ನ್ಯೂಸ್

ಉಕ್ರೇನ್ ಮೇಲೆ ರಷ್ಯಾದಿಂದ ಅತಿದೊಡ್ಡ ವಾಯುದಾಳಿ;13 ಮಂದಿ ಬಲಿ| biggest-air-attack

ಕೈವ್‌ ನಗರದ ಮೇಲೆ ರಷ್ಯಾ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಕೈವ್: ರಷ್ಯಾ ಪಡೆಗಳು ರಾಜಧಾನಿ ಕೈವ್ ಸೇರಿದಂತೆ ಉಕ್ರೇನಿಯನ್ ನಗರಗಳ ಮೇಲೆ ರಾತ್ರೋರಾತ್ರಿ 367 ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿ ನಡೆಸಿದ್ದು, ಇದುವರೆಗಿನ ಯುದ್ಧದ ಅತಿದೊಡ್ಡ ವೈಮಾನಿಕ ದಾಳಿ ಇದಾಗಿದೆ ಎಂದು ತಿಳಿದು ಬಂದಿದೆ.

ರಷ್ಯಾದ ದಾಳಿಗೆ ಜೈಟೊಮಿರ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ. ಕೈವ್, ಖಾರ್ಕಿವ್, ಮೈಕೊಲೈವ್, ಟೆರ್ನೋಪಿಲ್ ಮತ್ತು ಖ್ಮೆಲ್ನಿಟ್ಸ್ಕಿಯ ಮೇಲೆ ನಡೆದ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಉಕ್ರೇನ್‌ನ ವಾಯುಪಡೆಯು 266 ಡ್ರೋನ್‌ಗಳು ಮತ್ತು 45 ಕ್ಷಿಪಣಿಗಳನ್ನು ಹೊಡೆದುರುಳಿಸಿತು, ಆದರೆ ಅಪಾರ್ಟ್‌ಮೆಂಟ್ ಗಳು ಮತ್ತು ಮೂಲಸೌಕರ್ಯಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.

ಯುದ್ಧ ಕೈದಿಗಳ ವಿನಿಮಯ ರಷ್ಯಾ ಮತ್ತು ಉಕ್ರೇನ್‌ ನಡುವೆ ಶಾಂತಿ ಸ್ಥಾಪನೆಗೆ ಇಟ್ಟ ಮೊದಲ ಹೆಜ್ಜೆ ಎಂದು ಬಣ್ಣಿಸಲಾಗಿತ್ತು. ಆದರೆ ವಿನಿಮಯ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೇ ಕೈವ್‌ ನಗರದ ಮೇಲೆ ರಷ್ಯಾ ವೈಮಾನಿಕ ದಾಳಿ ಮಾಡಿರುವುದನ್ನು, ಶಾಂತಿ ಸ್ಥಾಪನೆಯ ಪ್ರಯತ್ನಕ್ಕೆ ಬಲವಾದ ಹೊಡೆತ ಎಂದು ವಿಶ್ಲೇಷಿಸಲಾಗಿದೆ.

(ಏಜೆನ್ಸೀಸ್)

ಇನ್ನೂ ರಷ್ಯಾ ಕೈವ್‌ ನಗರವನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿರುವುದನ್ನು, ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದಾರೆ. ಮಾಸ್ಕೋ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರಬೇಕು ಎಂದು ಜಾಗತಿಕ ವೇದಿಕೆಗೆ ಮನವಿ ಮಾಡಿರುವ ಅವರು, ರಷ್ಯಾಗೆ ಯುದ್ಧವನ್ನು ಅಂತ್ಯಗೊಳಿಸುವ ಇಚ್ಛಾಶಕ್ತಿ ಇಲ್ಲ ಎಂದು ಗುಡುಗಿದ್ದಾರೆ.