ನ್ಯೂಸ್

ಇದನ್ನು ಸಹಿಸಲು ನನ್ನಿಂದ ಸಾಧ್ಯವಿಲ್ಲ! ವಿಚಾರಣೆ ವೇಳೆ ನ್ಯಾಯಧೀಶರತ್ತ ಶೂ ಎಸೆದ ವಕೀಲ ಅರೆಸ್ಟ್ | Chief Justice

Chief Justice: ಇಂದು ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿದ್ದ ವಿಚಾರಣೆ ವೇಳೆ ಹೈಡ್ರಾಮಾ ಸೃಷ್ಟಿಸಿದ ವಕೀಲರೊಬ್ಬರು, ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರಿದ್ದ ಪೀಠದತ್ತ ಶೂ ಎಸೆದಿದ್ದಾರೆ. ತಕ್ಷಣವೇ ಅವರನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ದ ಅಧಿಕಾರಿಗಳು, ಪೊಲೀಸರಿಗೆ ಒಪ್ಪಿಸಿದ್ದಾರೆ.

"ಸನಾತನ ಧರ್ಮಕ್ಕೆ ಮಾಡಿದ ಅಪಮಾನವನ್ನು ಭಾರತ ಸಹಿಸುವುದಿಲ್ಲ" ಎಂದು ಚೀರಾಡಿದ ವಕೀಲನನ್ನು ಕೋರ್ಟ್​ನಿಂದ ಹೊರ ಕಳುಹಿಸಲಾಯಿತು. ಇದಕ್ಕೆ ಹೆಚ್ಚು ತಲೆಕಡಿಸಿಕೊಳ್ಳದ ನ್ಯಾಯಮೂರ್ತಿ ಗವಾಯಿ, ಶಾಂತಚಿತ್ತರಾಗಿ ವಿಚಾರಣೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರೆಸಿದ್ದು ಗಮನಾರ್ಹ.

ನೀವ್ಯಾರು ವಿಚಲಿತರಾಗಬೇಡಿ

ಘಟನೆಯ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, "ಇದೆಲ್ಲದರಿಂದ ವಿಚಲಿತರಾಗಬೇಡಿ. ಇಂತಹ ವಿಷಯಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಿಚಾರಣೆಯನ್ನು ಮುಂದುವರಿಸಿ" ಎಂದು ಹೇಳಿದರು.

ಘಟನೆಯ ಪೂರ್ಣ ವಿವರ

ದೆಹಲಿ ಪೊಲೀಸರ ಪ್ರಕಾರ, ನ್ಯಾಯಾಲಯ ಸಂಖ್ಯೆ 1ರಲ್ಲಿ ಇಂದು ಬೆಳಗ್ಗೆ 11.35ಕ್ಕೆ ವಿಚಾರಣೆ ನಡೆಯುತ್ತಿದ್ದಾಗ ರಾಕೇಶ್ ಕಿಶೋರ್ ಎಂಬ ವಕೀಲರು, ತಮ್ಮ ಶೂ ತೆಗೆದು ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಎಸೆಯಲು ಯತ್ನಿಸಿದರು. ಈ ವೇಳೆ ಶೂ ಪೀಠದತ್ತ ಬಿದ್ದಿದೆ. ತಕ್ಷಣವೇ ವಕೀಲ ರಾಕೇಶ್ ಕಿಶೋರ್​ ಅವರನ್ನು ಕೋರ್ಟ್ ಆವರಣದಿಂದ ಹೊರಗೆ ಎಳೆದೊಯ್ದ ಭದ್ರತಾ ಪಡೆ, ಪೊಲೀಸರಿಗೆ ಹಸ್ತಾಂತರಿಸಿತು.

ಯಾರು ಈ ವಕೀಲ?

ವರದಿಗಳ ಪ್ರಕಾರ, ರಾಕೇಶ್ ಕಿಶೋರ್​ ಮಯೂರ್ ವಿಹಾರ್ ಪ್ರದೇಶದ ನಿವಾಸಿ. ಇವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಸದಸ್ಯರೂ ಆಗಿದ್ದಾರೆ.

ಶೂ ಎಸೆತಕ್ಕೆ ಕಾರಣವೇನು?

ಛತ್ತರ್‌ಪುರ ಜಿಲ್ಲೆಯ ಜವರಿ ದೇವಸ್ಥಾನದಲ್ಲಿ ಹಾನಿಗೊಳಗಾದ ವಿಷ್ಣು ವಿಗ್ರಹವನ್ನು ಬದಲಾಯಿಸಲು ಮತ್ತು ಪ್ರತಿಷ್ಠಾಪಿಸಲು ಕೋರಿ ರಾಕೇಶ್ ದಲಾಲ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್​ನಲ್ಲಿ ನಡೆಯಿತು. ಇದನ್ನು ಪುರಸ್ಕರಿಸಲು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ನಿರಾಕರಿಸಿತು.

"ಇದು ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿ ಮೊಕದ್ದಮೆ. ಹೋಗಿ ಒಮ್ಮೆ ದೇವರನ್ನೇ ಏನಾದರೂ ಮಾಡಲು ಕೇಳಿ. ನೀವು ವಿಷ್ಣುವಿನ ಬಲವಾದ ಭಕ್ತ ಎಂದು ಹೇಳುತ್ತಿದ್ದರೆ, ಖುದ್ದಾಗಿ ನೀವೇ ಪ್ರಾರ್ಥಿಸಿ ಮತ್ತು ಸ್ವಲ್ಪ ಧ್ಯಾನ ಮಾಡಿ" ಎಂದು ಸಿಜೆಐ ಗವಾಯಿ ಹೇಳಿದರು. ಈ ವೇಳೆ ಅರ್ಜಿದಾರನ ಪರ ವಕೀಲರು ಮಾತನಾಡಿ, ವಿಗ್ರಹದ ತಲೆ ಶಿಥಿಲಗೊಂಡಿದೆ ಮತ್ತು ಅದರ ಪುನರ್ನಿರ್ಮಾಣಕ್ಕೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಗವಾಯಿ ಅವರ ಪೀಠ, ಈ ವಿಷಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಇದು ಪುರಾತತ್ತ್ವ ಶಾಸ್ತ್ರದ ಸಂಶೋಧನೆಯಾಗಿದೆ. ಎಎಸ್‌ಐ ಅಂತಹ ಕೆಲಸವನ್ನು ಮಾಡಲು ಅನುಮತಿಸುತ್ತದೆಯೇ ಅಥವಾ ಇಲ್ಲವೇ? ಇದರಲ್ಲಿ ವಿವಿಧ ಸಮಸ್ಯೆಗಳಿವೆ" ಹೇಳಿತು. ಇದರಿಂದ ಕುಪಿತಗೊಂಡ ವಕೀಲ, ಗವಾಯಿ ಅವರಿದ್ದ ಪೀಠದತ್ತ ಶೂ ಎಸೆದರು,(ಏಜೆನ್ಸೀಸ್).