ಬೆಳ್ತಂಗಡಿ/ಪುತ್ತೂರು: ಕಳೆದ ವರ್ಷ ಪಶ್ಚಿಮಘಟ್ಟದ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಹಲವೆಡೆ ಗುಡ್ಡ ಕುಸಿದು ಅಪಾರ ಹಾನಿ ಸಂಭವಿಸಿತ್ತು. ಈ ಬಾರಿ ಅದೇ ಪರ್ವತ ಶ್ರೇಣಿಯ ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಬಂಡೆ ಸಮೇತ ಗುಡ್ಡ ಕುಸಿದಿದೆ.
ದಿಡುಪೆ ಹೆಬ್ಬಾರ್ತಿಕಲ್ ಗುಡ್ಡದಲ್ಲಿ ಭಾನುವಾರ ಬೆಳಗ್ಗೆ 9.30ರ ಸುಮಾರಿಗೆ ಬಂಡೆ ಉರುಳಿದ ಸದ್ದು ನಾಲ್ಕೈದು ಕಿ.ಮೀ. ದೂರದ ಮಲವಂತಿಗೆ ಗ್ರಾಮಕ್ಕೆ ಕೇಳಿಸಿದ್ದು, ಮನೆಯಿಂದ ಹೊರಬಂದು ನೋಡಿದಾಗ ಹೊಗೆಯಾಡಿದ ವಾತಾವರಣ ಕಂಡಿದೆ. ಇಲ್ಲಿ 10ಕ್ಕೂ ಅಧಿಕ ಮನೆಗಳಿವೆ.
8 ದಿನಗಳಿಂದ ಘಾಟ್ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮೈದಾಡಿ ಘಾಟಿ ಕೆಳಗಿರುವ ಹೆಬ್ಬಾರ್ತಿಕಲ್ ಗುಡ್ಡದ ಮಣ್ಣು ಸಡಿಲಗೊಂಡು ಘಟನೆ ಸಂಭವಿಸಿರಬಹುದು. ಕಳೆದ ಬಾರಿ ಇದೇ ವ್ಯಾಪ್ತಿಯ ತುಲುಪುಲೆ ಬದಿ ಗುಡ್ಡ ಜರಿದು ತೋಟಗಳಿಗೆ ಹಾನಿಯಾಗಿತ್ತು ಎಂದು ಸ್ಥಳೀಯರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಅಪಾಯದ ಮುನ್ಸೂಚನೆ: ಮಳೆಯಿಂದಾಗಿ ಎಳನೀರು, ಕುದುರೆಮುಖ, ತಣ್ಣೀರುಬಾವಿ, ಮಿಕ್ಕಿ, ಕಡಮಗುಂಡಿ, ಎಮೈ ಗುಡ್ಡಪ್ರದೇಶದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಮಣ್ಣು ಸಡಿಲಗೊಂಡಿದೆ. ಜನವಸತಿ ಪ್ರದೇಶದಿಂದ ಬಹುದೂರ ಈ ಬೆಟ್ಟಗಳಿರುವುದರಿಂದ ಅಪಾಯ ಕಡಿಮೆ. ಮಳೆ ಜೋರಾಗಿ ಗುಡ್ಡಕುಸಿತ ಸಂಭವಿಸಿದರೆ ಮತ್ತೆ ದಿಡುಪೆ ಪ್ರದೇಶ ಕಳೆದ ವರ್ಷದಂತೆ ಅಪಾಯ ಎದುರಿಸುವ ಸಾಧ್ಯತೆ ಇದೆ.
ಮಳೆ ಜೋರಾಗಿ ಬಂದಾಗ ಪ್ರವಾಹ, ಗುಡ್ಡಕುಸಿತ ಸಾಮಾನ್ಯ. ಜನರ ಪ್ರಾಣ ರಕ್ಷಣೆ, ಸೂಕ್ತ ರಕ್ಷಣಾ ಕಾರ್ಯಕ್ಕಾಗಿ ತಾಲೂಕು ಆಡಳಿತ ಸರ್ವ ಸನ್ನದ್ಧವಾಗಿರುತ್ತದೆ. | ಮಹೇಶ್ ಬೆಳ್ತಂಗಡಿ ತಹಸೀಲ್ದಾರ್ ಘಾಟ್ ಪ್ರದೇಶದಲ್ಲಿ ಮಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಸುರಿದಿಲ್ಲ. ಆದರೂ ಗುಡ್ಡ, ಬಂಡೆ ಕುಸಿತವಾಗಿದೆ. ಕಳೆದ ವರ್ಷ ಕುಸಿದಿರುವ ಗುಡ್ಡ, ಬಂಡೆಗಳು ಈ ಬಾರಿಯ ಸಾಮಾನ್ಯ ಮಳೆಗೆ ಕುಸಿದಿರಬಹುದು. ಮಳೆ ಹೆಚ್ಚಾದರೆ ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಗುಡ್ಡ ಕುಸಿಯುವ ಪ್ರಮಾಣ ಹೆಚ್ಚಬಹುದು. | ದಿನೇಶ್ ಹೊಳ್ಳ ಪರಿಸರ ತಜ್ಞ https://www.vijayavani.net/volunteers-needed-for-clinical-trial-of-covid-19-vaccine-covaxin-in-aiims-delhi/