ನ್ಯೂಸ್

ಸಲ್ಮಾನ್​ ಖಾನ್​ಗೆ ಬೆದರಿಕೆ ಪತ್ರ ಕಳುಹಿಸಿಲ್ಲ ಎಂದ ಗ್ಯಾಂಗ್​​ಸ್ಟರ್: ​ದೆಹಲಿ ಪೊಲೀಸರ ಮುಂದೆ ಹೇಳಿದ್ದು ಹೀಗೆ

ನವದೆಹಲಿ: ಬಾಲಿವುಡ್​ ನಟ ಸಲ್ಮಾನ್​ ಖಾನ್​ಗೆ ಬೆದರಿಕೆ ಪತ್ರ ಬಂದಿದ್ದು, ಇದರಲ್ಲಿ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಕೈವಾಡ ಇಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪಂಜಾಬ್​ ಖ್ಯಾತ ಗಾಯಕ ಹಾಗೂ ಕಾಂಗ್ರೆಸ್​ ನಾಯಕ ಸಿಧು ಮೂಸೆವಾಲಾ ಹತ್ಯೆ ಬೆನ್ನಲ್ಲೇ ಸಲ್ಮಾನ್​ ಖಾನ್​​ ಕೊಲೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು, ಈ ಬೆನ್ನಲ್ಲೇ ಬೆದರಿಕೆ ಪತ್ರಗಳು ಬಂದಿದ್ದವು. ಇದರಿಂದ ಎಚ್ಚೆತ್ತ ಮುಂಬೈ ಪೊಲೀಸರು ಸಲ್ಮಾನ್​ ಖಾನ್​ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ಹಾಕಿದ್ದರು.

ಇದೀಗ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ದಿಲ್ಲಿ ಪೊಲೀಸರು, ಬಂಧನದಲ್ಲಿರುವ ಲಾರೆನ್ಸ್ ಬಿಷ್ಣೋಯಿ ಕೈವಾಡವಿದೆಯೇ ಎಂಬ ಬಗ್ಗೆ ನಡೆಸಿದ ಸಮಗ್ರ ತನಿಖೆಯಲ್ಲಿ ಈತನ ಕೈವಾಡವಿಲ್ಲ ಎಂದು ತಿಳಿದುಬಂದಿದೆ.

ಸಲ್ಮಾನ್​ ಖಾನ್​ಗೆ ಬೆದರಿಕೆ ಪತ್ರದ ಬಗ್ಗೆ ತನಗೇನೂ ಗೊತ್ತಿಲ್ಲ, ಇದರಲ್ಲಿ ಯಾರ ಕೈವಾಡವಿದೆ ಎಂಬುದೂ ನನಗೆ ತಿಳಿದಿಲ್ಲ ಎಂದು ಬಿಷ್ಣೋಯಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಇದಕ್ಕೆ ಕಾರಣ, ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್​ ಬಿಷ್ಣೋಯ್​​ ಪ್ರಮುಖ ಆರೋಪಿಯಾಗಿದ್ದು, ಈತ ಈ ಹಿಂದೆ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್​​ ಅವರನ್ನು ಹತ್ಯೆ ಮಾಡಲು ಬಿಷ್ಣೋಯ್​ ಸಂಚು ರೂಪಿಸಿದ್ದರಿಂದ ಈತನ ಮೇಲೆ ಅನುಮಾನ ವ್ಯಕ್ತವಾಗಿತ್ತು.

2018ರಲ್ಲಿ ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆ ಆಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್​ ಜೈಲಿಗೆ ಹೋಗಿದ್ದರು. ಈ ಸಮಯದಲ್ಲಿ ಕೋರ್ಟ್ ಹೊರಗೆ ಮಾತನಾಡಿದ್ದ ಬಿಷ್ಣೋಯ್, ಸಲ್ಮಾನ್ ಖಾನ್​ನನ್ನು​ ಕೊಲ್ಲುತ್ತೇವೆ ಎಂದು ಹೇಳಿಕೆ ನೀಡಿದ್ದ. ಆದ್ದರಿಂದ ಈತನನ್ನು ವಿಚಾರಣೆಗೊಳಪಡಿಸಿದಾಗ ಈತನು ಇದರಲ್ಲಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ ಎಂಬ ವರದಿಯನ್ನು ದೆಹಲಿ ಪೊಲೀಸರು ನೀಡಿದ್ದಾರೆ. (ಏಜೆನ್ಸೀಸ್​)