ನ್ಯೂಸ್

ಕೈ ತಪ್ಪಿದ ಕಾನೂನು ಸುವ್ಯವಸ್ಥೆ!

ಬೆಂಗಳೂರು: ಕರುನಾಡಿನಲ್ಲಿ ಸಾಲುಸಾಲು ಅಮಾಯಕರ ಹತ್ಯೆ, ಗಲಭೆ, ಬೆದರಿಕೆ, ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ. ಸಮಾಜಘಾತುಕ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿದ್ದು, ಸಾರ್ವಜನಿಕರಲ್ಲಿ ಒಂದು ರೀತಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ರಾಜ್ಯ ಸರ್ಕಾರ ಹಾಗೂ ಪೊಲೀಸರು, ಲೋಕಸಭೆ ಚುನಾವಣಾ ಭರಾಟೆಯಲ್ಲಿ ಮಗ್ನರಾಗಿರುವುದರಿಂದ ಲಾ ಆಂಡ್ ಆರ್ಡರ್ ಪೂರ್ಣಪ್ರಮಾಣದಲ್ಲಿ ‘ಕೈ’ತಪ್ಪಿ ಹೋಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ಬೆಂಗಳೂರು ಸೇರಿ ರಾಜ್ಯದಲ್ಲಿ ಕಳೆದ 48 ಗಂಟೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ 8 ಜನರ ಹತ್ಯೆಯಾಗಿದೆ. ಎರಡು ಗಲಭೆ, ಹಲ್ಲೆ ಪ್ರಕರಣಗಳು ವರದಿಯಾಗಿವೆ. ಹುಬ್ಬಳ್ಳಿಯಲ್ಲಿ ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಕಾಲೇಜು ಆವರಣದಲ್ಲೇ ನೇಹಾ ಎಂಬ ವಿದ್ಯಾರ್ಥಿನಿಯನ್ನು ಇರಿದು ಕೊಲೆ ಮಾಡಲಾಗಿದೆ. ಮಡಿಕೇರಿಯಲ್ಲಿ ಬಿಜೆಪಿ ಪ್ರಚಾರ ಕಾರ್ಯದಲ್ಲಿದ್ದ ಕಾರ್ಯಕರ್ತರ ಮೇಲೆ ಕಾರು ಹತ್ತಿಸಲಾಗಿದ್ದು, ಕಾರ್ಯಕರ್ತರಾದ ಶಿವನೇಗೌಡನ ರಾಮಪ್ಪ ಮೃತಪಟ್ಟಿದ್ದಾರೆ. ಇದೇ ಪ್ರಕರಣದಲ್ಲಿ ಇನ್ನಿಬ್ಬರು ಕಾರ್ಯಕರ್ತರಾದ ಚಂದ್ರರಾಜು ಹಾಗೂ ರತೀಶ್ ಗಾಯಗೊಂಡಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ. ಗದಗದಲ್ಲಿ ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲಾಗಿದೆ.

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಶ್ರೀರಾಮನವಮಿ ಆಚರಣೆಯ ವೇಳೆ ಜೈ ಶ್ರೀರಾಮ್ ಘೊಷಣೆ ಕೂಗಿದ ಯುವಕರ ಜತೆ ಗಲಾಟೆ ತೆಗೆದು ಅವರ ಮೇಲೆ ಹಲ್ಲೆ ಮಾಡಲಾಗಿದೆ.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ನೇಹಾ ಹಿರೇಮಠ ಹತ್ಯೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ ಇಲ್ಲದ ಕಾರಣಕ್ಕೆ ಕಾಲೇಜ್ ಕ್ಯಾಂಪಸ್ ಕೂಡ ಸುರಕ್ಷಿತವಾಗಿ ಉಳಿದಿಲ್ಲ. ಕ್ಯಾಂಪಸ್ ಒಳಗೆ ಬಂದು ವಿದ್ಯಾರ್ಥಿನಿಯನ್ನು ಹತ್ಯೆ ಮಾಡುವಷ್ಟು ವಿಕೃತಿಯನ್ನು ದುಷ್ಕರ್ವಿು ಮೆರೆದಿದ್ದಾನೆ ಎಂದು ವಿದ್ಯಾರ್ಥಿ ಸಮೂಹ ಆತಂಕದಿಂದ ಹೇಳುತ್ತಿದೆ.

ಹತ್ಯೆಯಾದ ಯುವತಿ ಹು-ಧಾ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಪುತ್ರಿಯಾಗಿದ್ದು, ಅಧಿಕಾರಸ್ಥರ ಮಕ್ಕಳಿಗೆ ಹೀಗಾದರೆ ಇನ್ನು ಸಾಮಾನ್ಯರ ಗತಿ ಏನು, ಇಲ್ಲಿ ಯಾರು ಸುರಕ್ಷಿತವಾಗಿದ್ದಾರೆ? ಎಂಬ ಸಾಮಾನ್ಯ ಪ್ರಶ್ನೆಯನ್ನು ಜನರ ಕೇಳುತ್ತಿದ್ದಾರೆ.

ಕೊಲೆ ಘಟನೆಯ ನಂತರ ವಿದ್ಯಾರ್ಥಿ ಸಂಘಟನೆಗಳು ಮಾತ್ರವಲ್ಲ, ದಲಿತ ಸಂಘಟನೆ ಗಳು, ಮುಸ್ಲಿಂ ಸಂಘಟನೆಗಳೂ ಸೇರಿ ಹಲವರು ಪ್ರತಿಭಟನೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಎಬಿವಿಪಿ, ದಲಿತ ವಿಮೋಚನಾ ಸಮಿತಿ ಸೇರಿ ವಿವಿಧ ಸಂಘಟನೆಯ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ಕೊಲೆಗಡುಕನನ್ನು ಗಲ್ಲಿಗೇರಿಸ ಬೇಕು ಇಲ್ಲವೇ ಎನ್​ಕೌಂಟರ್ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಆತ ನಿಜವಾಗಿಯೂ ಪ್ರೀತಿ ಮಾಡುತ್ತಿದ್ದರೆ ಇಂತ ದುಷ್ಕೃತ್ಯಕ್ಕೆ ಕೈಹಾಕುತ್ತಿದ್ದನೆ? ಪ್ರೀತಿ, ಪ್ರೇಮದ ಬಲೆ ಬೀಸಿ ಹಿಂದು ಯುವತಿಯರನ್ನು ಜಾಲಕ್ಕೆ ಸಿಲುಕಿಸುವ ಪ್ರಸಂಗಗಳು ಆಗಾಗ ನಡೆಯುತ್ತಿವೆ. ಅದರಂತೆ ನೇಹಾ ಪ್ರಕರಣವೂ ಲವ್ ಜಿಹಾದ್​ನಂತೆ ಗೋಚರಿಸುತ್ತಿದೆ. ಹಾಗಾಗಿ, ಸೂಕ್ತ ತನಿಖೆ ನಡೆಯಬೇಕು. ಇದಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸಚಿವ ಸಂತೋಷ್ ಲಾಡ್ ಕೂಡ ಇಂತಹ ಘಟನೆಗಳು ಮರುಕಳಿಸಬಾರದು ಎಂದರೆ ಎನ್​ಕೌಂಟರ್ ಕಾನೂನು ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಕೊಲೆಗಾರನನ್ನು ಎನ್​ಕೌಂಟರ್ ಮಾಡಬೇಕು, ಐಸಿಸ್ ಮಾದರಿಯಲ್ಲಿ ಚಾಕು ಹಾಕಿದ್ದಾನೆ. ಆತನ ಮನೆಯನ್ನು ಬುಲ್ಡೋಜರ್​ನಿಂದ ನೆಲಸಮ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಅಂತ್ಯ ಸಂಸ್ಕಾರ: ಗುರುವಾರ ಕೊಲೆಯಾಗಿದ್ದ ನೇಹಾ ಹಿರೇಮಠ ಅಂತ್ಯ ಸಂಸ್ಕಾರ ಶುಕ್ರವಾರ ಹುಬ್ಬಳ್ಳಿಯ ಕಲಬುರ್ಗಿ ಮಠ ಬಳಿಯ ರುದ್ರಭೂಮಿಯಲ್ಲಿ ನೆರವೇರಿತು. ಬಿಡನಾಳದ ಬಸವ ನಗರದಲ್ಲಿರುವ ಮನೆಯಿಂದ ನೇಹಾಳ ಅಂತಿಮಯಾತ್ರೆ ಹೊರಟಿತು. ಅಮಾಯಕ ಯುವತಿ ವಿಕೃತಿಗೆ ಬಲಿಪಶುವಾದದ್ದನ್ನು ನೆನೆದು ಸೇರಿದ್ದ ಸಾವಿರಾರು ಜನರು ಕಣ್ಣೀರಾದರು.

ಜನಪ್ರತಿನಿಧಿಗಳ ಭೇಟಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಪ್ರಸಾದ ಅಬ್ಬಯ್ಯ ಅವರು ಕೊಲೆಗೀಡಾದ ನೇಹಾಳ ಪಾಲಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಘಟನೆಯನ್ನು ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಗೃಹ ಸಚಿವರ ಕ್ಷಮೆಗೆ ಆಗ್ರಹ:  ಪ್ರೀತಿ ತಿರಸ್ಕರಿಸಿದಳೆಂದು ವಿಕೃತಿ ಪ್ರದರ್ಶಿಸಿ ಕೊಲೆ ಮಾಡಿದ ಘಟನೆಯನ್ನು ‘ಆಕಸ್ಮಿಕ’ ಎಂದು ಹೇಳಿದ ಗೃಹ ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗೃಹ ಸಚಿವರು ನೀಡಿದ ಹೇಳಿಕೆ ಖಂಡನೀಯ. ಅವರು ಕೂಡಲೇ ಕ್ಷಮೆ ಯಾಚಿಸಬೇಕೆಂದು ಹಿಂದು ಪರ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ನೇಹಾ ಪಾರ್ಥಿವ ಶರೀರವನ್ನು ರಸ್ತೆಯಲ್ಲಿ ಇಟ್ಟುಕೊಂಡು ಕೆಲಕಾಲ ಪ್ರತಿಭಟನೆ ನಡೆಸಿದರು. ಇಲ್ಲಿನ ವೀರಾಪುರ ರಸ್ತೆ ಎರಡೆತ್ತಿನಮಠ ಸಮೀಪದಲ್ಲಿ ನೇಹಾ ಪಾರ್ಥಿವ ಶರೀರ ಇಟ್ಟು ಪ್ರತಿಭಟನೆ ನಡೆದಾಗ ಸಾರ್ವಜನಿಕರೂ ದನಿಗೂಡಿಸಿದರು.

ಫಯಾಜ್ ನ್ಯಾಯಾಂಗ ಬಂಧನಕ್ಕೆ:  ನೇಹಾ ನಿರಂಜನಯ್ಯ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್​ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗುರುವಾರ ಸಂಜೆ ಆತನನ್ನು ಬಂಧಿಸಿದ ಪೊಲೀಸರು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಆತನನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ. ಆರೋಪಿಯನ್ನು ಧಾರವಾಡ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇಹಾ ಹತ್ಯೆಗೆ ರಂಭಾಪುರಿ, ಶ್ರೀಶೈಲ ಜಗದ್ಗುರುಗಳ ಖಂಡನೆ

ಬೆಂಗಳೂರು: ಹುಬ್ಬಳ್ಳಿ ಕಾಲೇಜು ಆವರಣದಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮತ್ತು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಜಗದ್ಗುರುಗಳು ತೀವ್ರವಾಗಿ ಖಂಡಿಸಿದ್ದಾರೆ. ವಿಜಯವಾಣಿಯೊಂದಿಗೆ ಮಾತನಾಡಿದ ಉಭಯ ಜಗದ್ಗುರುಗಳು, ಮಕ್ಕಳ ಭವಿಷ್ಯ ರೂಪಿಸುವ ಜ್ಞಾನದೇಗುಲದ ಆವರಣದಲ್ಲಿ ಇಂಥ ಘೋರ ಕೃತ್ಯ ನಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಶೀಘ್ರವೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಹೇಳಿಕೆಗೆ ವಿದ್ಯಾರ್ಥಿನಿ ತಂದೆ ಕಿಡಿ

ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಇಂಥ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ನೇಹಾಳ ತಂದೆ ನಿರಂಜನ ಹಿರೇಮಠ ಅವರನ್ನು ಕೆರಳಿಸಿದೆ. ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರೂ ಆಗಿರುವ ನೇಹಾಳ ತಂದೆ ನಿರಂಜನ ಸಿಎಂಗೆ ತಿರುಗೇಟು ನೀಡಿದ್ದಾರೆ. ‘ನಾನು ಸಹ ಕಾಂಗ್ರೆಸ್ ಕಾರ್ಯಕರ್ತ ಇದ್ದೇನೆ. ನೀವು ಏನು ಮಾತನಾಡುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ’ ಎಂದು ಆಕ್ರೋಶದಿಂದ ಹೇಳಿದ್ದಾರೆ. ‘ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೆ ವೈಯಕ್ತಿಕ ಕಾರಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ‘ಇದರಲ್ಲಿ ವೈಯಕ್ತಿಕ ಕಾರಣ ಏನಿದೆ? ನಾನೇನಾದರೂ ಕೊಲೆಗಡುಕನ ಕುಟುಂಬದವರೊಂದಿಗೆ ವ್ಯವಹಾರ ಇಟ್ಟುಕೊಂಡಿದ್ದೇನಾ? ಅಥವಾ ನನ್ನ ಮಗಳು ಏನಾದರೂ ವ್ಯವಹಾರ ಮಾಡಿದ್ದಳೆ? ಅವರೇನಾದರೂ ನನ್ನ ಸಂಬಂಧಿಕರಾ? ವೈಯಕ್ತಿಕ ಕಾರಣ ಎಂದರೆ ಏನರ್ಥ?’ ಎಂದು ನಿರಂಜನ ಹಿರೇಮಠ ಖಾರವಾಗಿ ಪ್ರಶ್ನಿಸಿದ್ದಾರೆ. ‘ವೈಯಕ್ತಿಕ ಕಾರಣ ಇದ್ದಿದ್ದರೆ ನನ್ನ ಮಗಳ ಕೊಲೆ ಏಕೆ ಆಗುತ್ತಿತ್ತು? ನನ್ನ ಕುಟುಂಬದಲ್ಲಿ ದುಃಖ ಇದೆ. ಇಂತಹ ಹೇಳಿಕೆ ನೀಡುವ ಮೂಲಕ ಇಡೀ ರಾಜ್ಯದ ಎದುರು ನನ್ನ ಮತ್ತು ನನ್ನ ಕುಟುಂಬದ ಮರ್ಯಾದೆ ತೆಗೆಯಬೇಡಿ’ ಎಂದು ಮನವಿ ಮಾಡಿದ್ದಾರೆ. ‘ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನೊಂದಿಗೆ ಇನ್ನೂ ನಾಲ್ಕು ಜನ ಇದ್ದಾರೆ. ಅವರನ್ನೂ ಅರೆಸ್ಟ್ ಮಾಡಿಸಿ. ಕೊಲೆಗಡುಕನನ್ನು ಎನ್​ಕೌಂಟರ್ ಮಾಡಿಸಿ ಎಂದು ಒತ್ತಾಯಿಸಿದ್ದಾರೆ. ಈ ಕೊಲೆ ಏಕಾಏಕಿ ನಡೆದಿದ್ದಲ್ಲ. ಇದರ ಹಿಂದೆ ಕೆಲವು ದಿನಗಳ ಷಡ್ಯಂತ್ರ ಅಡಗಿದೆ. ಆಕೆಯನ್ನು ಬುಟ್ಟಿಯಲ್ಲಿ ಹಾಕಿಕೊಳ್ಳಬೇಕು ಇಲ್ಲವೇ ಕೊಲೆ ಮಾಡಬೇಕು ಎಂದು ಕೊಲೆಗಡುಕರು ಯೋಜನೆ ರೂಪಿಸಿದ್ದರು’ ಎಂದು ದೂರಿದ್ದಾರೆ.

ಭಯದ ವಾತಾವರಣ

1. ಕೆಲವೇ ಗಂಟೆಗಳಲ್ಲಿ ಸಾಲುಸಾಲು ಹತ್ಯೆಗಳು, ಸಣ್ಣಪುಟ್ಟ ಕಾರಣಕ್ಕೂ ಗಲಾಟೆ, ಬೆದರಿಕೆ, ಹಲ್ಲೆ.

2. ಪೊಲೀಸರು ಚುನಾವಣೆಯಲ್ಲಿ ತಲ್ಲೀನ.

3. ಎಲೆಕ್ಷನ್ ಕೆಲಸಗಳಿಗೆ ನಿಯೋಜನೆಯಿಂದ ಠಾಣೆಗಳಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಹಾಜರಾತಿ.

4. ಸಾರ್ವಜನಿಕರು ದೂರು ಕೊಟ್ಟರೂ ಗಂಭೀರ ವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಲ್ಲಿ ವಿಫಲ.

5.ಗಂಭೀರ ಕೇಸ್​ಗಳಲ್ಲಿ ಜನಪ್ರತಿನಿಧಿಗಳಿಂದ ಬೇಕಾಬಿಟ್ಟಿ ಹೇಳಿಕೆ.

6. ಅಪರಾಧ ಎಸಗಿದ ಸಮಾಜಘಾತುಕರನ್ನು ಹಿಡಿದು ಶಿಕ್ಷಿಸುವಲ್ಲಿ ನಿಧಾನಗತಿಯ ಧೋರಣೆ.

ಇತ್ತೀಚಿನ ಕೆಲ ಪ್ರಕರಣ

1. ಬೆಳಗಾವಿಯ ವಂಟಮುರಿ ಗ್ರಾಮದಲ್ಲಿ ದಲಿತ ಮಹಿಳೆಯನ್ನು ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಹಲ್ಲೆ.

2. ರಾಜ್ಯಸಭೆ ಚುನಾವಣಾ ಫಲಿತಾಂಶದ ವೇಳೆ ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ್ದು.

3. ವೈಟ್​ಫೀಲ್ಡ್​ನ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ.

4. ಚಿಕ್ಕಪೇಟೆಯಲ್ಲಿ ಮೊಬೈಲ್ ಅಂಗಡಿ ಮಾಲೀಕ ಹನುಮಾನ್ ಚಾಲೀಸ್ ಹಾಕಿದನೆಂದು ಹೊರಗೆಳೆದು ಹಲ್ಲೆ.

5. ವಿದ್ಯಾರಣ್ಯಪುರದಲ್ಲಿ ಶ್ರೀರಾಮನವಮಿ ವೇಳೆ ಜೈಶ್ರೀರಾಮ ಘೋಷಣೆ ಕೂಗಿದವರ ಮೇಲೆ ಹಲ್ಲೆ.

6. ಹುಬ್ಬಳ್ಳಿ ಕಾಲೇಜು ಆವರಣದಲ್ಲಿ ಹಿಂದು ಯುವತಿಯ ಬರ್ಬರ ಹತ್ಯೆ.

7. ಮಡಿಕೇರಿಯಲ್ಲಿ ಬಿಜೆಪಿ ಪ್ರಚಾರದ ವೇಳೆ ಕಾರು ಹತ್ತಿಸಿ ಕಾರ್ಯಕರ್ತನ ಹತ್ಯೆ.

8. ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ.

9. ಮೈಸೂರಿನಲ್ಲಿ ಮೋದಿ ಹಾಡು ಬರೆದ ಯುವಕನಿಗೆ ಥಳಿತ.

ಬಾಂಬ್ ಸ್ಪೋಟ, ಕೊಲೆ, ಹಲ್ಲೆ, ಬಹಿರಂಗವಾಗಿ ಧಮ್ಕಿ ಪ್ರಕರಣಗಳ ಸರಣಿಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿಕ್ಕೆಟ್ಟು ಹೋಗಿರುವುದನ್ನು ಎತ್ತಿ ತೋರಿಸುತ್ತದೆ. ಸಮಾಜಘಾತುಕರ ಅಟ್ಟಹಾಸ ಗಮನಿಸಿದರೆ, ಡಾನ್​ಗಳಿಗೆ ಅಧಿಕಾರ ಕೊಟ್ಟು ಕಾಂಗ್ರೆಸ್ ಕೈಚೆಲ್ಲಿ ಕುಳಿತಂತಿದೆ.

| ಆರ್. ಅಶೋಕ ವಿಧಾನಸಭೆ ಪ್ರತಿಪಕ್ಷ ನಾಯಕ

ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯ ಕೊಲೆಯಂಥ ಘಟನೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಶಿಥಿಲಗೊಂಡಿರುವುದನ್ನು ಸೂಚಿಸುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು.

| ಪ್ರಲ್ಹಾದ ಜೋಶಿ,  ಕೇಂದ್ರ ಸಚಿವ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಳೆ ಯರ ಮೇಲಿನ ದೌರ್ಜನ್ಯ ಪ್ರಕರಣ ಶೇ.43 ಹೆಚ್ಚಳವಾಗಿವೆ. ಕಾಲೇಜು ಆವರಣದಲ್ಲಿಯೇ ಯುವತಿಗೆ ಯುವಕ ಒಂಬತ್ತು ಬಾರಿ ಚಾಕುವಿನಿಂದ ಇರಿದು ಓಡಿ ಹೋಗುತ್ತಾನೆ ಎಂದರೆ ಅವನ ಹಿಂದೆ ಯಾವ ಶಕ್ತಿ ಇದೆ? ಗೃಹ ಸಚಿವರು ಅದೊಂದು ಪ್ರೇಮ ಪ್ರಕರಣ ಎಂದು ಹಗುರ ಹೇಳಿಕೆ ಕೊಟ್ಟರೆ ಅಪರಾಧಿಗಳಿಗೆ ಪುಷ್ಟಿ ಬರದೆ ಇನ್ನೇನಾಗುತ್ತದೆ?

| ಬಸವರಾಜ ಬೊಮ್ಮಾಯಿ ಮಾಜಿ ಸಿಎಂ

ಅಮಾಯಕ ವಿದ್ಯಾರ್ಥಿನಿಯನ್ನು ಮತಾಂಧ ಹುಡುಗ ಕೊಲೆ ಮಾಡಿರುವುದು ಖಂಡನೀಯ. ಈ ವಿಚಾರದಲ್ಲಿ ರಾಜ್ಯ ಗೃಹ ಮಂತ್ರಿ ಹಾಗೂ ಮುಖ್ಯಮಂತ್ರಿ ‘ವೈಯಕ್ತಿಕ ವಿಷಯಕ್ಕೆ ನಡೆದ ಕೊಲೆ’ ಎಂದು ಹೇಳಿರುವುದು ತೀವ್ರ ನೋವಿನ ಸಂಗತಿ. ಅವರಿಗೆ ಮರ್ಯಾದೆ ಎಂಬುದು ಇದ್ದರೆ ಫಯಾಜ್​ನನ್ನು ಎನ್​ಕೌಂಟರ್ ಮಾಡಲಿ.

| ಬಸನಗೌಡ ಪಾಟೀಲ ಯತ್ನಾಳ ಶಾಸಕ