ನ್ಯೂಸ್

ಭಾರತ ಮೂಲದ ಉದ್ಯಮಿಯ ಹತ್ಯೆ, ಗಾಯಕನ ಮೇಲೆ ಫೈರಿಂಗ್: ಕೆನಾಡದಲ್ಲಿ ಬಿಷ್ಣೋಯ್​ ಗ್ಯಾಂಗ್ ಅಟ್ಟಹಾಸ! Lawrence Bishnoi Gang ​

ನವದೆಹಲಿ : ಕೆನಡಾದಲ್ಲಿಯೂ ಭಯದ ವಾತಾವರಣ ಸೃಷ್ಟಿ ಮಾಡಿರುವ ನಟೋರಿಯಸ್​​ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್ ( Lawrence Bishnoi Gang ) ಸೋಮವಾರ (ಅ.27) ನಡೆದ ಭಾರತೀಯ ಮೂಲದ ಉದ್ಯಮಿಯ ಹತ್ಯೆ ಹಾಗೂ ಪಂಜಾಬಿ ಗಾಯಕನ ಮನೆಯ ಮೇಲೆ ನಡೆದ ಫೈರಿಂಗ್​ ಪ್ರಕರಣದ ಹೊಣೆಯನ್ನು ಹೊತ್ತುಕೊಂಡಿದೆ.

ರಾಜಸ್ಥಾನದ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಕ್ರಿಯ ಸದಸ್ಯ ಜಗದೀಪ್ ಸಿಂಗ್ ಅಲಿಯಾಸ್ ಜಗ್ಗಾನನ್ನು ಅಮೆರಿಕದಲ್ಲಿ ಬಂಧಿಸಿದ ಒಂದು ದಿನದ ಬೆನ್ನಲ್ಲೇ ಈ ಎರಡು ಘಟನೆಗಳು ನಡೆದಿವೆ. ಈ ಘಟನೆಗಳ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿರುವ ಬಿಷ್ಣೋಯ್​ ಗ್ಯಾಂಗ್​ ಸದಸ್ಯ ಗೋಲ್ಡಿ ಧಿಲ್ಲೋನ್​, ಕೆನಾಡದ ಅಬಾಟ್ಸ್‌ಫೋರ್ಡ್​ನಲ್ಲಿ ಕಂಪನಿ ಹೊಂದಿರುವ 68 ವರ್ಷದ ಭಾರತೀಯ ಮೂಲದ ಕೈಗಾರಿಕೋದ್ಯಮಿ ದರ್ಶನ್ ಸಿಂಗ್ ಸಹಸಿ ಅವರ ಹತ್ಯೆಯ ಹಿಂದೆ ನಮ್ಮ ಗುಂಪಿನ ಕೈವಾಡವಿದೆ ಎಂದು ಹೇಳಿದ್ದಾನೆ.

ಹತ್ಯೆಗೀಡಾದ ಸಹಸಿ, ದೊಡ್ಡ ಮಾದಕವಸ್ತು ವ್ಯವಹಾರದಲ್ಲಿ ಭಾಗಿಯಾಗಿದ್ದರು. ಅವರ ಬಳಿ ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಹಣ ಸಿಗದೇ ಇದ್ದಿದ್ದಕ್ಕೆ ಬಿಷ್ಣೋಯ್​ ಗ್ಯಾಂಗ್​ ಅವರನ್ನು ಕೊಂದಿರುವುದಾಗಿ ವರದಿಯಾಗಿದೆ. ಸೋಮವಾರ ಬೆಳಗ್ಗೆ ಕೆನಾಡದ ಬ್ರಿಟೀಷ್​ ಕೊಲಂಬಿಯಾದ ಅಬಾಟ್ಸ್‌ಫೋರ್ಡ್​ ಮನೆಯ ಹೊರ ಭಾಗದಲ್ಲಿ ಸಹಸಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಈ ಘಟನೆಯ ಪ್ರಾಥಮಿಕ ತನಿಖೆಯ ಪ್ರಕಾರ, ಗುಂಡು ಹಾರಿಸಿದ ದುಷ್ಕರ್ಮಿ, ಉದ್ಯಮಿ ಸಹಸಿ ಅವರು ತಮ್ಮ ಮನೆಯ ಹೊರಗಡೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ತಮ್ಮ ಕಾರಿನ ಬಳಿ ಬರುವ ಸಮಯಕ್ಕಾಗಿ ಕಾದು ಕುಳಿತಿದ್ದ. ಸಹಸಿ ಅವರು ತಮ್ಮ ಕಾರನ್ನು ಏರಿದ ಕೂಡಲೇ ದುಷ್ಕರ್ಮಿ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಸಹಸಿ ಅವರು ಪರಿಸ್ಥಿತಿ ಗಂಭೀರವಾಗಿತ್ತು. ಅವರ ಜೀವ ಉಳಿಸಲು ತುಂಬಾ ಪ್ರಯತ್ನಿಸಲಾಯಿತು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಈ ಘಟನೆಯ ಸಮಯದಲ್ಲಿ, ಯಾವುದೇ ವಿದ್ಯಾರ್ಥಿಗಳಿಗೆ ಹಾನಿಯಾಗದಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಹತ್ತಿರದ ಮೂರು ಶಾಲೆಗಳನ್ನು ಲಾಕ್‌ಡೌನ್ ಮಾಡಲಾಗಿದೆ.

ಅಂದಹಾಗೆ, ಸಹಸಿ ಅವರು ಪ್ರಸಿದ್ಧ ಜವಳಿ ಮರುಬಳಕೆ ಕಂಪನಿಯಾದ ಕೆನಮ್ ಇಂಟರ್ನ್ಯಾಷನಲ್‌ನ ಅಧ್ಯಕ್ಷರಾಗಿದ್ದರು. ಅವರು 1991ರಲ್ಲಿ ಕೆನಡಾಕ್ಕೆ ವಲಸೆ ಬಂದರು ಮತ್ತು ಆರಂಭದಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ನಂತರ ಜವಳಿ ಮರುಬಳಕೆ ಘಟಕದಲ್ಲಿ ಪಾಲನ್ನು ಪಡೆದು, ಅದನ್ನು ಜಾಗತಿಕ ಕಂಪನಿಯಾಗಿ ಪರಿವರ್ತಿಸಿದರು. ಸಹಸಿ ಒಬ್ಬ ಯಶಸ್ವಿ ಕೈಗಾರಿಕೋದ್ಯಮಿ ಮಾತ್ರವಲ್ಲದೆ ಲೋಕೋಪಕಾರಿ ವ್ಯಕ್ತಿಯೂ ಆಗಿದ್ದರು. ಅವರ ಸಾವು ಅಬಾಟ್ಸ್‌ಫೋರ್ಡ್ ಮತ್ತು ಕೆನಡಾದ ಪಂಜಾಬಿ ಸಮುದಾಯದಲ್ಲಿ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಸಮುದಾಯದ ನಾಯಕರು ಈ ಘಟನೆಯನ್ನು ಕೆನಡಾದಲ್ಲಿರುವ ಭಾರತೀಯ ವಲಸಿಗರ ಸುರಕ್ಷತೆಗೆ ಗಂಭೀರ ಬೆದರಿಕೆ ಎಂದಿದ್ದಾರೆ ಮತ್ತು ಪೊಲೀಸರು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಗಾಯಕನ ಮನೆಯ ಮೇಲೆ ದಾಳಿ

ಇನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಅಟ್ಟಹಾಸ ಇಲ್ಲಿಗೆ ನಿಲ್ಲುವುದಿಲ್ಲ. ಪಂಜಾಬಿ ಗಾಯಕ ಚನ್ನಿ ನಟ್ಟನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನೂ ಹೊತ್ತಿಕೊಂಡಿದೆ. ಚನ್ನಿ ನಟ್ಟನ್ ಅವರು ಗಾಯಕ ಸರ್ದಾರ್ ಖೇರಾ ಅವರಿಗೆ ಹತ್ತಿರವಾಗುತ್ತಿರುವುದರಿಂದ ಈ ಫೈರಿಂಗ್​ ನಡೆದಿದೆ ಎಂದು ಗ್ಯಾಂಗ್ ಸದಸ್ಯ ಧಿಲ್ಲೋನ್ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹೇಳಿದ್ದಾನೆ. ನಟ್ಟನ್ ಜೊತೆ ನಮ್ಮ ಗ್ಯಾಂಗ್‌ಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆದರೆ, ಖೇರಾ ಅವರೊಂದಿಗೆ ಕೆಲಸ ಮಾಡುವ ಯಾವುದೇ ಗಾಯಕ ತಮ್ಮ ಪ್ರಾಣ ನಷ್ಟಕ್ಕೆ ತಾವೇ ಜವಾಬ್ದಾರರಾಗಿರುತ್ತಾರೆ ಎಂದು ಧಿಲ್ಲೋನ್​ ಎಚ್ಚರಿಸಿದ್ದಾನೆ.

ಏನಿದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್?

ಭಯೋತ್ಪಾದಕ ಸಂಘಟನೆ ಎಂದು ಕೆನಡಾ ಪಟ್ಟಿ ಮಾಡಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿರುವ 700ಕ್ಕೂ ಹೆಚ್ಚು ಶೂಟರ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂಬ ಮಾಹಿತಿ ಇದೆ. ಈ ಗ್ಯಾಂಗ್ ರ‍್ಯಾಪರ್ ಮತ್ತು ರಾಜಕಾರಣಿ ಸಿಧು ಮೂಸೆವಾಲಾ ಅವರ ಹತ್ಯೆ, ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕುವುದು ಮತ್ತು ಖಲಿಸ್ತಾನ್ ಪರ ಚಳುವಳಿಯೊಂದಿಗೆ ಸಂಪರ್ಕ ಹೊಂದಿರುವ ಆರೋಪ ಸೇರಿದಂತೆ ಹಲವಾರು ಉನ್ನತ ಪ್ರಕರಣಗಳಲ್ಲಿ ಭಾಗಿಯಾಗಿದೆ. ಈ ಗ್ಯಾಂಗ್​ನ ಲೀಡರ್​ ಲಾರೆನ್ಸ್​ ಬಿಷ್ಟೋಯ್​ ಜೈಲಿನಲ್ಲಿದ್ದುಕೊಂಡೇ ಅನೇಕ ಕೃತ್ಯಗಳನ್ನು ಎಸಗುತ್ತಿದ್ದಾನೆ ಎಂಬ ಮಾಹಿತಿ ಇದೆ. (ಏಜೆನ್ಸೀಸ್​)