ಬೆಂಗಳೂರು:
ಕಾವೇರಿನ ಕಣಿವೆಯ ನಾಲ್ಕು ಜಲಾಶಯಗಳಲ್ಲಿರುವ ನೀರು ನಮ್ಮ ರಾಜ್ಯಕ್ಕೆ ಕೊರತೆ ಇದೆ. ನೀರಾವರಿ ಮತ್ತು ಕುಡಿಯುವ ನೀರಿಗೂ ಸಾಕಾಗುವುದಿಲ್ಲ. ಹೆಚ್ಚುವರಿ ನೀರು ಬಂದರೆ ಮಾತ್ರ ತಮಿಳುನಾಡಿಗೆ ನೀರು ಹರಿಸಲು ಸಾಧ್ಯ. ಇಲ್ಲದೆ ಇದ್ದರೆ ಇಡೀ ವರ್ಷ ಸಂಕಷ್ಟದಲ್ಲಿ ಸಿಲುಕಬೇಕಾಗಬಹುದು ಎನ್ನುವುದು ರಾಜ್ಯದ ಆತಂಕ.
ಕಳೆದ ವರ್ಷ ಭರ್ಜರಿ ಮಳೆಯಾದ ಹಿನ್ನೆಲೆಯಲ್ಲಿ ರಾಜ್ಯದಿಂದ ತಮಿಳುನಾಡಿಗೆ 660 ಟಿಎಂಸಿ ನೀರು ಹರಿದು ಹೋಗಿತ್ತು. ಕಳೆದ ಐದು ವರ್ಷಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ನಿಗಧಿಗಿಂತ ಹೆಚ್ಚಿನ ನೀರು ಹರಿದು ಹೋಗಿದೆ. ಹಾಗಾಗಿ ಕಾವೇರಿ ನೀರಿನ ಸಮಸ್ಯೆ ಎದುರಾಗಲಿಲ್ಲ.
ಈ ಬಾರಿ ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಕಾರಣ, ಈತನಕ ಕೇವಲ 18 ಟಿಎಂಸಿ ನೀರು ಮಾತ್ರವೇ ಹರಿಸಲು ಸಾಧ್ಯವಾಗಿದೆ. ಆಗಸ್ಟ್ ತಿಂಗಳು ಸೇರಿದಂತೆ 80 ಟಿಎಂಸಿಗೂ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗಬೇಕಾಗಿತ್ತು. ಜೂನ್ ಮತ್ತು ಜುಲೈ ತಿಂಗಳ ಕೋಟಾ ನೀರನ್ನು ಕೂಡಲೆ ಹರಿಸುವಂತೆ ತಮಿಳುನಾಡು ತಾಕೀತು ಮಾಡಿ ಸುಪ್ರೀಂ ಮೆಟ್ಟಿಲೇರಿದೆ.
ಕೆಆರ್‌ಎಸ್‌ನಲ್ಲಿ ಶೇ.68 ನೀರಿನ ಸಂಗ್ರಹವಿದೆ. ಚಿಕ್ಕ ಜಲಾಶಗಳಾಗಿರುವ ಹಾರಂಗಿ ಮತ್ತು ಕಬಿನಿ ತುಂಬಿದ್ದರೂ, ಅಲ್ಲಿಂದ ಹೆಚ್ಚಿನ ನೀರನ್ನು ತಮಿಳುನಾಡಿಗೆ ಹರಿಸಲು ಸದ್ಯಕ್ಕೆ ಸಾಧ್ಯವಿಲ್ಲ. ಇನ್ನು ಹೇಮಾವತಿ ಜಲಾಶಯದಲ್ಲಿ ಶೇ.84 ಮಾತ್ರ ನೀರಿನ ಸಂಗ್ರಹವಿದೆ. ಕುಟಿಯುವ ನೀರು ಮತ್ತು ಕೃಷಿ ಸೇರಿದಂತೆ ರಾಜ್ಯದ ಬಳಕೆಗೆ 157 ಟಿಎಂಸಿ ನೀರು ಬೇಕು. ಆದ್ದರಿಂದ ಈ ಬಾರಿ ರಾಜ್ಯದ ಬಳಕೆಗೆ ನೀರು ಕೊರತೆಯಾಗಲಿದೆ ಎನ್ನುವುದು ಜಲಸಂಪನ್ಮೂಲ ಇಲಾಖೆ ವಿವರಣೆ.