ನ್ಯೂಸ್

Ration Card ಇದ್ದು ತೆರಿಗೆ ಕಟ್ಟುವವರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ: Laxmi Hebbalkar

ಬೆಳಗಾವಿ: ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್​ದಾರರ (BPL Card) ಮೆಗಾ ಆಪರೇಷನ್​ ನಡೆಯುತ್ತಿರುವ ವಿಚಾರ ತೀವ್ರ ಆಕ್ಷೇಪಕ್ಕೆ ಗುರಿಯಾಗಿದ್ದು, ಈ ವಿಚಾರ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಇದೀಗ ಇದಕ್ಕೆ ಪುಷ್ಠಿ ಎಂಬಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​​ (Laxmi Hebbalkar) ತೆರಿಗೆ ಕಟ್ಟುವವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಬರುವುದಿಲ್ಲ ಎಂದು ಹೇಳಿದ್ದಾರೆ.

ನಗರದಲ್ಲಿ ಈ ಬಗ್ಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar)​, ರಾಜ್ಯದಲ್ಲಿ ಸರಿಸುಮಾರು 80 ಸಾವಿರ ಬಿಪಿಎಲ್​ ಕಾರ್ಡ್​ಗಳನ್ನು ಎಪಿಎಲ್​ ಆಗಿ ಬದಲಾಯಿಸಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಎಪಿಎಲ್, ಬಿಪಿಎಲ್ ಪಡಿತರ ಚೀಟಿ ಹೊಂದಿದ ಇಬ್ಬರಿಗೂ ಗೃಹಲಕ್ಷ್ಮಿ ಹಣ ಬರುತ್ತದೆ. ಎ‍ಪಿಎಲ್‌ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿದವರಲ್ಲಿ ಯಾರು ಆದಾಯ ತೆರಿಗೆ ಕಟ್ಟುವುದಿಲ್ಲವೋ, ಅಂಥವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ. ತೆರಿಗೆ ಕಟ್ಟುವವರಿಗೆ ಮಾತ್ರ ಹಣ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಮ್ಸ್​ ಆಸ್ಪತ್ರೆಯಲ್ಲಿ ಬಾಣಂತಿ ಸಾವಿನ ಕುರಿತು ಪ್ರತಿಕ್ರಿಯಿಸಿ, ಬಿಮ್ಸ್ ಆಸ್ಪತ್ರೆಯ ಎಲ್ಲ ವ್ಯವಸ್ಥೆಗಳಲ್ಲಿ ಸರ್ಜರಿ ಆಗಬೇಕೆಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ಮತ್ತೊಮ್ಮೆ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ತಪ್ಪಿತಸ್ಥ ವೈದ್ಯರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್​ ಶಾಕಸರಿಗೆ ಆಫರ್​ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಇಡೀ ದೇಶದಲ್ಲಿ ಇಂಥ ವ್ಯವಹಾರ ನಡೆಯುತ್ತಿದೆ. ಬಿಜೆಪಿಯವರು ನಿರಂತರವಾಗಿ ಹೀಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ನಾವು ಗಟ್ಟಿಯಾಗಿದ್ದೇವೆ. ಸುಭದ್ರವಾಗಿರುವ ಸರ್ಕಾರವನ್ನು ಏನೂ ಮಾಡಲಾಗದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ (Laxmi Hebbalkar) ಹೇಳಿದ್ದಾರೆ.