ಮೈಸೂರು: ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ಶೈಕ್ಷಣಿಕ ಮಾರ್ಗದರ್ಶನ ನೀಡುವ ಸಲುವಾಗಿ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಎಜುಕೇಷನ್ ಎಕ್ಸ್‌ಪೋಗೆ ಶನಿವಾರ ಚಾಲನೆ ದೊರೆಯಿತು.
ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಎಸ್‌ಡಿಎಂ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು, ಎಸ್‌ಬಿಆರ್‌ಆರ್ ಮಹಾಜನ ಕಾಲೇಜಿನ ಡಾ.ಸತೀಶ್ ಜಿ.ಚೆಟ್ಟಿ, ದಿ ಗ್ರಾಜುಯೇಟ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸ.ನ.ಜಗದೀಶ್, ಮುಕ್ತ ವಿವಿ ಕುಲಪತಿ ವಿಶೇಷಾಧಿಕಾರಿ ಎಸ್.ಮಹದೇವು ಇತರರಿದ್ದರು.
ವಿಆರ್‌ಎಲ್ ಮೀಡಿಯಾ ಪ್ರೈ.ಲಿ.ನಿಂದ ವಿದ್ಯಾನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಮೂರನೇ ಶೈಕ್ಷಣಿಕ ಮೇಳ ಇದಾಗಿದ್ದು, ಒಂದೇ ಸೂರಿನಡಿ ಹಲವು ಶಿಕ್ಷಣ ಸಂಸ್ಥೆಗಳು ಭಾಗಿಯಾಗುವುದರಿಂದ ಪಾಲಕರು-ವಿದ್ಯಾರ್ಥಿಗಳು ತಮ್ಮ ಭವಿಷ್ಯದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಉತ್ತಮ ಅವಕಾಶವಾಗಿದೆ.
ಶೈಕ್ಷಣಿಕ ಮೇಳಕ್ಕೆ ಹಾಸನದ ರಾಜೀವ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಮುಖ್ಯ ಪ್ರಾಯೋಜಕತ್ವ ವಹಿಸಿದ್ದು, ಗೀತಂ ವಿಶ್ವವಿದ್ಯಾಲಯ, ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಸಹ ಪ್ರಾಯೋಜಕತ್ವ ನೀಡಿವೆ.
ವಿವಿಧ ತಾಂತ್ರಿಕ ವಿಶ್ವವಿದ್ಯಾಲಯಗಳು, ಸಂಗೀತ ವಿವಿ, ವೈದ್ಯಕೀಯ ವಿವಿಗಳು ಮತ್ತು ಕಾಲೇಜುಗಳು, ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಬಿಸಿನೆಸ್ ಮ್ಯಾನೇಜ್‌ಮೆಂಟ್, ಸ್ಪರ್ಧಾತ್ಮಕ ಕೋಚಿಂಗ್ ಸೆಂಟರ್‌ಗಳು ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು ಪಾಲ್ಗೊಂಡಿದ್ದು, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ದೊರೆಯುತ್ತಿದೆ.
ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮಳಿಗೆಗಳು ಇಲ್ಲಿದ್ದು, ವಿದ್ಯಾರ್ಥಿಗಳು ಯಾವ ಶಾಲೆಗೆ ಸೇರಬೇಕು? ಪದವಿ ಪೂರ್ವ, ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯಾವ ಕೋರ್ಸ್ ಮತ್ತು ಸೌಲಭ್ಯಗಳಿವೆ? ಪ್ರವೇಶ ಪ್ರಕ್ರಿಯೆ ಹೇಗೆ? ಎಂಬುದರ ಮಾಹಿತಿ ಸಿಗುತ್ತಿದೆ. ಮೈಸೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳು ಸೇರಿದಂತೆ ರಾಜ್ಯದ ಖ್ಯಾತ ಶಿಕ್ಷಣ ಸಂಸ್ಥೆಗಳು ಮೇಳದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿವೆ.
ಎಜುಕೇಷನ್ ಎಕ್ಸ್‌ಪೋಗೆ ಮೊದಲ ದಿನವಾದ ಶನಿವಾರ ಉತ್ತಮ ಸ್ಪಂದನೆ ದೊರೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಆಗಮಿಸಿ ವಿವಿಧ ಕೋರ್ಸ್‌ಗಳು ಹಾಗೂ ಕಾಲೇಜುಗಳ ಕುರಿತು ಮಾಹಿತಿ ಪಡೆದರು. ಎಕ್ಸ್‌ಪೋ ಭಾನುವಾರವೂ ನಡೆಯಲಿದ್ದು, ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಪ್ರವೇಶ ಉಚಿತವಾಗಿದೆ.