ನ್ಯೂಸ್

ಲಾ ಆ್ಯಂಡ್​ ಆರ್ಡರ್​;​ ಕೋರ್ಟ್​ಗಳ ಹೊರೆ ಇಳಿಸುವ ಪರ್ಯಾಯ ಮಾರ್ಗ...

ಚೌಕಾಶಿ ಸಂಧಾನ ಮನವಿ ಆರೋಪಿಯ ಶಿಕ್ಷೆ ಪ್ರಮಾಣದಲ್ಲಿ ಚೌಕಾಶಿ ಮಾಡಲು ಅವಕಾಶ ನೀಡುತ್ತದೆಯೇ ಹೊರತು ಪೂರ್ಣವಾಗಿ ದೋಷಮುಕ್ತಗೊಳ್ಳಲು ಅಲ್ಲ.

| ನ್ಯಾಯಮೂರ್ತಿ ಮಳೀಮಠ್

ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳ ಪ್ರಮಾಣದ ಅಗಾಧತೆ ಯಾವಾಗಲೂ ನ್ಯಾಯಾಂಗ ಮತ್ತು ಶಾಸಕಾಂಗಕ್ಕೆ ಕಳವಳ ತರುವ ವಿಚಾರವೇ ಆಗಿದೆ. ಮೂರು ಕೋಟಿ ಕ್ರಿಮಿನಲ್ ಪ್ರಕರಣಗಳು ಬಾಕಿಯಿದ್ದು ಪ್ರತಿವರ್ಷ ಒಂದು ಕೋಟಿ ಪ್ರಕರಣಗಳು ಹೊಸದಾಗಿ ಸೇರ್ಪಡೆಯಾಗುತ್ತವೆ. ಇದಕ್ಕೆ ಪರಿಹಾರವಾಗಿ ಯಾವುದಾದರೂ ಪರ್ಯಾಯ ಮಾರ್ಗ ಕಂಡುಕೊಳ್ಳದಿದ್ದರೆ ಇಡೀ ವ್ಯವಸ್ಥೆಯೇ ಕುಸಿಯುವ ಅಪಾಯ ಎದುರಾಗಬಹುದು.

ನ್ಯಾಯಾಧೀಶರ ಸಂಖ್ಯೆಯಲ್ಲಿ ಹೆಚ್ಚಳ, ಪ್ರಕರಣಗಳ ವಿಚಾರಣೆಗೆ ಗರಿಷ್ಠ ಸಮಯಮಿತಿ ನಿಗದಿಪಡಿಸಿ ಕಾನೂನುಗಳಿಗೆ ತಿದ್ದುಪಡಿ, ಕೋರ್ಟ್ ಹೊರಗೆ ವಿವಾದ ಇತ್ಯರ್ಥ ಇತ್ಯಾದಿ ಕ್ರಮಗಳ ಮೂಲಕ ಈ ಬಾಕಿ ಪ್ರಕರಣಗಳ ಮಹಾಸ್ಪೋಟ ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಚೌಕಾಶಿ ಸಂಧಾನ ಮನವಿ (ಪ್ಲೀ ಬಾರ್ಗೆಯ್ನಿಂಗ್) ಎಂಬ ಹೊಸ ಮಾರ್ಗವೊಂದನ್ನು ಕ್ರಿಮಿನಲ್ ಕಾನೂನಿನ ಸುಧಾರಣೆ ಭಾಗವಾಗಿ 2005ರಲ್ಲಿ ಪರಿಚಯಿಸಲಾಯಿತು. ಇದು ಕೂಡ ಬಾಕಿ ಪ್ರಕರಣಗಳ ಪ್ರವಾಹದ ತಡೆಗೆ ಒಂದು ಕ್ರಮವಾಗಿದೆ.

ಡಿಫೆನ್ಸ್ ಮತ್ತು ಪ್ರಾಸಿಕ್ಯೂಷನ್ ನಡುವಿನ ಒಂದು ಒಪ್ಪಂದವೇ ಈ ಪ್ಲೀ ಬಾರ್ಗೆಯ್ನಿಂಗ್. ಪ್ರತಿವಾದಿ ತನ್ನೆಲ್ಲ ಅಥವಾ ಕೆಲವು ಅಪರಾಧಗಳನ್ನು ಒಪ್ಪಿಕೊಂಡು ಅದಕ್ಕೆ ಪ್ರತಿಯಾಗಿ ಕಡಿಮೆ ಪ್ರಮಾಣದ ಶಿಕ್ಷೆಗೆ ಒಳಗಾಗುವುದು ಅಥವಾ ಪ್ರಾಸಿಕ್ಯೂಷನ್ ಕೆಲವು ಆರೋಪಗಳನ್ನು ಕೈಬಿಡುವಂತೆ ಮಾಡುವುದೇ ಈ ಪರಿಕಲ್ಪನೆ. ತುಂಬ ಸರಳವಾಗಿ ಹೇಳಬೇಕೆಂದರೆ, ವಿಚಾರಣೆಗೂ ಮುಂಚೆಯೇ ಉಭಯ ಪಕ್ಷಗಳ ನಡುವೆ ಸಂಧಾನ ಮಾತುಕತೆ ನಡೆದು ಪ್ರತಿವಾದಿಗೆ ರಿಯಾಯಿತಿ ನೀಡಲಾಗುತ್ತದೆ.

ಪರಸ್ಪರ ಮಾತುಕತೆ ಮೂಲಕ ಸಂತ್ರಸ್ತ ವಾದಿ ಹಾಗೂ ಆರೋಪಿ ಪ್ರತಿವಾದಿ ಇಬ್ಬರಿಗೂ ಅನುಕೂಲವಾಗುವಂಥ ಒಂದು ಒಪ್ಪಂದಕ್ಕೆ ಬರುವುದೇ ಪ್ಲೀ ಬಾರ್ಗೆಯ್ನಿಂಗ್ ವ್ಯವಸ್ಥೆ. ಜಗತ್ತಿನ ಅನೇಕ ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದ್ದು ಅಮೆರಿಕದಲ್ಲಿ ತುಂಬ ಯಶಸ್ವಿಯಾಗಿದೆ. ಅಮೆರಿಕದಲ್ಲಿ 90%ಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಪ್ಲೀ ಬಾರ್ಗೆಯ್ನಿಂಗ್ ಮೂಲಕ ಇತ್ಯರ್ಥ ಪಡಿಸಲಾಗುತ್ತಿದೆ.

ಭಾರತ ಹಿಂದೇಟು: ಆರಂಭದಲ್ಲಿ ಈ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಲು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಹಿಂದೇಟು ಹಾಕಿತ್ತು. ಪ್ಲೀ ಬಾರ್ಗೆಯ್ನಿಂಗ್ ಪ್ರಕ್ರಿಯೆ ನ್ಯಾಯನೀಡಿಕೆ ಪ್ರಕ್ರಿಯೆಯಲ್ಲಿ ‘ಕೇವಲ ಒಂದು ವಾಣಿಜ್ಯಿಕ ಚಟುವಟಿಕೆ’ ಎಂದು ಮುರಳೀಧರ್ ಮೇಘರಾಜ್ ಲೋಯಾ ವರ್ಸಸ್ ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಕಸಂಭಾಯಿ ವರ್ಸಸ್ ಗುಜರಾತ್ ರಾಜ್ಯ ಪ್ರಕರಣದಲ್ಲಿ ಈ ಬಗ್ಗೆ ಜಸ್ಟಿಸ್ ಪಿ.ಎನ್. ಭಗವತಿ ತುಂಬ ಕಟುವಾಗಿ ಟೀಕಿಸಿದ್ದರು. ಇದು ಸಾಂವಿಧಾನಿಕ ತತ್ತ್ವಗಳನ್ನು ಉಲ್ಲಂಘಿಸುತ್ತದೆ ಎಂದಿದ್ದರು. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ಈ ಪದ್ಧತಿಯನ್ನು ಒಪ್ಪಿರಲಿಲ್ಲ ಹಾಗೂ ಅದು ಅಸಾಂವಿಧಾನಿಕ ಎಂದು ಅಭಿಪ್ರಾಯಿಸಿತ್ತು. ಪ್ಲೀ ಬಾರ್ಗೆಯ್ನಿಂಗ್​ಗೆ ಸಮ್ಮತಿಸಲಾಗಿದೆ ಎಂದ ಮಾತ್ರಕ್ಕೆ ಕಾನೂನು ನಿಗದಿಪಡಿಸಿರುವ ಕನಿಷ್ಠ ಶಿಕ್ಷೆಯನ್ನು ಬೈಪಾಸ್ ಮಾಡಲಾಗದು ಎಂದು ಕೃಪಾಲ್ ಸಿಂಗ್ ವರ್ಸಸ್ ಹರಿಯಾಣ ರಾಜ್ಯ ಪ್ರಕರಣದಲ್ಲಿ ಸವೋನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಆದರೆ, ಭಾರತೀಯ ದಂಡಸಂಹಿತೆಗೆ (ಸಿಆರ್​ಪಿಸಿ) 2005ರಲ್ಲಿ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ಸಾಂವಿಧಾನಿಕ ಸಿಂಧುತ್ವದ ಚರ್ಚೆ ನಿಂತುಹೋಗಿ ಪ್ಲೀ ಬಾರ್ಗೆಯ್ನಿಂಗ್ ಕುರಿತ ನಿಲುವಿನಲ್ಲಿ ಬದಲಾವಣೆ ಬರತೊಡಗಿತು. ಗುಜರಾತ್ ರಾಜ್ಯ ವರ್ಸಸ್ ನಟವರ್ ಹರ್​ಚಾಂದ್​ಜೀ ಠಾಕೂರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೆಗೆದುಕೊಂಡ ನಿಲುವಿನಲ್ಲಿ ಇದು ಪ್ರತಿಬಿಂಬಿಸಿತು. ಪರಿಕಲ್ಪನಾತ್ಮಕ ದೋಷಗಳಿದ್ದರೂ ಒಂದು ಪರಿಕಲ್ಪನೆಯಾಗಿ ಪ್ಲೀ ಬಾರ್ಗೆಯ್ನಿಂಗ್ ಎಂಬುದು ನಮ್ಮ ದೇಶದಲ್ಲಿ ಕ್ರಿಮಿನಲ್ ನ್ಯಾಯ ವಿಚಾರದಲ್ಲಿ ಆಗಿರುವ ಬದಲಾದ ಸನ್ನಿವೇಶದಲ್ಲಿ ಒಂದು ಅಗತ್ಯವಾಗಿ ಪರಿಣಮಿಸಿದೆ ಎಂದು ಸುಪ್ರೀಂಕೋರ್ಟ್ ಆಗ ಪ್ರತಿಪಾದಿಸಿತು.

ಪ್ಲೀ ಬಾರ್ಗೆಯ್ನಿಂಗ್ ಅಳವಡಿಸುವ ಮೂಲಕ ಕ್ರಿಮಿನಲ್ ಕೋರ್ಟ್​ಗಳಿಗೆ ಸಣ್ಣಪುಟ್ಟ ಪ್ರಕರಣಗಳನ್ನು ನಿಭಾಯಿಸುವ ಹೊರೆ ಇಳಿಯಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅಮೆರಿಕದಂತೆ ಇಲ್ಲಿಯೂ ನೆರವಾಗಬಹುದು ಎಂಬ ಆಶಾಭಾವ ವ್ಯಕ್ತಗೊಂಡಿತು. ಕಾನೂನು ಆಯೋಗದ ವರದಿಗಳು ಹಾಗೂ ಜಸ್ಟಿಸ್ ಮಳೀಮಠ್ ಸಮಿತಿ ಈ ಸಂಬಂಧ ಶಿಫಾರಸು ಮಾಡಿದ್ದವು. ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ಮತ್ತು ದಂಡ ವಿಧಿಸಲಾಗುವಂಥ ಅಪರಾಧಗಳಿಗೆ ಇದನ್ನು ಅಳವಡಿಸಬೇಕೆಂದು ವರದಿ ಶಿಫಾರಸು ಮಾಡಿತ್ತು.

ಪದೇಪದೆ ಅಪರಾಧ ಎಸಗುವವರಿಗೆ, ಗಂಭೀರ ಸ್ವರೂಪದ ಸಾಮಾಜಿಕ-ಆರ್ಥಿಕ ಅಪರಾಧಗಳಲ್ಲಿ ಭಾಗವಹಿಸಿದ ಆರೋಪಿಗಳಿಗೆ ಮತ್ತು ಮಹಿಳೆಯರು ಹಾಗೂ ಮಕ್ಕಳ ವಿರುದ್ಧ ಅಪರಾಧ ಎಸಗುವವರಿಗೆ ಇದನ್ನು ಅನ್ವಯಿಸಬಾರದು ಎಂದೂ ಶಿಫಾರಸು ಸೂಚಿಸಿದೆ.

ಪ್ರಕ್ರಿಯೆ ಸ್ವರೂಪ: ಆರೋಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ಪ್ಲೀ ಬಾರ್ಗೆಯ್ನಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ. ಆರೋಪಿ ತನ್ನ ಸ್ವಯಿಚ್ಛೆಯಿಂದ ಇದನ್ನು ಸಲ್ಲಿಸುವುದನ್ನು ಖಾತರಿಪಡಿಸಿಕೊಳ್ಳಬೇಕು. ಅದಕ್ಕಾಗಿ ಅಫಿಡವಿಟ್ ಪಡೆಯಬೇಕು. ಇದೇ ಅಪರಾಧಕ್ಕಾಗಿ ಹಿಂದೆ ಶಿಕ್ಷೆಗೆ ಒಳಗಾಗಿದ್ದರೆ ಅಂಥವರಿಗೆ ಈ ಸೌಲಭ್ಯ ನೀಡಲಾಗುವುದಿಲ್ಲ. ಅರ್ಜಿಯನ್ನು ಸ್ವಇಚ್ಛೆಯಿಂದ ಸಲ್ಲಿಸಲಾಗಿದೆ ಎನ್ನುವ ಬಗ್ಗೆ ಕೋರ್ಟ್​ಗೆ ಸಮಾಧಾನವಾದ ನಂತರವಷ್ಟೆ ಉಭಯ ಪಕ್ಷಗಳ ಸಂಧಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ವಾದಿ, ಪ್ರತಿವಾದಿ, ಪೊಲೀಸ್ ಇತ್ಯಾದಿ ಸಂಬಂಧಿತ ಎಲ್ಲರ ಸಮ್ಮುಖದಲ್ಲಿ ಮಾತುಕತೆಯಾಗಿ ಎಲ್ಲ ಪ್ರಕ್ರಿಯೆ ಮುಗಿದ ನಂತರ ಒಂದು ವರದಿ ತಯಾರಿಸಬೇಕು. ಅದಕ್ಕೆ ಸಂಬಂಧಪಟ್ಟ ನ್ಯಾಯಾಧೀಶರು ಹಾಗೂ ಸಂಬಂಧಪಟ್ಟ ಎಲ್ಲ ಭಾಗಿದಾರರು ಸಹಿ ಹಾಕಬೇಕು. ಈ ಎಲ್ಲ ಪ್ರಕ್ರಿಯೆ ಮುಗಿದ ನಂತರ, ಸಂತ್ರಸ್ತ ವಾದಿಗೆ ನೀಡಲಾಗುವ ಪರಿಹಾರ ಮತ್ತು ಆರೋಪಿಗೆ ನೀಡಲಾಗುವ ಶಿಕ್ಷೆ ಪ್ರಮಾಣವನ್ನು ನಿರ್ಧರಿಸುವ ಹೊಣೆ ನ್ಯಾಯಾಧೀಶರದ್ದಾಗಿರುತ್ತದೆ.

ಕರ್ನಾಟಕದಲ್ಲಿ 201 ಪ್ರಕರಣ ಇತ್ಯರ್ಥ: ಕರ್ನಾಟಕದಲ್ಲಿ ಪ್ಲೀ ಬಾರ್ಗೆಯ್ನಿಂಗ್ ಪ್ರಕ್ರಿಯೆ ಮೂಲಕ 2010-2014ರ ಅವಧಿಯಲ್ಲಿ 201 ದಾವೆಗಳನ್ನು ಇತ್ಯರ್ಥಪಡಿಸಲಾಗಿದೆ. ಬಹುತೇಕ ಎಲ್ಲ ರಾಜ್ಯಗಳ ಪರಿಸ್ಥಿತಿ ಇದೇ ಆಗಿದೆ. ಹೀಗಾಗಿ, ಯಾವ ಉದ್ದೇಶದಿಂದ ಪ್ಲೀ ಬಾರ್ಗೆಯ್ನಿಂಗ್ ನಿಯಮವನ್ನು ಸಿಆರ್​ಪಿಸಿಗೆ ಅಳವಡಿಸಲಾಯಿತೋ ಆ ಉದ್ದೇಶ ಈಡೇರಿಲ್ಲ. ಅದೊಂದು ಮೃತ ನಿಯಮವಾಗಿ ಉಳಿದುಕೊಂಡಿದೆ.

ಅಪರಾಧ ನ್ಯಾಯ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಪ್ಲೀ ಬಾರ್ಗೆಯ್ನಿಂಗ್ ಅನಿವಾರ್ಯ ಪರಿಕಲ್ಪನೆಯಾಗಿದೆ. ಜೈಲುಗಳಲ್ಲಿ ಕೈದಿಗಳ ಅತಿಯಾದ ಸಂಖ್ಯೆ, ನ್ಯಾಯದಾನದಲ್ಲಿ ವಿಳಂಬ ಮತ್ತು ಕೋರ್ಟ್​ಗಳ ಮೇಲೆ ಬೀಳುವ ಅಧಿಕ ಹೊರೆ ಮೊದಲಾದ ಸಮಸ್ಯೆಗಳನ್ನು ಬಗೆಹರಿಸಲು ಇದರ ಅನುಷ್ಠಾನ ಅತ್ಯಗತ್ಯ. ಆದರೆ ಇದರ ಸಾಮಾಜಿಕ-ಕಾನೂನಾತ್ಮಕ ಪರಿಣಾಮಗಳ ಅಧ್ಯಯನ ಮಾಡದೆ ಅದನ್ನು ಅನುಸರಿಸುವುದರಿಂದ ಕೆಟ್ಟ ಪರಿಣಾಮ ಉಂಟಾಗುವ ಅಪಾಯವೂ ಇದೆ.

ಕೋರ್ಟ್​ಗಳ ಹೊಣೆ: ಪ್ಲೀ ಬಾರ್ಗೆಯ್ನಿಂಗ್ ಎಂಬ ವ್ಯವಸ್ಥೆಯಿದ್ದು ಅದರ ಅನುಕೂಲ ಪಡೆಯಬಹುದೆಂದು ಆರೋಪಿಗೆ ಮಾಹಿತಿ ನೀಡುವುದು ಕೋರ್ಟ್​ಗಳ ಕರ್ತವ್ಯವಾಗಿದೆ. ಕಾನೂನು ನೆರವು ವ್ಯವಸ್ಥೆ ಜೊತೆ ಪ್ಲೀ ಬಾರ್ಗೆಯ್ನಿಂಗ್ ಪದ್ಧತಿಯನ್ನು ಜೊತೆಗೂಡಿಸುವ ಹೆಚ್ಚುವರಿ ಹೊಣೆಗಾರಿಕೆಯನ್ನು ಕೋರ್ಟ್​ಗಳು ನಿರ್ವಹಿಸಬೇಕು. ನ್ಯಾಯವನ್ನು ವಾಣಿಜ್ಯೀಕರಣಗೊಳಿಸುವುದನ್ನು ಇದರಿಂದ ತಡೆಯಬಹುದಾಗಿದೆ.

ನಾನಾ ಸಾಮಾಜಿಕ ವರ್ಗಗಳಿಂದ ಬರುವ ಅಪರಾಧಿಗಳಿಗೆ ಇರುವ ವ್ಯತ್ಯಾಸಗಳನ್ನು ತೊಡೆದುಹಾಕಲೂ ಇದು ನೆರವಾಗುತ್ತದೆ. ಶೀಘ್ರ ನ್ಯಾಯದ ಮೂಲಭೂತ ಹಕ್ಕನ್ನು ಸಾಕಾರಗೊಳಿಸುವ ದೃಷ್ಟಿಯಿಂದ ಸಾಂಪ್ರದಾಯಿಕ ಮಾರ್ಗ ಬಿಟ್ಟು ಇಂಥ ಪರ್ಯಾಯ ವಿವಾದ ಇತ್ಯರ್ಥ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು ತೀರಾ ಅಗತ್ಯ.

ಸರಿಯಾದ ರೀತಿಯಲ್ಲಿ ಅನ್ವಯ ಮಾಡಿದರೆ, ಪ್ಲೀ ಬಾರ್ಗೆಯ್ನಿಂಗ್ ಪದ್ಧತಿ ಭಾರತೀಯ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಒಂದು ರಾಮಬಾಣವಾಗಿ ಪರಿಣಮಿಸಬಹುದಾಗಿದೆ. ಈ ಸಂಬಂಧ ಅಮೆರಿಕದ ಅನುಭವಗಳಿಂದ ಉತ್ತಮ ಪಾಠ ಕಂಡುಕೊಳ್ಳಬೇಕು. ಒಳ್ಳೆಯ ಅಂಶಗಳನ್ನು ಅನುಸರಿಸಲು ಅದನ್ನು ಮಾನ್ಯ ಮಾಡಬೇಕೇ ಹೊರತು ಅವುಗಳಲ್ಲಿರುವ ತಪು್ಪಗಳನ್ನು ಅನುಕರಣೆ ಮಾಡಬಾರದು. ಹೇಗೆ ಟೀಕೆಗಳು ಇದ್ದೇ ಇರುತ್ತವೋ ಹಾಗೆಯೇ ಅವುಗಳಿಗೆ ಪರಿಹಾರಗಳೂ ಇರುತ್ತವೆ.