ಭದ್ರಾವತಿ: ವಕೀಲರು ಕಾನೂನಿನ ಚೌಕಟ್ಟಿನೊಳಗೆ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡುವ ಮಹತ್ತರ ಕಾರ್ಯದೊಂದಿಗೆ ಕುಟುಂಬ ಸದಸ್ಯರಿಗೂ ಸಮಯ ನೀಡಬೇಕು ಎಂದು 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶೆ ಇಂದಿರಾ ಮೇಲ್ಮನೆ ಚಟ್ಟಿಯಾರ್ ಹೇಳಿದರು.
ನಗರದ ಕೋರ್ಟ್ ಆವರಣದಲ್ಲಿ ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ನಾವು ಎಷ್ಟು ಪುಸ್ತಕಗಳನ್ನು ಓದಿದರೂ ತಿಳಿದುಕೊಳ್ಳುವುದು ಸಾಕಷ್ಟಿರುತ್ತದೆ ಎಂದು ತಿಳಿಸಿದರು.
ಕಿರಿಯ ವಕೀಲರು ನಿರಂತರ ಅಧ್ಯಯನ ಮಾಡುವ ಮೂಲಕ ಹಿರಿಯ ವಕೀಲರನ್ನು ಅನುಸರಣೆ ಮಾಡಬೇಕು. ಕಾರ್ಯ ಕಲಾಪಗಳಲ್ಲಿ ಪಾಲ್ಗೊಳ್ಳಬೇಕು. ನ್ಯಾಯಾಧೀಶರೊಂದಿಗೆ ವಿವೇಕದಿಂದ ವರ್ತಿಸಬೇಕು. ನ್ಯಾಯಾಲಯದಲ್ಲಿ ಎಲ್ಲ ವಕೀಲರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡುವ ಜತೆಯಲ್ಲಿ ವಕೀಲರು ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಉಮೇಶ್, ಉಪಾಧ್ಯಕ್ಷ ನಾಗರಾಜ್, ಖಜಾಂಚಿ ಎನ್.ಎಂ.ಆಶಾ, ಹರೀಶ್ ಬರ್ಗೆ, ಕಾರ್ಯದರ್ಶಿ ರಾಜೇಶ್ ಇತರರಿದ್ದರು.