಲವನ್ನು ಸಮಾಜವಾದಿ-ರಾಷ್ಟ್ರೀಯ ಲೋಕದಳ ಪಕ್ಷದ ಮೈತ್ರಿಕೂಟದತ್ತ ಶಿಫ್ಟ್ ಮಾಡಿದೆ ಎಂಬ ಅಭಿಪ್ರಾಯಗಳು ಸಹಜವಾಗಿಯೇ ಆಡಳಿತಾರೂಢ ಬಿಜೆಪಿಯನ್ನು ಆತಂಕಕ್ಕೀಡು ಮಾಡಿದೆ. ಹಾಗಂತ, ಜಾಟರೆಲ್ಲರೂ ಬಿಜೆಪಿ ವಿರುದ್ಧ ಸೆಟೆದು ನಿಂತಿದ್ದಾರೆಂದಲ್ಲ. ಕೃಷಿ ಕಾಯ್ದೆ ವಿಚಾರದಲ್ಲಿ ಕೇಂದ್ರದ ನಿರ್ಲಕ್ಷ್ಯ ಧೋರಣೆ ಹಾಗೂ ರಾಷ್ಟ್ರೀಯ ಲೋಕದಳದ ಜಯಂತ್ ಚೌಧುರಿ ಪಶ್ಚಿಮ ಉ.ಪ್ರ.ದಲ್ಲಿ ಪ್ರಮುಖ ನಾಯಕನಾಗಿ ಹೊರಹೊಮ್ಮಿರುವುದರಿಂದ ‘ಜಾಟ್ ಅಸ್ಮಿತೆ’ ಹೆಸರಲ್ಲಿ ಆರ್ಎಲ್ಡಿ ಅಭ್ಯರ್ಥಿಗಳಿಗೆ ಹೆಚ್ಚು ಮತಬೀಳುವ ಲಕ್ಷಣಗಳು ಕಾಣುತ್ತಿವೆ.
ಆರ್ಎಲ್ಡಿ ಮೇಲಿನ ಅಭಿಮಾನ ಬಿಜೆಪಿ ವಿರುದ್ಧದ ಸಿಟ್ಟೆಂದೂ ವ್ಯಾಖ್ಯಾನಿಸುವುದು ಬಹುಶಃ ತಪ್ಪಾದೀತು. ಏಕೆಂದರೆ, ಯೋಗಿ ಸರ್ಕಾರ, ಜನರಿಗೆ ಗೂಂಡಾರಾಜ್ಯದಿಂದ ಮುಕ್ತಿಕಾಣಿಸಿದೆ ಎಂಬ ನೆಮ್ಮದಿ ಜನರಲ್ಲಿ ಕಾಣುತ್ತಿದೆ. ಖುದ್ದು ಜಾಟರಲ್ಲೇ ಇಂತಹಾ ಅಭಿಪ್ರಾಯಗಳಿರುವುದರಿಂದ ಜಾಟ್ ಮತಗಳು ಮಹಾಮೈತ್ರಿ-ಬಿಜೆಪಿ ನಡುವೆ ವಿಭಜನೆಗೊಳ್ಳಲಿವೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಮುಜಫರನಗರದಿಂದ ಸಹರಾನ್ಪುರಕ್ಕೆ ಸಾಗುವ ಹೆದ್ದಾರಿಯಲ್ಲಿ ಸಿಗುವ ಗೋವರ್ಧನ ಡಾಬಾದ ಮಾಲೀಕ ಸುಬೋದ್ ಬಲ್ಯಾನ್ ಜಾಟ್ ಸಮುದಾಯದವರು. 20 ಬಿಗಾ ಕೃಷಿ ಜಮೀನಿನ ಮಾಲೀಕರೂ ಹೌದು. ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಪುತ್ರ ಜಯಂತ್ ಚೌಧುರಿ ನಮ್ಮ ನಾಯಕ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಆದರೆ, ಚುನಾವಣೆಯಲ್ಲಿ ಮಹಾಮೈತ್ರಿ ಬೆಂಬಲಿಸಲು ಅವರಿಗೆ ಮನಸ್ಸಿಲ್ಲ. ‘ಕಳೆದೈದು ವರ್ಷದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಭಾರೀ ಸುಧಾರಣೆಯಾಗಿದೆ, ಮನೆ ಹೆಣ್ಣುಮಕ್ಕಳು ನಿರಾತಂಕವಾಗಿ ಶಾಲೆ-ಕಾಲೇಜಿಗೆ ಹೋಗುತ್ತಿದ್ದಾರೆ. ಗೂಂಡಾ, ವಸೂಲಿಕೋರರ ಹಾವಳಿಯಿಲ್ಲ. ನಾವು ಸುರಕ್ಷಿತರಾಗಿದ್ದೇವೆ ಎಂಬ ಭಾವನೆ ಮಹಿಳೆಯರನ್ನು ಬಿಜೆಪಿ ಕಡೆ ಸೆಳೆಯಲಿದೆ. ಹಾಗಿದ್ದರೂ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೀಟುಗಳು ಕಡಿಮೆಯಾಗಲಿವೆ’ ಎನ್ನುತ್ತಾರೆ ಸುಬೋಧ್. ಅವರಿಗೆ ಯೋಗಿ ಮೇಲೆ ಸಿಟ್ಟಿಲ್ಲ. ಆದರೆ, ಆರ್ಎಲ್ಡಿ ಹೆಚ್ಚು ಸೀಟುಗಳನ್ನು ಗೆಲ್ಲಬೇಕು ಮತ್ತು ಯೋಗಿ ಸರ್ಕಾರವೇ ಅಧಿಕಾರಕ್ಕೆ ಬರಬೇಕು ಎನ್ನುವುದಷ್ಟೇ ಅವರ ಆಶಯ. ನಗರ ನಿವಾಸಿಗರಲ್ಲೂ ಯೋಗಿ ಸರ್ಕಾರದ ಬಗ್ಗೆ ಸಮಾಧಾನವಿದ್ದರೂ, ಬೆಲೆ ಏರಿಕೆ ಬಗ್ಗೆ ಅಸಮಾಧಾನವಿದೆ. ‘ಅಡುಗೆ ಎಣ್ಣೆ ಬೆಲೆ 200 ರೂ. ದಾಟಿದೆ. ತಿಂಗಳಿಗೆ 12 ಸಾವಿರ ರೂ. ಸಂಬಳ ಪಡೆಯುವ ನಾನು ಜೀವನ ನಡೆಸುವುದು ಹೇಗೆ’ ಎಂದು ಪ್ರಶ್ನಿಸುತ್ತಾರೆ ಮುಜಫರನಗರದ ಇನ್ವಿಟೇಷನ್ ಹೊಟೇಲ್ ಸಿಬ್ಬಂದಿ ಪರಮಾನಂದ ಶರ್ಮ. ‘ಈ ಬಾರಿ ಯೋಗಿಯವರನ್ನು ಬೆಂಬಲಿಸುತ್ತೇನೆ. ಆದರೆ, ಮೋದಿಯವರು ಭಾಷಣ ಕಡಿಮೆ ಮಾಡಿ, ಜ್ವಲಂತ ಸಮಸ್ಯೆಗಳಿಂದ ನಮ್ಮನ್ನು ಕಾಪಾಡಬೇಕು. ಇಲ್ಲವಾದಲ್ಲಿ, ನಮ್ಮ ಆಯ್ಕೆಗಳೂ ಬದಲಾಗಬಹುದು’ ಎಂದು ಎಚ್ಚರಿಕೆ ನೀಡುತ್ತಾರೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ್-ಮುಸ್ಲಿಂ ಒಗ್ಗೂಡುವುದನ್ನೇ ಬಯಸಿರುವ ಮಹಾಮೈತ್ರಿ, 2013ರ ಮುಜಫರನಗರ ಕೋಮುದಂಗೆಗಳನ್ನು ಮರೆತು ಬಿಜೆಪಿ ಸೋಲಿಸಲು ಮತಹಾಕಬೇಕು ಎಂದು ಪ್ರಚಾರ ನಡೆಸಿದೆ. ಆದರೆ, 9 ವರ್ಷಗಳ ಬಳಿಕವೂ ಸಂತ್ರಸ್ತರಿಗೆ ಆ ಕೋಮುದಳ್ಳುರಿಯ ದುಗುಡಗಳನ್ನು ಮರೆಯುವುದು ಅಷ್ಟೊಂದು ಸುಲಭವೇ? ಮೇಲಾಗಿ, 2013ರಲ್ಲಿ ಅಧಿಕಾರದಲ್ಲಿದ್ದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಸರ್ಕಾರ ಮುಸ್ಲಿಮರ ಪರ ನಿಂತು ಜಾಟರನ್ನು ಕಡೆಗಣಿಸಿತ್ತು ಎಂಬ ಅಸಮಾಧಾನ ಈಗಲೂ ಜಾಟರಲ್ಲಿದೆ. ‘ಈಗ ರಾಜಕೀಯ ಅನುಕೂಲಕ್ಕಾಗಿ ಜಾಟರನ್ನು ಅಪ್ಪಿಕೊಳ್ಳಲು ಬಂದಿರುವ ಅಖಿಲೇಶರನ್ನು ಹೇಗೆ ನಂಬುವುದು’ ಎಂದು ಪ್ರಶ್ನಿಸುತ್ತಾರೆ ರೈತ ಯಶ್ವೀರ್ ಚೌಧುರಿ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಆರ್ಎಲ್ಡಿ ಅಭ್ಯರ್ಥಿಗಳಿಗೆ ಜಾಟರ ಬೆಂಬಲ ಸಿಕ್ಕರೂ, ಸಮಾಜವಾದಿ ಅಭ್ಯರ್ಥಿಗಳಿಗೆ ಅಷ್ಟೇ ಪ್ರಮಾಣದ ಬೆಂಬಲ ಸಿಗುವುದು ಕಷ್ಟ ಎನ್ನುತ್ತಾರೆ ಮುಜಫರನಗರದ ಮೇಘಾಖೇಡಿ ಗ್ರಾಮದ ಮುಖ್ಯಸ್ಥ ರಾಜೀವ್ ಚೌಧುರಿ.
ಮಾಜಿ ಪ್ರಧಾನಿ ಚೌಧುರಿ ಚರಣ್ ಸಿಂಗ್ ಮೊಮ್ಮಗ ಜಯಂತ್ ಚೌಧುರಿಯೊಂದಿಗೆ ಜಾಟರಿಗೆ ಭಾವನಾತ್ಮಕ ಸಂಬಂಧವಿದೆ. ಈ ಕುಟುಂಬದ ರಾಜಕೀಯ ಬಳುವಳಿ ಸದೃಢಗೊಳ್ಳಬೇಕು ಎಂಬ ಆಶಯ ಅನೇಕರದ್ದು. ‘ಬಿಜೆಪಿ ದಿಲ್ಲಿ ನಾಯಕರ ಅಹಂಕಾರ ನೀತಿಗಳಿಂದ ನಾವು ಸಿಟ್ಟಾಗಿದ್ದೇವೆ. ಹಾಗಂತ, ಸಿಎಂ ಯೋಗಿಯವರನ್ನೇನು ನಾವು ವಿರೋಧಿಸುತ್ತಿಲ್ಲ. 5 ವರ್ಷಗಳ ಹಿಂದೆ ಈ ಹಳ್ಳಿಯಲ್ಲಿ ರಾತ್ರಿಯಾಗುವ ಮುನ್ನವೇ ಜನರು ಬಾಗಿಲು ಮುಚ್ಚುತ್ತಿದ್ದರು. ಈಗ ಮಧ್ಯರಾತ್ರಿಯಾದರೂ ವಾಹನಗಳು ಆತಂಕವಿಲ್ಲದೆ ಸಂಚರಿಸುತ್ತಿರುತ್ತವೆ. ಮಹಾಮೈತ್ರಿ ಸರ್ಕಾರ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಜಯಂತ್ ಚೌಧುರಿಗೆ ಸಿಗಬೇಕಾದ ಮಾನ-ಸಮ್ಮಾನ ಸಿಗಲಿಲ್ಲ ಎಂಬ ಸಂದೇಶ ದಿಲ್ಲಿಗೆ ರವಾನೆಯಾಗಿದೆ’ ಎಂದರು ರಾಜೀವ್ ಚೌಧುರಿ. ಕೃಷಿಕ ಮಹಾವೀರ್ ಚೌಧುರಿ, ‘ನಮ್ಮ ಮತ ಹ್ಯಾಂಡ್ಪಂಪ್ಗೆ (ಆರ್ಎಲ್ಡಿ). ಆದರೆ, ಸರ್ಕಾರ ಮಾತ್ರ ಯೋಗಿಯದ್ದೇ ಬೇಕು’ ಎಂದರು.
ದಿಲ್ಲಿಗೆ ಸನಿಹದಲ್ಲಿರುವ ಪಶ್ಚಿಮ ಉ.ಪ್ರ.ದ ಕಬ್ಬುಪ್ರಾಂತ್ಯ ಎಂದೇ ಗುರುತಿಸಿಕೊಂಡಿರುವ ಬಾಗ್ಪಟ್, ಶಾಮ್ಲಿ, ಮುಜಫರನಗರ, ಕೇರಾನ, ಮೇರಠ್ನಲ್ಲಿ ಮುಸ್ಲಿಂ ಮತ್ತು ಜಾಟ್ ಜನಸಂಖ್ಯೆ ಹೆಚ್ಚಿದೆ. ಮಥುರಾ, ಹಾಥರಸ್, ಆಗ್ರಾ, ಅಲಿಗಢ, ಬುಲಂದ್ ಶಹರ್ ಮತ್ತಿತರ ಜಿಲ್ಲೆಗಳಲ್ಲಿ ಆಲೂಗಡ್ಡೆ ಹೆಚ್ಚು ಬೆಳೆಯಲಾಗುತ್ತದೆ. ಆಲೂಗಡ್ಡೆ ಪ್ರದೇಶಗಳ ಜಾಟರಲ್ಲಿ ಬಿಜೆಪಿ ಬಗ್ಗೆ ಕಬ್ಬು ಬೆಳೆವ ಜಾಟರಲ್ಲಿರುವಷ್ಟು ಆಕ್ರೋಶವಿದ್ದಂತೆ ಭಾಸವಾಗುವುದಿಲ್ಲ. ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಎಲ್ಲರಲ್ಲೂ ಕಳವಳ ವ್ಯಕ್ತವಾದರೂ, ಬಿಜೆಪಿ, ಆರ್ಎಲ್ಡಿ ಎರಡೂ ಕಡೆ ಒಲವಿರುವುದರಿಂದ ಜಾಟರ ಮನಸ್ಸು ವಿಚಲಿತಗೊಂಡಂತೆ ಕಾಣುತ್ತದೆ.
ಮುಜಫರನಗರದ 6 ಕ್ಷೇತ್ರಗಳ ಪೈಕಿ ಒಂದರಲ್ಲೂ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಮಹಾಮೈತ್ರಿ ಟಿಕೆಟ್ ನೀಡಿಲ್ಲ. ಇದು ಕೆಲ ಮುಸ್ಲಿಮರಿಗೆ ಸಮಾಧಾನ ತಂದಿಲ್ಲ. ಇದನ್ನೇ ಓವೈಸಿ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಾ ‘ಮುಸ್ಲಿಂರನ್ನು ಕಡೆಗಣಿಸಿರುವ ಮಹಾಮೈತ್ರಿಗೆ, ನಿಮ್ಮ ಮತ ಮಾತ್ರ ಬೇಕು. ಇನ್ನೆಷ್ಟು ದಿನ ಈ ಅನ್ಯಾಯ ಸಹಿಸಿಕೊಳ್ಳುತ್ತೀರಿ’ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ‘ಬಿಜೆಪಿ ಸೋಲಿಸಬಲ್ಲ ಒಕ್ಕೂಟಕ್ಕೆ ಮುಸಲ್ಮಾನರು ಮತ ಹಾಕಲಿದ್ದಾರೆ. ಓವೈಸಿಯ ಬಿಹಾರದ ಗಿಮಿಕ್ ಇಲ್ಲಿ ನಡೆಯುವುದಿಲ್ಲ’ ಎನ್ನುತ್ತಾರೆ ಸಮಾಜವಾದಿ ಬೆಂಬಲಿಗ, ಯುವಕ ಓಂವೀರ್. ಎಸ್ಪಿ-ಆರ್ಎಲ್ಡಿ ಮಹಾಮೈತ್ರಿ ಬಳಿಕ ಜಾಟ್-ಮುಸ್ಲಿಂ ಒಂದಾಗಿದ್ದಾರೆ ಎಂಬ ಗ್ರಹಿಕೆ ಹಬ್ಬಿದ್ದರೂ, ಅಂತರಾಳದಲ್ಲಿ ಜಾಟರಿಗೆ ಮುಸ್ಲಿಮರ ಮೇಲಿನ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಮಹಾಮೈತ್ರಿಯಲ್ಲಿ ಮುಸ್ಲಿಂ ಪ್ರಾತಿನಿಧ್ಯ ಕಡಿಮೆಯಿದೆ. ಮುಸ್ಲಿಂ ಅಭ್ಯರ್ಥಿಯಿದ್ದರೆ ಜಾಟರು ಮತ ಹಾಕುವುದು ಕಷ್ಟ ಎಂದೇ ಈ ಕಾರ್ಯತಂತ್ರ ಅನುಸರಿಸಿದ್ದಾರೆ. ‘ಬಿಜೆಪಿ ಸೋಲಿಸಲು ಮುಸ್ಲಿಮರು ಜಾಟ್ ಅಭ್ಯರ್ಥಿಗೆ ಮತ ಹಾಕಬಲ್ಲರು. ಆದರೆ, ಜಾಟ್ ವ್ಯಕ್ತಿ ಹೊಂದಾಣಿಕೆ ಮಾಡಿಕೊಳ್ಳಲಾರ’ ಎನ್ನುತ್ತಾರೆ ಮೇಘಾಖೇಡಿ ನಿವಾಸಿ ರಾಕೇಶ್ ಪಂಡಿತ್. 2013ರ ಮುಜಫರನಗರ ದಂಗೆಯ ಕಿಡಿ ಹೊತ್ತಿದ್ದು ನಗರದಿಂದ 15 ಕಿಮೀ ದೂರದ ಕವಾಲ್ ಹಳ್ಳಿಯಲ್ಲಿ. ಹಳ್ಳಿಗೆ ಅಂಟಿಕೊಂಡಿರುವ ಗಂಗಾನದಿ ಕಾಲುವೆ ಬಳಿ ಹಣ್ಣುಗಳನ್ನು ಮಾರುತ್ತಿದ್ದ ಹಸನ್ ಅಲಿ ಜತೆಗೆ ಹಿರಿ ವಯಸ್ಸಿನ ಯಾಸೀನ್ ಮತ್ತು ದಿಲ್ಶಾದ್ ಕೂಡ ವಿಜಯವಾಣಿ ಜತೆಗೆ ಮಾತಿಗಿಳಿದರು. ‘ನಾವು ಆರ್ಎಲ್ಡಿಗೆ ಮತಹಾಕುತ್ತೇವೆ. ಫೂಲ್ (ಕಮಲ) ಕೋ ಹಟಾನಾ ಹೈ’ ಎಂದರು ಯಾಸೀನ್. ‘ಯೋಗಿ ಸರ್ಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ನಮ್ಮ ಹೊಲಗಳಲ್ಲಿ ರಾತ್ರಿ ವೇಳೆ ಭಯವಿಲ್ಲದೆ ಗಸ್ತು ತಿರುಗುತ್ತೇವೆ. ಹಿಂದೆಲ್ಲಾ ಇದು ಸಾಧ್ಯವಾಗುತ್ತಿರಲಿಲ್ಲ. ಮತೆôದು ವರ್ಷ ಬಿಜೆಪಿ ಅಧಿಕಾರದಲ್ಲಿದ್ದರೆ ಎಲ್ಲವೂ ಸಾಫ್ ಆಗಲಿದೆ’ ಎಂದರು ದಿಲ್ಶಾದ್. ‘ಹಾಗಂತ ನಾವೇನು ಬಿಜೆಪಿಗೆ ವೋಟು ಹಾಕುವುದಿಲ್ಲ. ಅವರ ಸರ್ಕಾರ ಬಂದರೆ ನನಗೇನೂ ಬೇಸರವಿಲ್ಲ’ ಎಂದೂ ತಿಳಿಸಿದರು. ‘ಜಾಟ್-ಮುಸ್ಲಿಂ ಒಂದಾಗಿದ್ದಾರೆ ಎಂದು ಹೇಳುತ್ತಿದ್ದರೂ, ಹೃದಯದೊಳಗಿನಿಂದ ಒಗ್ಗೂಡುವಿಕೆ ಇನ್ನೂ ಸಾಧ್ಯವಾಗಿಲ್ಲ. ಅಂದು ಸಮಾಜವಾದಿ ಸರ್ಕಾರ ಮುಸ್ಲಿಮರ ರಕ್ಷಣೆಗೆ ಮುಂದಾಯಿತು ಎಂಬ ಸಿಟ್ಟು ಜಾಟರಲ್ಲಿದೆ’ ಎಂದು ಮೂವರೂ ಒಪ್ಪಿಕೊಂಡರು.
ಜಾಟರ ಒಲವು ನಿಲುವು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಯಲ್ಲಿ ರೈತರ ಹೋರಾಟಗಳಿಂದಾಗಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳದ ಪುನರುಜ್ಜೀವನ ಸಾಧ್ಯವಾಯ್ತು. ಜಯಂತ್ ಚೌಧುರಿ ಬಿಜೆಪಿವಿರೋಧಿ ಮೈತ್ರಿಕೂಟದ ಭಾಗವಾಗಿದ್ದರೂ ಅವರ ಮೇಲಿನ ಒಲವು, ಅಭಿಮಾನ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ (ಸಿಎಂ ಆಗಿ) ನೇತೃತ್ವದಲ್ಲಿ ಸರ್ಕಾರ ಬರಬೇಕು ಎನ್ನುವಷ್ಟರ ಮಟ್ಟಿಗೆ ವಿಸ್ತರಣೆಗೊಂಡಂತಿಲ್ಲ. ಹಾಲಿ ಬಿಜೆಪಿ ಸರ್ಕಾರ ಜಾಟೇತರ ಹಿಂದುಗಳ ಮುಂದೆ ಜಾಟರನ್ನು ಅಮುಖ್ಯರನ್ನಾಗಿ ಮಾಡಿದೆ ಎಂಬ ಅಭಿಪ್ರಾಯ ದಟ್ಟವಾಗಿರುವುದರಿಂದಲೇ ಆರ್ಎಲ್ಡಿ ಸೀಟುಗಳನ್ನು ಹೆಚ್ಚಿಸಿ ಜಯಂತ್ ಚೌಧುರಿ ನಾಯಕತ್ವ ಬಿಗಿಗೊಳಿಸಲು ಜಾಟರು ಮನಸ್ಸು ಮಾಡಿದಂತಿದೆ.