ಪಟಿಯಾಲ: ರಾತ್ರಿಯ ಊಟ ಮುಗಿಸಿ ಪತ್ನಿ ಹಾಗೂ ತಂದೆಯ ಜತೆ ತಡರಾತ್ರಿ 12.15ರಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಯುವಕನೊಬ್ಬ ಹೆಣವಾಗಿದ್ದಾನೆ.
ಪಟಿಯಾಲದ ಫ್ಯಾಕ್ಟರಿ ಏರಿಯಾದ ನಿವಾಸಿ ಬಿಹಾರದ 21 ವರ್ಷದ ಯುವಕ ಮೃತ. ಪಟಿಯಾಲದ ಜಗ್ಮೋಹನ್ ಸಿಂಗ್ ಮತ್ತು ಹರಿಯಾಣದ ಕುರುಕ್ಷೇತ್ರ ಮೂಲದ ಭೂಪೀಂದರ್ ಸಿಂಗ್ ಕೊಲೆಗಾರರು.
ರಾತ್ರಿ ಊಟವಾದ ನಂತರದಲ್ಲಿ ಬಿಹಾರದ ಯುವಕ ತನ್ನ ಪತ್ನಿ ಹಾಗೂ ಅಪ್ಪನೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದ. ಬುಧವಾರ ರಾತ್ರಿ ಇವರಿಗೆ ಎದುರಾದ ಜಗ್ಮೋಹನ್ ಸಿಂಗ್ ಮತ್ತು ಭೂಪೀಂದರ್ ಸಿಂಗ್, ಇಷ್ಟು ರಾತ್ರಿಯಲ್ಲಿ ಒಬ್ಬಂಟಿ ಮಹಿಳೆಯೊಂದಿಗೆ ತಿರುಗಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ, ಯುವಕನ ಬರ್ಬರ ಕೊಲೆ
ಇದಕ್ಕೆ ಆಕೆ ತನ್ನ ಪತ್ನಿ ಎಂದು ಬಿಹಾರದ ಯುವಕ ಉತ್ತರಿಸಿದ್ದ. ಆದರೆ, ಇದರಿಂದ ಕುಪಿತರಾದ ಜಗ್ಮೋಹನ್ ಮತ್ತು ಭೂಪೀಂದರ್ ತಮ್ಮ ಕೈಯಲ್ಲಿದ್ದ ಬಾಟಲಿ, ಸ್ಥಳದಲ್ಲಿದ್ದ ಇಟ್ಟಿಗೆ ಮತ್ತು ಕಲ್ಲುಗಳಿಂದ ಯುವಕನ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಕೊನೆಯುಸಿರು ಎಳೆದಿರುವುದಾಗಿ ವೈದ್ಯರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಪಟಿಯಾಲ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಹಲ್ಲೆ ಮಾಡಿದ ಯುವಕರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.