ನ್ಯೂಸ್

ಗೌರಿಕುಂಡ್ ಬಳಿ ಭೂಕುಸಿತ: 3 ಸಾವು, 17 ಮಂದಿ ನಾಪತ್ತೆ, ಶೋಧ ಕಾರ್ಯ ಪುನರಾರಂಭ

ರುದ್ರಪ್ರಯಾಗ: ಗೌರಿಕುಂಡ್ ಬಳಿ ಪ್ರವಾಹದಿಂದ ಉಂಟಾಗಿರುವ ಭೂಕುಸಿತದ ನಂತರ ನಾಪತ್ತೆಯಾದವರ ಪತ್ತೆ ಕಾರ್ಯವು ಶನಿವಾರ ಬೆಳಿಗ್ಗೆ ಪುನರಾರಂಭವಾಗಿದೆ.

ಇದುವರೆಗೆ ಮೂರು ಮೃತದೇಹಗಳು ಪತ್ತೆಯಾಗಿದ್ದು, 17 ಮಂದಿ ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವಾರ್ ತಿಳಿಸಿದ್ದಾರೆ. ಆದರೆ, ನಾಲ್ಕು ಮೃತದೇಹಗಳು ಪತ್ತೆಯಾಗಿವೆ ಎಂದು ಜಿಲ್ಲಾಡಳಿತ ಶುಕ್ರವಾರ ತಿಳಿಸಿತ್ತು. ರಾಜ್ವಾರ್ ಪ್ರಕಾರ, ಸ್ಥಳೀಯ ಆಡಳಿತದ ತಂಡದೊಂದಿಗೆ ಸುಮಾರು 100 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಡ್ರೋನ್‌ಗಳನ್ನು ಸಹ ಬಳಸಲಾಗುತ್ತಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಗುರುವಾರ ಮತ್ತು ಶುಕ್ರವಾರ ಮಧ್ಯರಾತ್ರಿ ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಗೌರಿಕುಂಡ್ ಬಳಿಯ ದಾಟ್ ಪುಲಿಯ ಎಂಬಲ್ಲಿ ಮಳೆಯಾಶ್ರಿತ ಜಲಪಾತದಲ್ಲಿ ಪ್ರವಾಹದ ನಂತರ ಮೂರು ಅಂಗಡಿಗಳು ಭೂಕುಸಿತದಲ್ಲಿ ಕೊಚ್ಚಿಹೋಗಿವೆ, 20 ಜನರು ನಾಪತ್ತೆಯಾಗಿದ್ದಾರೆ. ಅಂಗಡಿಗಳಿರುವ ಸ್ಥಳದಿಂದ ಸುಮಾರು 50 ಮೀಟರ್ ಕೆಳಗೆ ಮಂದಾಕಿನಿ ನದಿ ಹರಿಯುತ್ತದೆ.

ಜನರು ಎಚ್ಚರಿಕೆಯಿಂದ ಇರುವಂತೆ ಮನವಿ
ಗೌರಿಕುಂಡ್ ಬಳಿ ಭೂಕುಸಿತ ಘಟನೆಯ ನಂತರ ಗಡಿ ಜಿಲ್ಲೆ ಉತ್ತರಕಾಶಿಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ಎಲ್ಲಾ ಜನರು ಜಾಗರೂಕರಾಗಿರಲು ಮನವಿ ಮಾಡಿದ್ದಾರೆ. ಮಳೆಯ ಸಮಯದಲ್ಲಿ ಓಡಾಡದಂತೆ ಉತ್ತರಕಾಶಿ ಜಿಲ್ಲಾ ಪೊಲೀಸರು ಕೂಡ ಸಲಹೆ ಸೂಚನೆ ನೀಡಿದ್ದಾರೆ.