ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಕಣ್ಮರೆಯಾಗಿದೆ(Law and order disappeared under the Congress government) . ಅಪರಾಧಿಗಳು, ಕಾಮುಕರು, ದರೋಡೆಕೋರರು ಹಾಡಹಗಲೇ ನಿರ್ಭೀತಿಯಿಂದ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಜೆಡಿಎಸ್(JDS) ವಾಗ್ದಾಳಿ ನಡೆಸಿದೆ.
ಗೃಹ ಇಲಾಖೆ ಹೊಣೆ ಹೊತ್ತಿರುವ ಅಸಮರ್ಥ ಮಂತ್ರಿ ಪರಮೇಶ್ವರ ಅವರಿಂದ ರಾಜ್ಯದ ಜನರ ರಕ್ಷಣೆ ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮಂಡ್ಯದ ಸರ್ಕಾರಿ ಶಾಲೆಯ ಆವರಣದಲ್ಲಿ ಬಾಲಕಿ ಮೇಲೆ ಕಾಮುಕರಿಂದ ಸಾಮೂಹಿಕ ಲೈಂಗಿಕ ಕಿರುಕುಳ ನಡೆದಿದೆ. ಇದು ಅಮಾನವೀಯ. ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಕಣ್ಮರೆಯಾಗಿದೆ. ಗೃಹ ಇಲಾಖೆ ಹೊಣೆ ಹೊತ್ತಿರುವ ಅಸಮರ್ಥ ಮಂತ್ರಿ ಪರಮೇಶ್ವರ ಅವರಿಂದ ವೈಲ್ಯದಿಂದ ಕರ್ನಾಟಕದಲ್ಲಿ ಪ್ರತಿ ದಿನ ಒಂದಲ್ಲ ಒಂದು ಲೈಂಗಿಕ ಕಿರುಕುಳ, ಅತ್ಯಾಚಾರ, ದರೋಡೆ, ಕೊಲೆ, ಹಲ್ಲೆ, ದೌರ್ಜನ್ಯಗಳಾಗುತ್ತಿದ್ದರೂ ಸರ್ಕಾರ ಗಾಢ ನಿದ್ದೆಯಲ್ಲಿದೆ ಎಂದು ಟೀಕಿಸಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಬರೀ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕೃಷಿ ಇಲಾಖೆಯಲ್ಲಿ ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಣೆ, ಅಬಕಾರಿ ವರ್ಗಾವಣೆ ದಂಧೆ, ಕಾಮಗಾರಿಗಳಲ್ಲಿ ಕಮಿಷನ್ ವ್ಯವಹಾರದಲ್ಲಿ ಸಂಪೂರ್ಣ ತೊಡಗಿದ್ದು, ಜಿಲ್ಲೆಯನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಹರಿಹಾಯ್ದಿದೆ.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ಎಲ್ಲ ವಿಧದಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಹಿಂದಿನ ಸರ್ಕಾರಗಳ ಆಡಳಿತದಲ್ಲಿ ರೇಪ್ ಆಗಿಲ್ವಾ ಎನ್ನುವ ಸಿದ್ದರಾಮಯ್ಯ ಅವರಿಂದ ಇನ್ನೇನು ನಿರೀಕ್ಷಿಸಲುಸಾಧ್ಯ! ಎಂದು ಜೆಡಿಎಸ್ ಅಸಮಾಧಾನ ಹೊರ ಹಾಕಿದೆ.
ಮನೆಹಾಳ ಕಾಂಗ್ರೆಸ್ ಸರ್ಕಾರ ಈಗ ಬೆಂಗಳೂರು ಉತ್ತರ ತಾಲೂಕಿನ ದಾಸನಪುರದ ಜನರನ್ನು ಒಕ್ಕಲೆಬ್ಬಿಸುವ ದುಷ್ಟ ಪ್ರಯತ್ನಕ್ಕೆ ಮುಂದಾಗಿದೆ ಎಂದು ಜೆಡಿಎಸ್ ಟೀಕಿಸಿದೆ.
ಫೆರಿಫೆರಲ್ ರಿಂಗ್ ರಸ್ತೆ, ಬಿಎಂಟಿಸಿ ಬಸ್ ಡಿಪೋ ಹಾಗೂ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು ಸಾವಿರಾರು ಭೂಮಾಲೀಕರಿಗೆ ಬಿಡಿಎ ನೋಟಿಸ್ ನೀಡಿದೆ.
ದಾಸನಪುರದ 15 ಕ್ಕೂ ಹೆಚ್ಚು ಗ್ರಾಮಸ್ಥರ 20 ವರ್ಷಗಳ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡಲು ಹೊರಟಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸ್ಥಳೀಯರು ಕಣ್ಣೀರಿಟ್ಟು ಹಿಡಿಶಾಪ ಹಾಕುತ್ತಿದ್ದಾರೆ. ಬೆವರು ಸುರಿಸಿ ಕಷ್ಟ ಪಟ್ಟು ದುಡಿದು, ಸಾಲ ಮಾಡಿ ಸ್ವಂತ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಜನರನ್ನು ಏಕಾಏಕಿ ನೋಟಿಸ್ ನೀಡಿ ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿದೆ.
ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವ ಸಚಿವರ ಸಂಪತ್ತಿನ ಆಸೆಗೆ ಅದೆಷ್ಟು ಸಾವಿರ ಕುಟುಂಬಗಳನ್ನು ಬೀದಿ ಪಾಲು ಮಾಡುತ್ತಾರೋ ಆ ಶಿವನೇ ಬಲ್ಲ ಎಂದು ಜೆಡಿಎಸ್ ಅಸಮಾಧಾನ ಹೊರ ಹಾಕಿದೆ.