ನ್ಯೂಸ್

ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪರ್​ಜಾಯ್: 125 ಕಿಮೀ ವೇಗದಲ್ಲಿ ಬೀಸಿದ ಮಾರುತ

ನವದೆಹಲಿ: ಬಿಪರ್​ಜಾಯ್ ಚಂಡಮಾರುತ ಗುರುವಾರ ರಾತ್ರಿ ಗುಜರಾತ್​ನ ಸೌರಾಷ್ಟ್ರ ಮತ್ತು ಕಛ್ ಕರಾವಳಿಗೆ ಅಪ್ಪಳಿಸಿದೆ. 125 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ಅನಾಹುತಗಳು ಸಂಭವಿಸಿವೆ.

ಚಂಡಮಾರುತ ಅಪ್ಪಳಿಸುವಿಕೆ ಪ್ರಕ್ರಿಯೆ ಸಂಜೆಯಿಂದ ಪ್ರಾರಂಭವಾಗಿ, ಮಧ್ಯರಾತ್ರಿಯವರೆಗೆ ಮುಂದುವರಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಶುಕ್ರವಾರವೂ ಗಾಳಿಯ ವೇಗ ಹೆಚ್ಚಾಗಿರುತ್ತದೆ. ಕಛ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್ಗರ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ, ಮಳೆ ಆಗುತ್ತಿದೆ. ತಗ್ಗು ಪ್ರದೇಶಗಳು ಮುಳುಗಡೆ ಆಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಸಮುದ್ರದಲ್ಲಿ 2-3 ಮೀಟರ್ ಎತ್ತರದ ಅಲೆ ಏಳಲಿದೆ ಎಂದು ಅಂದಾಜಿಸಲಾಗಿದೆ. ಜನರು ಸಮುದ್ರದ ಬಳಿ ಹೋಗುವುದನ್ನು ನಿರ್ಬಂಧಿಸಲಾಗಿದೆ. ಎಲ್ಲಾ ಬೀಚ್​ಗಳಲ್ಲಿ ಜೀವರಕ್ಷಕರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್​ನ ಎಂಟು ಕರಾವಳಿ ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ಜನರನ್ನು ತಾತ್ಕಾಲಿಕ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಛ್ ಜಿಲ್ಲೆಯಲ್ಲಿ 46,800 ಜನರನ್ನು ಸ್ಥಳಾಂತರಿಸಲಾಗಿದೆ. ದೇವಭೂಮಿ ದ್ವಾರಕಾದಲ್ಲಿ 10,749, ಜಾಮ್ಗರದಲ್ಲಿ 9,942, ಮೋರ್ಬಿಯಲ್ಲಿ 9,243, ರಾಜ್​ಕೋಟ್​ನಲ್ಲಿ 6,822, ಮತ್ತು ಜುನಾದಲ್ಲಿ 4,869 ಜನರನ್ನು ಸ್ಥಳಾಂತರ ಮಾಡಲಾಗಿದೆ. ಸ್ಥಳಾಂತರಿಸಲ್ಪಟ್ಟವರಲ್ಲಿ 8,900 ಮಕ್ಕಳು, 1,131 ಗರ್ಭಿಣಿಯರು, 4,697 ವೃದ್ಧರು ಸೇರಿದ್ದಾರೆ. ಈ ಎಂಟು ಜಿಲ್ಲೆಗಳಲ್ಲಿ ಒಟ್ಟು 1,521 ತಾತ್ಕಾಲಿಕ ಆಶ್ರಯ ಮನೆಗಳನ್ನು ಸ್ಥಾಪಿಸಲಾಗಿದೆ. ವೈದ್ಯಕೀಯ ತಂಡಗಳು ನಿಯಮಿತವಾಗಿ ಭೇಟಿ ನೀಡುತ್ತಿವೆ.

ರಕ್ಷಣಾ ಪಡೆ ಕಾರ್ಯಾಚರಣೆಗೆ ಸಜ್ಜು

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 15 ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆಯ 12 ತಂಡಗಳು, ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗಡಿ ಭದ್ರತಾ ಪಡೆಯ (ಬಿಎಸ್​ಎಫ್) ಸಿಬ್ಬಂದಿ ನಿಯೋಜಿಸಲಾಗಿದೆ. ಭುಜ್, ಜಾಮ್ಗರ, ಗಾಂಧಿಧಾಮ್ಲ್ಲಿ ಸೇನೆಯು 27 ತುಕುಡಿಗಳನ್ನು ನಿಯೋಜಿಸಿದೆ. ವಾಯುಪಡೆಯು ವಡೋದರಾ, ಅಹಮದಾಬಾದ್ ಮತ್ತು ದೆಹಲಿಯಲ್ಲಿ ಹೆಲಿಕಾಪ್ಟರ್​ಗಳನ್ನು ಕಾಯ್ದಿರಿಸಿದೆ. ನೌಕಾಪಡೆಯು 10 ಸ್ಥಾನಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಗುಜರಾತ್​ನ ಎಂಟು ಕೋಸ್ಟ್ ಗಾರ್ಟ್ ಸ್ಟೇಷನ್​ಗಳು, 15 ಹಡಗುಗಳು ಮತ್ತು ಏಳು ವಿಮಾನಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸನ್ನದ್ಧ ಸ್ಥಿತಿಯಲ್ಲಿವೆ. 23 ವಿಪತ್ತು ಪರಿಹಾರ ತಂಡಗಳು ಸಹ ಇವೆ.

ಪಾಕ್​ನಲ್ಲೂ ಜನರ ಸ್ಥಳಾಂತರ

ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದ 67,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಪಾಕ್ ಕರಾವಳಿ ಪ್ರದೇಶದ ಜನರಿಗೆ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ. 39 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಭಾರಿ ಮಳೆಯಿಂದ ಹಲವಾರು ನಗರಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಚಂಡಮಾರುತವು ಸಿಂಧ್​ನ ಥಟ್ಟಾ ಜಿಲ್ಲೆಯ ಕೇತಿ ಬಂದರಿಗೆ ಅಪ್ಪಳಿಸಲಿದೆ. ಮಾರುತಗಳು ಗಂಟೆಗೆ ಗರಿಷ್ಠ 150-160 ಕಿಮೀ ವೇಗದಲ್ಲಿ ಬೀಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲು ಸಂಚಾರ ತಾತ್ಕಾಲಿಕ ರದ್ದು

ಗುಜರಾತ್ ಪ್ರದೇಶಕ್ಕೆ ಸೇವೆ ಸಲ್ಲಿಸುವ ಪಶ್ಚಿಮ ರೈಲ್ವೆ ಬುಧವಾರ ಪ್ರಯಾಣಿಕರ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ 76 ರೈಲುಗಳು, 36 ಸೇವೆಗಳನ್ನು ಅಲ್ಪಾವಧಿಗೆ ರದ್ದುಗೊಳಿಸಿದೆ.

ಬಿಪರ್​ಜಾಯ್ ಎಂದರೆ?

ಬೆಂಗಾಲಿ ಭಾಷೆಯಲ್ಲಿ ಬಿಪರ್​ಜಾಯ್ ಎಂದರೆ ವಿಪತ್ತು ಎಂದರ್ಥ. ಈ ಚಂಡಮಾರುತ ಹೆಚ್ಚು ಶಕ್ತಿಯುತವಾಗಿರುವ ಕಾರಣ ಬಿಪರ್​ಜಾಯ್ (ವಿಪತ್ತು) ಎಂದು ನಾಮಕರಣ ಮಾಡಲಾಗಿದೆ.

ಹಲವು ಮನೆಗಳಿಗೆ ಹಾನಿ

ಗುಜರಾತ್​ನ ಹಲವಾರು ಭಾಗಗಳಲ್ಲಿ ಗುರುವಾರ ಸಂಜೆ ವರೆಗೆ 20 ಮಿಲಿ ಮೀಟರ್​ಗಿಂತ ಹೆಚ್ಚು ಮಳೆಯಾಗಿದೆ. ಹುಲ್ಲುಹಾಸಿನ ಮನೆಗಳು, ಕಚ್ಚಾಮನೆಗಳಿಗೆ ವ್ಯಾಪಕ ಹಾನಿ ಉಂಟಾಗಿದೆ. ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಜನರಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಜಿಲ್ಲಾ ಅಧಿಕಾರಿಗಳು ವ್ಯಾಪಕ ಸಿದ್ಧತೆ ಕೈಗೊಂಡಿದ್ದಾರೆ. ರಾಜ್ಯದ ವಿದ್ಯುತ್ ಮತ್ತು ರಸ್ತೆ ಇಲಾಖೆಗಳ ಅಧಿಕಾರಿಗಳು ಗೊತ್ತುಪಡಿಸಿದ ಸ್ಥಳಗಳನ್ನು ತಲುಪಿದ್ದಾರೆ. ರೇಡಿಯೋ ಸೆಟ್​ಗಳು ಮತ್ತು ಉಪಗ್ರಹ ಫೋನ್​ಗಳನ್ನು ಹೊಂದಿದ ತಂಡಗಳನ್ನು ನಿಯೋಜಿಸಲಾಗಿದೆ.