ಪವನ್ ಕಲ್ಯಾಣ್ ಜತೆ ಚಿರು 158 ಚಿತ್ರತಂಡ
- ಚಿರಂಜೀವಿ ನಟನೆಯ 158ನೇ ಚಿತ್ರಕ್ಕೆ ಶುಭ ಕೋರಿದ ಪವನ್ ಕಲ್ಯಾಣ್
- ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ನಿಂದ ಬಂಡವಾಳ ಹೂಡಿಕೆ
- ಚಿರು ಮಗಳಾಗಿ ಅಭಿನಯಿಸಲಿದ್ದಾರೆ ನಟಿ ಅನಸ್ವರ ರಾಜನ್
ಕನ್ನಡಿಗ ವೆಂಕಟ್ ಕೆ. ನಾರಾಯಣ್ ಒಡೆತನದ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಗಡಿ ದಾಟಿದೆ. ಈಗಾಗಲೇ ಕನ್ನಡದ ‘ಸಖತ್’, ‘ಬೈಟು ಲವ್’, ‘ಕೆಡಿ : ದ ಡೆವಿಲ್’ ಸಿನಿಮಾಗಳನ್ನು ನಿರ್ಮಿಸಿರುವ ಕೆವಿಎನ್ ಪ್ರೊಡಕ್ಷನ್ಸ್ ಈಗಾಗಲೇ ಪರಭಾಷೆ ಚಿತ್ರಗಳಿಗೆ ಹೂಡಿಕೆ ಮಾಡುತ್ತಿರುವುದು ಗೊತ್ತಿದೆ. ಕನ್ನಡದ ‘ಟಾಕ್ಸಿಕ್’ ಸೇರಿ ಮಲಯಾಳಂ ‘ಬಾಲನ್’, ಹಿಂದಿಯ ‘ಹೈವಾನ್’, ತಮಿಳಿನ ‘ಜನನಾಯಗನ್’ ಚಿತ್ರಗಳಿಗೆ ಹಣ ಹಾಕಿದ್ದು, ಈ ನಾಲ್ಕು ಚಿತ್ರಗಳು ಸದ್ಯ ಬಿಡುಗಡೆಗೆ ಸಿದ್ಧವಾಗಿವೆ. ಈ ಮಧ್ಯೆ ಕೆವಿಎನ್ ಸಂಸ್ಥೆ ಟಾಲಿವುಡ್‌ಗೆ ಎಂಟ್ರಿಯಾಗಿದೆ. ಕಳೆದ ಆಗಸ್ಟ್‌ನಲ್ಲೇ ಕೆವಿಎನ್, ಚಿರಂಜೀವಿ ಮತ್ತು ನಿರ್ದೇಶಕ ಬಾಬಿ ಕೊಲ್ಲಿ ಕಾಂಬಿನೇಷನ್‌ನಲ್ಲಿ ಸಿನಿಮಾ ಘೋಷಣೆಯಾಗಿತ್ತು. ಗುರುವಾರ (ಮೇ 21) ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ನೆರವೇರಿದೆ. ಆಂಧ್ರಪ್ರದೇಶದ ಡಿಸಿಎಂ, ನಟ ಪವನ್ ಕಲ್ಯಾಣ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ಇದು ಚಿರಂಜೀವಿ ನಟನೆಯ 158ನೇ ಚಿತ್ರವಾಗಿದ್ದು, ಸದ್ಯಕ್ಕೆ ‘ಚಿರು 158’ ಎಂಬ ತಾತ್ಕಾಲಿಕ ಟೈಟಲ್‌ನಲ್ಲಿ ಚಿತ್ರತಂಡ ಶೂಟಿಂಗ್ ಆರಂಭಿಸಲಿದೆ. ಬಹುಭಾಷಾ ತಾರೆ ಅನಸ್ವರಾ ರಾಜನ್ ‘ಚಾಂಪಿಯನ್’ ಬಳಿಕ ಮತ್ತೆ ತೆಲುಗಿಗೆ ಮರಳಿದ್ದು, ಈ ಚಿತ್ರದಲ್ಲಿ ಚಿರು ಪುತ್ರಿಯಾಗಿ ನಟಿಸಲಿದ್ದಾರೆ. ಥಮನ್ ಸಂಗೀತ, ವಿಜಯ್ ಕಣ್ಣನ್ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಉಳಿದ ತಾರಾಗಣದ ಬಗ್ಗೆ ಚಿತ್ರತಂಡ ಮಾಹಿತಿ ನೀಡಬೇಕಷ್ಟೇ. -ಏಜೆನ್ಸೀಸ್
70ರಲ್ಲೂ 20ರ ಉತ್ಸಾಹಿ
‘ಚಿರು 158’ ಚಿತ್ರದ ಟೈಟಲ್ ಪೋಸ್ಟರ್ ನೋಡಿದರೆ, ಇದೊಂದು ಹೈ-ಆ್ಯಕ್ಷನ್ ಸಿನಿಮಾ ಎಂದು ತಿಳಿದುಬರುತ್ತದೆ. ಅದಕ್ಕಾಗಿ ಚಿರಂಜೀವಿ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಜಾಲತಾಣದಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುವ ವಿಡಿಯೋ ಹಂಚಿಕೊಂಡು, ‘ಮಿತಿಗಳನ್ನು ಮೀರಲು ಪ್ರತಿದಿನವೂ ನಮಗೆ ಅವಕಾಶವಿರುತ್ತದೆ’ ಎಂದು ಬರೆದುಕೊಂಡಿದ್ದಾರೆ. 70ರ ವಯಸ್ಸಿನಲ್ಲೂ 20ರ ಉತ್ಸಾಹಿಯಂತೆ ಚಿರಂಜೀವಿ ಪಾತ್ರಕ್ಕಾಗಿ ಜಿಮ್‌ನಲ್ಲಿ ಬೆವರು ಹರಿಸಿ, ತಯಾರಿ ನಡೆಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
4 ಸಿನಿಮಾ 1600 ಕೋಟಿ ರೂ.!
ಕನ್ನಡದ ‘ಕೆಡಿ: ದ ಡೆವಿಲ್’ ಬೆನ್ನಲ್ಲೇ ಕೆವಿಎನ್ ನಿರ್ಮಾಣದ ಪ್ಯಾನ್ ವರ್ಲ್ಡ್ ‘ಟಾಕ್ಸಿಕ್’, ‘ಜನನಾಯಗನ್’ ಸೇರಿ ‘ಬಾಲನ್’, ‘ಹೈವಾನ್’ ತೆರೆಗೆ ಬರಲು ಸಿದ್ಧವಾಗಿವೆ. ಅಂದುಕೊಂಡಂತಾಗಿದ್ದರೆ, ಇಷ್ಟೊತ್ತಿಗೆ ‘ಟಾಕ್ಸಿಕ್’, ‘ಜನನಾಯಗನ್’ ಬಿಡುಗಡೆಯಾಗಬೇಕಿತ್ತು. ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದಾಗಿ ‘ಟಾಕ್ಸಿಕ್’ ಮುಂದೆ ಹೋದರೆ, ಸೆನ್ಸಾರ್ ಸಮಸ್ಯೆಯಿಂದಾಗಿ ‘ಜನನಾಯಗನ್’ ಬಿಡುಗಡೆ ಅನಿಶ್ಚತತೆ ಎದುರಿಸಿತ್ತು. ಕೆಲವೇ ದಿನಗಳಲ್ಲಿ ಈ ಎರಡೂ ಚಿತ್ರಗಳ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಲಿದೆ. ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಚಿತ್ರದ ಪ್ಯಾನ್ ವರ್ಲ್ಡ್ ಬಿಡುಗಡೆಗೆ ವಿದೇಶಗಳ ವಿತರಕರು ಮತ್ತು ನಿರ್ಮಾಪಕರ ಜತೆ ಚರ್ಚೆ ನಡೆಯುತ್ತಿದ್ದು, ರಿಲೀಸ್ ಖರ್ಚು ಸೇರಿ ಚಿತ್ರದ ಬಜೆಟ್ 600 ಕೋಟಿಯಿಂದ 800 ಕೋಟಿ ರೂ. ಮುಟ್ಟುವ ಸಾಧ್ಯತೆಯಿದೆ ಎನ್ನಲಾಗಿದೆ. ಮತ್ತೊಂದೆಡೆ ‘ಜನನಾಯಗನ್’ ಬಜೆಟ್ 400 ಕೋಟಿ ರೂ. ಮುಟ್ಟಿದ್ದು, ಅಕ್ಷಯ ಕುಮಾರ್ ನಾಯಕನಾಗಿರುವ ಹಿಂದಿ ಸಿನಿಮಾ ‘ಹೈವಾನ್’ ಖರ್ಚು 150 ಕೋಟಿ ದಾಟಿದೆ ಎನ್ನಲಾಗಿದೆ. ಅದರ ಬೆನ್ನಲ್ಲೇ ‘ಚಿರು158’ ಸೆಟ್ಟೇರಿದ್ದು, ಅದರ ಬಜೆಟ್ ಕೂಡ 250 ಕೋಟಿ ರೂ. ಇರಲಿದೆಯಂತೆ. ಹೀಗೆ ನಾಲ್ಕು ಸಿನಿಮಾಗಳಿಂದ ಕೆವಿಎನ್ ಪ್ರೊಡಕ್ಷನ್ಸ್ ಅಂದಾಜು 1600 ಕೋಟಿ ರೂ. ಬಂಡವಾಳ ಹಾಕಿದೆ ಎನ್ನಲಾಗಿದೆ.