ಮುಂಬೈ: ಎನ್‌ಸಿಪಿ (ಅಜಿತ್ ಪವಾರ್ ಬಣ)ದ ಹಿರಿಯ ನಾಯಕ ಸಲ್ಮಾನ್ ಖಾನ್ ಸ್ನೇಹಿತ ಬಾಬಾ ಸಿದ್ದಿಕ್(Baba Siddique) ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ.
ಶನಿವಾರ ಸಂಜೆ ಮುಂಬೈನ ಬಾಂದ್ರಾದಲ್ಲಿರುವ ತನ್ನ ಮಗನ ಕಚೇರಿಯಲ್ಲಿ ಬಾಬಾ ಸಿದ್ದಿಕಿ ಇದ್ದಾಗ ಮೂವರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳಾದ ಹರಿಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಅವರು ಲಾರೆನ್ಸ್ ಬಿಷ್ನೋಯ್ ಗ್ಯಾಂಗ್‌ಗೆ ಸೇರಿದವರು ಎಂದು ಈಗಾಗಲೇ ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ ಎಂದು ತಿಳಿದುಬಂದಿದೆ.
ಮೂರನೇ ಆರೋಪಿ ಯುಪಿ ಮೂಲದ ಶಿವಕುಮಾರ್ ನನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿಗಳು ಕೆಲವು ತಿಂಗಳಿಂದ ಸಿದ್ದಿಕಿಯನ್ನು ಕೊಲ್ಲಲು ಸಂಚು ರೂಪಿಸಿದ್ದರು. ಆಗಾಗ ಸಿದ್ದಿಕಿ ಬಗ್ಗೆ ತಿಳಿದುಕೊಂಡು ಅವರ ನಿವಾಸ ಹಾಗೂ ಕಚೇರಿ ಮೇಲೆ ಕಣ್ಣಿಟ್ಟಿದ್ದರು. ಬಿಷ್ಣೋಯ್ ಗ್ಯಾಂಗ್ ಈ ಕೊಲೆ ಮಾಡಲು ಪ್ರತಿ ಆರೋಪಿಗಳಿಗೆ 50ಸಾವಿರ ರೂಪಾಯಿ ಮುಂಗಡ ಮತ್ತು ಮಾರಕಾಸ್ತ್ರಗಳನ್ನು ನೀಡಿತ್ತು ಎಂದು ತಮ್ಮ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಈ ವರ್ಷ ಏಪ್ರಿಲ್ ನಲ್ಲಿ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಮನೆಯ ಮೇಲೆ ನಡೆದ ಗುಂಡಿನ ದಾಳಿ ಘಟನೆ ಸಾಕಷ್ಟು ಸುದ್ದಿಯಾಗಿತ್ತು.
ಇನ್ನು ಸಿದ್ದಿಕ್ ಹತ್ಯೆ ಬಳಿಕ ಇದು ಟ್ರೈಲರ್ ಮಾತ್ರ, 'ನಿಜವಾದ 'ಪಿಚ್ಚರ್' ಬಾಕಿ ಇದೆ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಅವರು ಪೋಸ್ಟ್ ಮಾಡಿದ್ದಾರೆ. ಇತ್ತೀಚಿನ ಘಟನೆಯ ಹಿನ್ನೆಲೆಯಲ್ಲಿ ಸಲ್ಮಾನ್ ಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.