ಸೊರಬದಲ್ಲಿ ವಿವಿಧ ಇಲಾಖೆಗಳಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಾಗಾರದಲ್ಲಿ ನ್ಯಾಯಾಧೀಶೆ ಶಾರದಾ ನಿಂಗಪ್ಪ ಕೊಪ್ಪದ್, ಮಂಜುಳಾ ಹೆಗಡಾಳ್, ಸುಮಂಗಲಾ, ಅರುಣ್, ಆರ್.ಪುಷ್ಪಾ ಇತರರಿದ್ದರು.  
ನ್ಯೂಸ್

ಉತ್ತಮ ಬದುಕಿಗೆ ಕಾನೂನು ಪಾಲನೆ ಮುಖ್ಯ

ಸೊರಬ: ಪ್ರತಿಯೊಬ್ಬರಿಗೂ ಕಾನೂನು ಅರಿವು ಅವಶ್ಯಕ. ಕಾನೂನನ್ನು ಪಾಲನೆ ಮಾಡಿದಾಗ ಮಾತ್ರ ಸಮಾಜದಲ್ಲಿ ಉತ್ತಮವಾಗಿ ಬದುಕಲು ಸಾಧ್ಯ ಎಂದು ಸೊರಬ ಹೆಚ್ಚುವರಿ ವ್ಯವಹಾರ ನ್ಯಾಯಾಧೀಶೆ, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಶಾರದಾ ನಿಂಗಪ್ಪ ಕೊಪ್ಪದ್ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪೋಕ್ಸೋ ಕಾಯ್ದೆ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಅನ್ವಯವಾಗುತ್ತದೆ. ಇವರಲ್ಲಿ ಯಾರೊಬ್ಬರೂ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ದೌರ್ಜನ್ಯ ಎಸಗಿದವರ ವಿರುದ್ಧ ಕೇಸು ದಾಖಲಿಸಬಹುದು ಎಂದರು.
ಇತ್ತೀಚೆಗೆ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕೂಲಿ ಕಾರ್ಮಿಕರು ಮತ್ತು ಸುಶಿಕ್ಷಿತರು ಆಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಮುಖ್ಯವಾಗಿ ಸಾಮಾಜಿಕ ಜಾಲತಾಣದ ಪಾಲು ಇದೆ. ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಬೇಕು. ಕಾನೂನಿನ ಅರಿವು ಹೊಂದಿ ತಮ್ಮ ಪೂರ್ವ ನಿರ್ಧಾರಿತ ಯೋಚನೆಗಳಿಂದ ಹಾಗೂ ಉತ್ತಮ ಆಯ್ಕೆಯಿಂದ ಸುರಕ್ಷಿತ ಬದಕು ಕಟ್ಟಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಸೊರಬ ಸಿಪಿಐ ಎಲ್.ಜಿ.ರಾಜಶೇಖರ್ ಮಾತನಾಡಿ, ಮಕ್ಕಳು ಸಾಮಾಜಿಕ ಜಾಲತಾಣದಿಂದ ಕಡ್ಡಾಯವಾಗಿ ದೂರ ಇರುವಂತೆ ಪಾಲಕರು ನೋಡಿಕೊಳ್ಳಬೇಕು. ಮಕ್ಕಳು ದೈಹಿಕವಾಗಿ ದೊಡ್ಡವರಾದರೂ ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಸಂಬಂಧಿಗಳಲ್ಲಿಯೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಮಕ್ಕಳು ಎಚ್ಚರದಿಂದ ಇರಬೇಕು. ಉನ್ನತ ಪದವಿ ಪಡೆದು ಸ್ವಂತ ಬಲದಿಂದ ದುಡಿಮೆ ಮಾಡುವ ಛಲ ಹೊಂದಬೇಕು. ಹೆಣ್ಣು ಮಕ್ಕಳು 18 ವರ್ಷದ ನಂತರವೇ ಮದುವೆಗೆ ಸಮ್ಮತಿಸಬೇಕು ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ವೈ.ಅಶೋಕ ಮಾತನಾಡಿ, ಅಪರಾಧ ಮಾಡಿ ಕಾನೂನು ತಿಳಿದಿಲ್ಲ ಎಂದರೆ ಇದಕ್ಕೆ ಕ್ಷಮೆ ಇರುವುದಿಲ್ಲ. ಆದ್ದರಿಂದ ಎಲ್ಲರೂ ಕಾನೂನಿನ ಅರಿವು ಹೊಂದಲೇಬೇಕು. ಕೌಟುಂಬಿಕವಾಗಿ ಅನೇಕ ದೌರ್ಜನ್ಯಗಳು ಮಹಿಳೆಯರ ಮೇಲೆ ನಡೆಯುತ್ತಿವೆ. ಮೊದಲು ನಾವು ಪರಿವರ್ತನೆಯಾಗಬೇಕು. ಪಾಲಕರು ಮಕ್ಕಳ ಬಗ್ಗೆ ಜಾಗ್ರತೆ ವಹಿಸುವ ಜತೆಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು ಎಂದರು.
ಹಿರಿಯ ವಕೀಲ ಎಂ.ಆರ್.ಪಾಟೀಲ್ ಪೋಕ್ಸೋ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು. ತಹಸೀಲ್ದಾರ್ ಮಂಜುಳಾ ಹೆಗಡಾಳ್, ಎಪಿಪಿ ಸುಮಂಗಲಾ, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಅರುಣ್, ಬಿಇಒ ಆರ್.ಪುಷ್ಪಾ, ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ದಯಾನಂದ ಕಲ್ಲೇರ್, ಬಿಆರ್‌ಸಿ ಮಂಜಪ್ಪ, ಸಂಜಯ್, ಸುಮಾ ಇತರರಿದ್ದರು.