ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಸಾಕಷ್ಟು ಅಗತ್ಯ ಕೆಲಸಗಳು ಇಂದು ಕುಳಿತಲ್ಲಿಯೇ ನಡೆಯುತ್ತಿವೆ. ಸ್ಮಾರ್ಟ್ ಫೋನ್ನಿಂದ ಜೀವನ ಸುಲಭ ಆಗಿಬಿಟ್ಟಿದೆ. ಆದರೆ, ಅದೇ ಸ್ಮಾರ್ಟ್ ಫೋನ್ನ ಇನ್ನೊಂದು ಮುಖವಿದೆ. ಮೊಬೈಲ್ ಬಂದಾಗಿನಿಂದ ಅಪರಾಧ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆಯೊಂದು ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಒಮ್ಮೆ ಮಹಿಳೆಯೊಬ್ಬರು ತನ್ನ ಬ್ಯಾಂಕ್ ಸ್ಟೇಟ್ಮೆಂಟ್ ನೋಡಿ ಶಾಕ್ ಆಗುತ್ತಾಳೆ. ಕಾರಣ ಆಕೆಗೆ ಗೊತ್ತಿಲದೆಯೇ ಅವರ ಖಾತೆಯಿಂದ ಬರೋಬ್ಬರಿ 4 ಲಕ್ಷ ರೂ. ಹಣ ತೆಗೆದುಕೊಳ್ಳಲಾಗಿರುತ್ತದೆ. ಆಘಾತಕ್ಕೆ ಒಳಗಾಗುವ ಆಕೆ ನಡು ರಾತ್ರಿಯಲ್ಲೇ ಪೊಲೀಸ್ ಠಾಣೆಗೆ ದೌಡಾಯಿಸುತ್ತಾಳೆ. ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರಿಗೆ ವಿಚಾರಣೆ ವೇಳೆ ಅಸಲಿ ವಿಚಾರ ತಿಳಿದು ಶಾಕ್ ಆಗುತ್ತಾರೆ.
ಹಣ ಕಳೆದುಕೊಂಡ ಮಹಿಳೆ ಹೈದರಾಬಾದ್ನ ಹಿಮಾಯತ್ನಗರ ನಿವಾಸಿ. ಕೆಲವು ದಿನಗಳ ಹಿಂದೆ ಆನ್ಲೈನ್ ಪಾವತಿ ಮಾಡುವಾಗ ತನ್ನ ಬ್ಯಾಂಕ್ ಸ್ಟೇಟ್ಮೆಂಟ್ ಶಾಕ್ ಆಗಿದ್ದರು. 4 ಲಕ್ಷ ಖಾತೆಯಿಂದ ನಾಪತ್ತೆಯಾಗಿತ್ತು. ಸೈಬರ್ ಕ್ರೈಂಗೆ ದೂರು ನೀಡದ ಬಳಿಕ ತನಿಖೆ ಆರಂಭಿಸಿದ ಪೊಲೀಸರಿಗೆ ಇದು ಹೊರಗಿನವರ ಕೆಲಸವಲ್ಲ, ಮನೆಯಲ್ಲಿರುವವರೇ ಯಾರೋ ಈ ಕೃತ್ಯ ಎಸಗಿದ್ದಾರೆಂಬುದು ತಿಳಿಯುತ್ತದೆ.
ಎಲ್ಲರನ್ನೂ ವಿಚಾರಣೆ ಮಾಡಿಕೊಂಡು ಬರುವಾಗ ಮಹಿಳೆಯ ಮಗನನ್ನು ಸಹ ವಿಚಾರಣೆ ನಡೆಸುತ್ತಾರೆ. ಈ ವೇಳೆ ಆತ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. 10ನೇ ತರಗತಿ ವಿದ್ಯಾರ್ಥಿಯಾಗಿರುವ ಮಹಿಳೆಯ ಮಗನಿಗೆ ಆನ್ಲೈನ್ ಗೇಮ್ಗಳ ಮೇಲೆ ತುಂಬಾ ಹುಚ್ಚು. ತಾಯಿ ಮಲಗಿದಾಗ ಆಕೆಯ ಮೊಬೈಲ್ ತೆಗೆದುಕೊಳ್ಳುತ್ತಿದ್ದ ಮಗ ರಾತ್ರಿಯಿಡಿ ಮೊಬೈಲ್ ಗೇಮ್ ಆಡುತ್ತಿದ್ದ.
ಈ ಮಧ್ಯೆ ಗೇಮ್ನಲ್ಲಿ ಬರುವ ಹೊಸ ಫೀಚರ್ ಸಲುವಾಗಿಯೇ ಹಣವನ್ನು ತಾಯಿಯ ಖಾತೆಯಿಂದ ಮಗ ಪಾವತಿಸುತ್ತಿದ್ದ. ನಂತರ ಮೊಬೈಲ್ಗೆ ಬಂದ ಒಟಿಪಿ ನಂಬರ್ ಅನ್ನು ಡಿಲೀಟ್ ಮಾಡುತ್ತಿದ್ದ. ಇದು ಹೀಗೆ ಅನೇಕ ದಿನಗಳವರೆಗೆ ಮುಂದುವರಿದಿದೆ. ಹೀಗಿರುವಾಗ ಒಮ್ಮೆ ಬ್ಯಾಂಕ್ ಸ್ಟೇಟ್ಮೆಂಟ್ನಿಂದ ಹಣ ಕಡಿತಗೊಂಡಿರುವುದು ಆಕೆಗೆ ತಿಳಿಯುತ್ತದೆ. ವಿಚಾರಣೆ ಬಳಿಕ ಮಗನದ್ದೇ ಈ ಕೃತ್ಯ ಎಂದು ತಿಳಿದ ಬಳಿಕ ಆಕೆಗೆ ಶಾಕ್ ಆಗುತ್ತದೆ. ಹೀಗಾಗಿ ಮಕ್ಕಳ ಮೊಬೈಲ್ ಬಳಸುತ್ತಿದ್ದರೆ ಒಮ್ಮೆ ಅವರ ಮೇಲೆ ಕಣ್ಣಿಟ್ಟರೆ ಇಂತಹ ಅಚಾತುರ್ಯದಿಂದ ತಪ್ಪಿಸಿಕೊಳ್ಳಬಹುದು. (ಏಜೆನ್ಸೀಸ್)