ಬೆಂಗಳೂರು: ಅಧಿಕಾರದಲ್ಲಿರುವ ಕಾಂಗ್ರೆಸ್ ನವರಿಗೆ ಆಗಾಗ ಕಾನೂನು ನೆನಪಾಗುತ್ತದೆ. ಕಾನೂನು ಎಲ್ಲರಿಗೂ ಒಂದೇ ಎನ್ನುತ್ತಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯಿಸಿದ್ದನ್ನು ತೋರಿಸಿದರೆ ಶಿರಸಾಷ್ಟಾಂಗ ನಮಸ್ಕಾರ ಹಾಕುತ್ತೇನೆ ಎಂದು ಮಾಜಿ ಸಚಿವ, ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರದ ಓಲೈಕೆ ನೀತಿ ಹಿಂದು ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ, ನೋವಿನ ಭಾವನೆಯನ್ನು ಚಂದ್ರಶೇಖರನಾಥ ಸ್ವಾಮೀಜಿ ತಮ್ಮ ಮಾತಿನಲ್ಲಿ ವ್ಯಕ್ಯಗೊಳಿಸಿದ್ದರು. ನಂತರ ತಾವು ಆಡಿದ ಮಾತಿಗೆ ವಿಷಾದಿಸಿದ್ದಾರೆ.
ಆದರೂ ಪೊಲೀಸರು ನೋಟಿಸ್ ನೀಡಿದ್ದಾರೆ. ಸಿಎಂ, ಡಿಸಿಎಂ ತರಹ ಭಂಡತನ ಮೆರೆಯದೆ ತಮ್ಮ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರಿಗೆ ಆಹ್ವಾನಿಸಿದ್ದಾರೆ. ಸರ್ಕಾರದ ಈ ನಡೆಯನ್ನಂತೂ ಜನರು ಒಪ್ಪುವುದಿಲ್ಲ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಕೆಲವರು ತಮ್ಮ ಎದುರಿನಲ್ಲೇ ಪಾಕ್ ಪರ ಘೋಷಣೆ ಕೂಗಿದರೂ ಕಾಂಗ್ರೆಸ್ ಸಂಸದ ಸೈಯದ್ ನಾಸೀರ್ ಹುಸೇನ್ ತಳ್ಳಿ ಹಾಕಿದ್ದರು. ಸಚಿವರೊಬ್ಬರು ಸಮರ್ಥಿಸಿಕೊಂಡಿದ್ದರು. ನಂತರ ಎಫ್ ಎಸ್ ಎಲ್ ವರದಿಯು ಘೋಷಣೆ ಕೂಗಿದ್ದನ್ನು ದೃಢಪಡಿಸಿತು. ಈ ಘಟನೆಗೆ ಸಂಬಂಧಿಸಿದಂತೆ ಸಂಸದರ ವಿರುದ್ಧ ಕಾನೂನು ಕ್ರಮವಾಗಲಿಲ್ಲವೇಕೆ ? ಎಂದು ಕೇಳಿದರು.
ಸಿಎಂ, ಡಿಸಿಎಂ ಮನ ಬಂದಂತೆ ಮಾತನಾಡಿದ್ದಿದೆ. ದೊಡ್ಡ ಜನ ಹಾಗೆ ಮಾತನಾಡಿದ್ದನ್ನು ನೋಡಿದ ಕಾಂಗ್ರೆಸ್ ಪದಾಧಿಕಾರಿಗಳು ಬೇರೆ ರೀತಿಯಲ್ಲಿ ವರ್ತಿಸಿದ್ದಿದೆ. ಹಾಗಿದ್ದ ಮೇಲೆ ಕಾನೂನು ಎಲ್ಲರಿಗೂ ಒಂದೇ ಹೇಗಾಗುತ್ತದೆ. ಒಕ್ಕಲಿಗರ ಸಮಾವೇಶದಲ್ಲಿ ಪೆನ್ನು, ಪೇಪರ್ ಕೊಡಿ ಎಂದಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಏನಾಯಿತು ಎಂದು ಪ್ರಶ್ನಿಸಿದರು.
ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಯಾರೇ ಆಗಲಿ ಶಿಸ್ತಿನ ಚೌಕಟ್ಟು ಮೀರಬಾರದು ಎಂಬ ಸಂದೇಶವಿದು. ಪಕ್ಷದ ಸಂಘಟನೆ ಬಲವರ್ಧನೆಯತ್ತ ಗಮನವಿರಬೇಕು. ಪಕ್ಷದ ಕೇಂದ್ರ ಶಿಸ್ತು ಸಮಿತಿಯಿಂದ ನೋಟಿಸ್ ಪಡೆದವರು ಉತ್ತರ ನೀಡುತ್ತಾರೆ ಎಂದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ನೇರವಾಗಿ ಶಾಸಕ ಯತ್ನಾಳ್ ಹೆಸರು ಪ್ರಸ್ತಾಪಿಸಲು ಬಯಸಲಿಲ್ಲ.