ಬೆಂಗಳೂರು: ಪ್ರತಿಪಕ್ಷಗಳ ಸಭಾತ್ಯಾಗ, ಆಕ್ರೋಶ, ಆರೋಪಗಳ ನಡುವೆಯೇ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಗುರುವಾರ ಅನುಮೋದನೆ ನೀಡಲಾಯಿತು. ಕಂದಾಯ ಸಚಿವ ಆರ್.ಅಶೋಕ್ ವಿಧೇಯಕ ಮಂಡಿಸಿದಾಗ, ಕಾಂಗ್ರೆಸ್-ಜೆಡಿಎಸ್ ಸಸಸ್ಯರು ಇದು ಢೋಂಗಿ ಉದ್ಯಮಿಗಳಿಗೆ, ರಿಯಲ್ ಎಸ್ಟೇಟ್ ಕುಳಗಳಿಗೆ ಅವಕಾಶ ಕಲ್ಪಿಸಲಿದೆ. ಇದನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಸರ್ಕಾರದ ಎಷ್ಟೇ ಸಮರ್ಥನೆಗಳ ನಡುವೆಯೂ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿ ವಿರೋಧ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆರ್.ವಿ.ದೇಶಪಾಂಡೆ ಮಾತನಾಡಿ, ಕೈಗಾರಿಕೋದ್ಯಮಿಗಳು ಬಳಸಿದ ಭೂಮಿ ಮಾರಾಟಕ್ಕೆ ಮಾತ್ರ ನೀಡ ಬೇಕು. ಅದರ ಬದಲು ಇಡೀ ಜಮೀನನ್ನೇ ಮಾರಾಟಕ್ಕೆ ಅವಕಾಶ ನೀಡಬಾರದು ಎಂದರು. ರಿಯಲ್ ಎಸ್ಟೇಟ್ಗೆ
ಪರೋಕ್ಷವಾಗಿ ಲಾಭ ಮಾಡಲು ಮಾಡುತ್ತಿರುವ ತಿದ್ದುಪಡಿ ಇದಾಗಿದೆ. ಇದರಿಂದ ಕೈಗಾರಿಕೆಗಳಿಗೆ ಯಾವುದೇ ಲಾಭವಾಗುವುದಿಲ್ಲ. ಜಮೀನು ಮಾರಾಟ ಮಾಡಿರುವ ರೈತನಿಗೂ ಲಾಭವಾಗುವುದಿಲ್ಲ ಎಂದು ರಮೇಶ್ಕುಮಾರ್ ಹೇಳಿದರು. ಆಗ ಆರ್.ಅಶೋಕ್, ಕೈಗಾರಿಕೆಗಳಿಗೆ ನೀಡುವ ಭೂ ಮಂಜೂರಾತಿ ವಿಳಂಬ ತಪ್ಪಿಸಲು ಕಾಯ್ದೆಯ ನಿಯಮ ಸರಳೀಕರಣ ಮಾಡಲು ವಿಧೇಯಕ ಮಂಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
109ನೇ ಪ್ರಕರಣದಡಿ ವಿನಾಯಿತಿ ಪಡೆದ ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಬಳಸಬಹುದು ಎಂದು ಅನುಮತಿಸ ಲಾಗಿದೆಯೋ ಆ ಉದ್ದೇಶಕ್ಕಾಗಿ 7 ವರ್ಷಗಳ ಅವಧಿಗಾಗಿ ಬಳಸಿದ ತರುವಾಯ ಆರ್ಥಿಕ ಮುಗ್ಗಟ್ಟು ನಿಭಾಯಿಸುವದಕ್ಕಾಗಿ ಹಿಂದೆ ಅನುಮತಿ ಸಲಾದ ಅದೇ ಉದ್ದೇಶಕ್ಕೆ ಇತರ ಕಂಪನಿ ಅಥವಾ ಸಂಸ್ಥೆಗೆ ಮಾರಾಟ ಮಾಡಲು ಅನುಮತಿ ನೀಡುವುದು ತಿದ್ದುಪಡಿ ವಿಧೇಯಕದ ಉದ್ದೇಶವಾಗಿದೆ.
ಬಿಲ್ ತಿದ್ದುಪಡಿಗೆ ಸೂಚನೆ ನೀಡಿದ್ದ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್, ನಾನು ಹಿಂದೆ ಶಾಸಕನಾಗಿದ್ದಾಗ ಈ ತಿದ್ದುಪಡಿ ಬಿಲ್ಗೆ ಸೂಚನೆ ಕೊಟ್ಟಿದ್ದೆ. ಈಗ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಜಾಗತೀಕರಣ ಸಂದರ್ಭದಲ್ಲಿ ಇಂತಹ ಬಿಲ್ ಅವಶ್ಯಕತೆಯಿದೆ ಎಂದು ನನಗನ್ನಿಸುತ್ತದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಮ್ಮ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದು ಬಿಲ್ ಪರ ಪರೋಕ್ಷ ಮಾತುಗಳನ್ನಾಡಿದರು.