ನ್ಯೂಸ್

ಕೋರ್ಟ್​ ಒಳಗೇ ವಕೀಲನ ಮೇಲೆ ಗುಂಡು! ಕೃತ್ಯಕ್ಕೆ ಕಂಟ್ರಿ ಪಿಸ್ತೋಲ್ ಬಳಕೆ

ಲಖನೌ: ವಕೀಲರೊಬ್ಬರನ್ನು ನ್ಯಾಯಾಲಯದ ಒಳಗೇ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ ಶಹಜಾನ್​ಪುರದಿಂದ ವರದಿಯಾಗಿದೆ. ಮೃತ ವ್ಯಕ್ತಿಯನ್ನು, ಕಳೆದ ನಾಲ್ಕೈದು ವರ್ಷಗಳಿಂದ ವಕಾಲತ್ತು ನಡೆಸುತ್ತಿರುವ ಜಲಾಲಾಬಾದ್​ನ ನಿವಾಸಿ ಭೂಪೇಂದ್ರ ಪ್ರತಾಪ್​ ಸಿಂಗ್​ ಎಂದು ಗುರುತಿಸಲಾಗಿದೆ.

ಶಹಜಹಾನ್​ಪುರ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಮೂರನೇ ಮಹಡಿಯಲ್ಲಿ ಇಂದು ಬೆಳಿಗ್ಗೆ 11.45ರ ಸುಮಾರಿಗೆ ಈ ಕೊಲೆ ನಡೆದಿದೆ. ಮೃತ ದೇಹದ ಬಳಿ ಒಂದು ಕಂಟ್ರಿ ಗನ್​ ಪತ್ತೆಯಾಗಿದೆ. ಹಿರಿಯ ಪೋಲೀಸ್ ಅಧಿಕಾರಿಗಳು ಮತ್ತು ಫೊರೆನ್ಸಿಕ್​ ತಂಡ ಸ್ಥಳ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಉಂಟಾದ ಆತಂಕದ ವಾತಾವರಣವನ್ನು ತಿಳಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ ಎನ್ನಲಾಗಿದೆ. ಕೃತ್ಯದ ಬಗ್ಗೆ ಅಥವಾ ಹತ್ಯೆಕೋರನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. (ಏಜೆನ್ಸೀಸ್)