ನ್ಯೂಸ್

ರಾಹುಲ್ ಗಾಂಧಿ ವಿಪಕ್ಷ ನಾಯಕರಲ್ಲ.. ಬರೀ ಪಕ್ಷದ ನಾಯಕ; ಕಾಂಗ್ರೆಸ್​ ನಾಯಕರ ಮಧ್ಯಪ್ರದೇಶದ ಭೇಟಿಗೆ ಬಿಜೆಪಿ ವ್ಯಂಗ್ಯ | Rahul's Safari

ದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ನಡೆಯುತ್ತಿರುವ ವೇಳೆ, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್​ ಗಾಂಧಿ (Rahul's Safari) ಮಧ್ಯಪ್ರದೇಶದಲ್ಲಿ ಜಂಗಲ್ ಸಫಾರಿ ಮಾಡಿದ್ದಕ್ಕಾಗಿ ಬಿಜೆಪಿ ವ್ಯಂಗ್ಯವಾಡಿದೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ, ರಾಹುಲ್ ಗಾಂಧಿಗೆ ವಿಪಕ್ಷ ನಾಯಕನ ಹುದ್ದೆ ಎಂದರೆ, ಪಕ್ಷದ ಹುದ್ದೆಯಾಗಿದೆ, ಇತ್ತ ಬಿಹಾರದಲ್ಲಿ ಚುನಾವಣೆಗೆ ಹೋದರೆ, ಇತ್ತ ಅವರು ರಜೆಯ ಮೇಲೆ ಹೋಗುತ್ತಾರೆ. ಅವರ ಪಕ್ಷ ಸೋತಾಗ ಚುನಾವಣಾ ಆಯೋಗವನ್ನು ದೂಷಿಸುತ್ತಾರೆ ಮತ್ತು H ಫೈಲ್ಸ್ (ರಜಾದಿನದ ಫೈಲ್‌ಗಳು) ಮೇಲೆ ಪವರ್‌ಪಾಯಿಂಟ್ ಬಿಡುಗಡೆ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಹಿಂದಿ ದ್ವಿಪದಿಯನ್ನು ಉಲ್ಲೇಖಿಸಿದ ಪೂನಾವಾಲಾ, "ತಾ ಉಮ್ರ್ ಕಾಂಗ್ರೆಸ್ ಯೇ ಗಲ್ಟಿ ಕಾರ್ತಿ ರಹೀ, ಧೂಲ್ ಚೆಹ್ರೆ ಪೆ ಥಿ , ಕಾಂಗ್ರೆಸ್ ಐನಾ ಸಾಫ್ ಕಾರ್ತಿ ರಹೀ " -- ಪದೇ ಪದೇ ಚುನಾವಣಾ ಸೋಲುಗಳ ಹೊರತಾಗಿಯೂ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲು ನಿರಾಕರಿಸುತ್ತದೆ ಎಂದಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ತರಬೇತಿ ಶಿಬಿರದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಶನಿವಾರ (ನ 9) ನರ್ಮದಾಪುರಂ ಜಿಲ್ಲೆಯ ಪಚ್ಮರಿಗೆ ತೆರಳಿದ್ದರು. ಭಾನುವಾರ ಬೆಳಿಗ್ಗೆ ಜೀಪಿನಲ್ಲಿ ಜಂಗಲ್ ಸಫಾರಿಗೆ ಹೋದ ವಿಪಕ್ಷ ನಾಯಕ, ಬೆಳಿಗ್ಗೆ 6.15 ಕ್ಕೆ ರವಿಶಂಕರ್ ಭವನದಿಂದ ಹೊರಟು ಸುಮಾರು 10 ಕಿಲೋಮೀಟರ್ ಪ್ರಯಾಣಿಸಿ ಪನರ್ಪಾನಿ ​​ಗೇಟ್‌ಗೆ ಹಿಂತಿರುಗಿದರು.

ಮಧ್ಯಪ್ರದೇಶ ಪ್ರವಾಸದದಲ್ಲಿರುವ ರಾಹುಲ್​ ಗಾಂಧಿ, ಚುನಾವಣಾ ಆಯೋಗವು ಬಿಜೆಪಿಯ ಆದೇಶದ ಮೇರೆಗೆ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ಮತ ಕಳ್ಳತನಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದರು. ಹರಿಯಾಣದಂತೆಯೇ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲೂ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹರಿಯಾಣದ ಬಗ್ಗೆ ಒಂದು ಪ್ರಸ್ತುತಿ ನೀಡಿದ್ದೆ, ಮತ ಕಳ್ಳತನ ನಡೆಯುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ, 25 ಲಕ್ಷ ಮತಗಳು ಕಳ್ಳತನವಾಗಿವೆ, 8 ರಲ್ಲಿ 1 ಅಕ್ರಮವಾಗಿವೆ. ಈ ಅಂಕಿ ಅಂಶಗಳನ್ನು ಗಮನಿಸಿದಾಗ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲೂ ಇದೇ ರೀತಿ ನಕಲಿ ಮತದಾನ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಜಂಟಿ ಪಾಲುದಾರಿಕೆಯಲ್ಲಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್​​, ಈ ಮೂಲಕ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ, ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ದಾಳಿಯಾಗುತ್ತಿದೆ, ದೇಶವು ಬಳಲುತ್ತಿದೆ ಇದರಿಂದ ಭಾರತ ಮಾತೆಗೆ ಹಾನಿಯಾಗುತ್ತಿದೆ ಎಂದು ಆರೋಪಿಸಿದರು.(ಏಜೆನ್ಸೀಸ್​)