ನ್ಯೂಸ್

ರಮೇಶ್​ ಆಯ್ತು, ಈಗ ಸತೀಶ್​ ಜಾರಕಿಹೊಳಿ ಜತೆ ಲಕ್ಷ್ಮೀ ಹೆಬಾಳ್ಕರ್​ ವಾರ್

ಬೆಳಗಾವಿ: ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ವನ್ನೂ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಇಲ್ಲಿನ ಕಾಂಗ್ರೆಸ್ ನಾಯಕರು, ಪಕ್ಷದಲ್ಲಿನ ಶಕ್ತಿ ತೋರ್ಪಡಿಸಲು ಮುಂದಾಗಿ ‘ಭಿನ್ನರಾಗ’ ಹಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಜುಲೈ 2ರಂದು ನಡೆಯುವ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ವಿಚಾರವಾಗಿ ಶನಿವಾರ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು.

ಅಂದು ಗೈರಾಗಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಭಾನುವಾರ ಮತ್ತದೇ ವಿಚಾರವಾಗಿ ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ ‘ಪ್ರತಿಷ್ಠೆಯ ಮುಸುಕಿನ ಗುದ್ದಾಟ’ ಮುಂದುವರಿಸಿದ್ದಾರೆ. ಡಿಕೆಶಿ ಅತ್ಯಾಪ್ತರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಹಿಂಬಾಲಕರು ಎಂದು ಎರಡು ಬಣವಾಗಿರುವುದು ಪಕ್ಷ ನಿಷ್ಠರಲ್ಲಿ ಅಸಮಾಧಾನ ಮೂಡಿಸಿದ್ದರೆ, ಕಾರ್ಯಕರ್ತರು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೆಬ್ಬಾಳ್ಕರ್, ‘ಕ್ರೆಡಿಟ್ ವಾರ್’ ಕಾಂಗ್ರೆಸ್​ನಲ್ಲಿ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.