ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ ದಕ್ಷಿಣ ಕನ್ನಡ ಘಟಕ ಹಾಗೂ ಸೇಂಟ್ ಆಗ್ನೆಸ್ ಕಾಲೇಜು ಗ್ರಂಥಾಲಯದ ಜಂಟಿ ಆಶ್ರಯದಲ್ಲಿ ಓದೋಣ ಬೆಳೆಯೋಣ: ಇಂದಿನ ಓದು ನಾಳಿನ ಯಶಸ್ಸು ಎಂಬ ಸಮುದಾಯ ಕೇಂದ್ರಿತ ನೂತನ ಯೋಜನೆಗೆ ಚಾಲನೆ ನೀಡಲಾಯಿತು.  
ನ್ಯೂಸ್

ಓದೋಣ ಬೆಳೆಯೋಣ ಯೋಜನೆಗೆ ಚಾಲನೆ!

ಮಂಗಳೂರು: ಕನ್ನಡ ಮಾಧ್ಯಮದ ಶಾಲಾ ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಿ, ಜೀವಮಾನದ ಕಲಿಕೆಗೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ ದಕ್ಷಿಣ ಕನ್ನಡ ಘಟಕ ಹಾಗೂ ಸೇಂಟ್ ಆಗ್ನೆಸ್ ಕಾಲೇಜು ಗ್ರಂಥಾಲಯದ ಜಂಟಿ ಆಶ್ರಯದಲ್ಲಿ ಓದೋಣ ಬೆಳೆಯೋಣ: ಇಂದಿನ ಓದು ನಾಳಿನ ಯಶಸ್ಸು ಎಂಬ ಸಮುದಾಯ ಕೇಂದ್ರಿತ ನೂತನ ಯೋಜನೆಗೆ ಚಾಲನೆ ನೀಡಲಾಯಿತು.
ಬೆಂದೂರಿನ ಸೇಂಟ್ ಆಗ್ನೆಸ್ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೇಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಡಾ. ಎಂ. ವೆನಿಸ್ಸಾ ಎ.ಸಿ., ಜ್ಞಾನವೇ ಶಕ್ತಿ. ಒಂದು ದೀಪದಿಂದ ನೂರಾರು ದೀಪಗಳನ್ನು ಹಚ್ಚಿದರೂ ಅದರ ಬೆಳಕು ಕ್ಷೀಣಿಸದಂತೆ, ಪುಸ್ತಕದಿಂದ ಪಡೆದ ಜ್ಞಾನವನ್ನು ಸಾವಿರಾರು ಜನರೊಂದಿಗೆ ಹಂಚಿಕೊಳ್ಳಬಹುದು. ಜ್ಞಾನದಿಂದ ಮಾತ್ರ ಅಜ್ಞಾನವನ್ನು ದೂರ ಮಾಡಲು ಸಾಧ್ಯ, ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕರಾಗಿ ತಿಳಿಸಿದರು. ಕೇವಲ ಒಂದು ತಿಂಗಳ ಅವಧಿಯಲ್ಲಿ ಇಂತಹ ದೃಷ್ಟಿಕೋನವುಳ್ಳ ಯೋಜನೆಯನ್ನು ರೂಪಿಸಿದ ಕಲಾ ದಕ್ಷಿಣ ಕನ್ನಡ ಘಟಕದ ಪ್ರಯತ್ನ ಶ್ಲಾಘನೀಯ ಎಂದರು.
ಉದ್ಘಾಟನೆಯ ಬಳಿಕ ಡಾ. ರಜತಾ ಪಿ. ಶೆಟ್ಟಿ ಹಾಗೂ ಡಾ. ಬಿ.ಕೆ. ವಿಶಾಲಾ ಅವರು ವಿದ್ಯಾರ್ಥಿಗಳಿಗಾಗಿ ಜೀವನದಲ್ಲಿ ಯಶಸ್ಸಿಗಾಗಿ ಓದುವ ಹವ್ಯಾಸ ಕುರಿತು ಸಂವಾದಾತ್ಮಕ ಅಧಿವೇಶನ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಮಕ್ಕಳ ಓದನ್ನು ಪ್ರೋತ್ಸಾಹಿಸಲು ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಪ್ರಭಾರ ಮುಖ್ಯ ಶಿಕ್ಷಕಿ ಫಿಲೋಮಿನಾ ಮೆನೆಜಸ್ ಸ್ವಾಗತಿಸಿದರು. ಡಾ. ಟ್ರೆಸ್ಸಿ ಮೆನೆಜಸ್ ಕಾರ್ಯಕ್ರಮ ನಿರೂಪಿಸಿದರು. ಕ್ರಿಸ್ಟಲ್ ನಿಶಾ ವಂದಿಸಿದರು.